Advertisement
ರಸ್ತೆ ಅವ್ಯವಸ್ಥೆಯಿಂದ ಸವಾರರು ನಿತ್ಯ ಸಂಕಟ ಅನುಭವಿಸುತ್ತಿದ್ದಾರೆ. ಅಲ್ಲಲ್ಲಿ ಇರುವ ಹೊಂಡಗುಂಡಿಗಳು ಸುಗಮ ಸಂಚಾರಕ್ಕೆ ಬ್ರೇಕ್ ಹಾಕುತ್ತಿವೆ. ಹೊಂಡಗುಂಡಿಗಳನ್ನು ತಪ್ಪಿಸಿಕೊಂಡು ಸಂಚರಿಸುವುದೇ ಸಾಹಸ. ಸಾರ್ವಜನಿಕರ ಸುಗಮ ಸಂಚಾರಕ್ಕೆ ಇರುವ ಸರ್ವಿಸ್ ರಸ್ತೆ ಇದೀಗ ಅಪಾಯಕಾರಿಯಾಗಿ ಪರಿಣಮಿಸಿದೆ.
ಕೇರಳ, ತಲಪಾಡಿ, ಉಳ್ಳಾಲ, ಮುಡಿಪು ಇತ್ಯಾದಿ ಭಾಗಗಳಿಂದ ಮಂಗಳೂರು ನಗರಕ್ಕೆ ಆಗಮಿಸುವ ವಾಹನಗಳು ಪಂಪ್‌ವೆಲ್ ಸರ್ವಿಸ್ ರಸ್ತೆಯನ್ನು ಅವಲಂಬಿಸಿವೆ. ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ಗಳು ಈ ರಸ್ತೆಯಲ್ಲಿ ಓಡಾಡುವ ಕಾರಣದಿಂದಾಗಿ ನಿತ್ಯ ಟ್ರಾಫಿಕ್ ಬಿಸಿ ಸವಾರರಿಗೆ ತಪ್ಪಿದ್ದಲ್ಲ. ಬೆಳಗ್ಗಿನ ಸಮಯದಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುವ ದೃಶ್ಯ ಸಾಮಾನ್ಯವಾಗಿದೆ. ದ್ವಿಚಕ್ರ ಹಾಗೂ ಇತರ ವಾಹನ ಸವಾರರು ಸಂಚಾರ ದಟ್ಟಣೆಯಲ್ಲಿ ಸಿಲುಕಿ ಪರದಾಡುವುದು ನಿತ್ಯ ಕಂಡುಬರುತ್ತಿದೆ. ಈ ಹಿಂದೆ ಕೆಲವು ಆ್ಯಂಬುಲೆನ್ಸ್‌ಗಳು ಟ್ರಾಫಿಕ್‌ನಲ್ಲಿ ಸಿಲುಕಿ ಪರದಾಡಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮಳೆಗಾಲದಲ್ಲಿ ಸಂಚಾರ ದುಸ್ಥರ!
ಬಹುತೇಕ ಮಳೆಗಾಲದಲ್ಲಿ ರಸ್ತೆಗಳ ನೈಜ ಬಣ್ಣ ಬಯಲಾಗುತ್ತದೆ. ಪಂಪ್‌ವೆಲ್ ಸರ್ವಿಸ್ ರಸ್ತೆಯಲ್ಲೂ ಪ್ರತೀ ವರ್ಷ ಹೊಂಡ ಗುಂಡಿಗಳ ದರ್ಶನವಾಗುತ್ತಿದ್ದು, ಶಾಶ್ವತ ಪರಿಹಾರ ಮರಿಚಿಕೆಯಾಗಿದೆ. ಕೆಲವೊಂದು ಭಾಗಗಳಲ್ಲಿ ತೇಪೆ ಕಾರ್ಯ ನಡೆಸಲಾಗಿದೆ. ಆದರೆ ಮಳೆಗೆ ಅವೆಲ್ಲವೂ ಮಾಯವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
Related Articles
ಪಂಪ್‌ವೆಲ್ ಸರ್ವಿಸ್ ರಸ್ತೆಯಲ್ಲಿ ಅಲ್ಲಲ್ಲಿ ನಿರ್ಮಾಣವಾಗಿರುವ ಹೊಂಡಗುಂಡಿಗಳಿಂದಾಗಿ ರಾತ್ರಿ ಸಂಚಾರ ಅಪಾಯಕಾರಿ. ಹೊಂಡ ಗುಂಡಿಗಳು ಗೋಚರಕ್ಕೆ ಬರದೆ ಸವಾರರಿಗೆ ಸಮಸ್ಯೆಯಾಗುತ್ತಿದೆ. ಈ ರಸ್ತೆಯಲ್ಲಿರುವ ಅಂಡರ್‌ಪಾಸ್‌ನ ಎರಡೂ ಬದಿಗಳಲ್ಲೂ ಹೊಂಡಗುಂಡಿಗಳು ನಿರ್ಮಾಣವಾಗಿವೆ. ಅಂಡರ್ ಪಾಸ್‌ನಿಂದ ಬರುವ ವಾಹನಗಳು ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿವೆ. ಏಕಾಏಕಿ ವಾಹನಗಳು ಮುನ್ನುಗ್ಗುವುದು ಅಪಾಯಕಾರಿಯಾಗಿದೆ.
Advertisement