Advertisement

“ಆ”ಒಂದು ಪುಸ್ತಕ ಅವರನ್ನು ಬದಲಾಯಿಸಿತು…ಸಾವಯವ ಕೃಷಿಯಲ್ಲಿ ಖುಷಿ ಕಂಡ ದಂಪತಿ

06:01 PM Mar 05, 2022 | Team Udayavani |

ಇಬ್ಬರದು ಸಮರಸ ದಾಂಪತ್ಯ. ಗಂಡ ಪುದುಚೇರಿ ವಿವಿಯಲ್ಲಿ ಎಲೆಕ್ಟ್ರಾನಿಕ್‌ ಮೀಡಿಯಾದಲ್ಲಿ ವ್ಯಾಸಂಗ ಮಾಡಿ, ಎಂಎನ್‌ಸಿ ಕಂಪೆನಿಯಲ್ಲಿ ಕೈತುಂಬಾ ಸಂಬಳದ ಉದ್ಯೋಗ. ಇನ್ನು ಹೆಂಡತಿ ಎಂಬಿಬಿಎಸ್‌ ವೈದ್ಯ. ಇವರಿಬ್ಬರ ನೆಮ್ಮದಿಯ ಜೀವನಕ್ಕೆ ದುಡ್ಡು, ಬಂಗಲೆ ಎಲ್ಲ ಇತ್ತಾದರೂ ಇವರು ಖುಷಿ ಕಂಡಿದ್ದು ಮಾತ್ರ ಸಾವಯವ ಕೃಷಿಯಲ್ಲಿ. ತಮಿಳುನಾಡಿನ ಆ ದಂಪತಿಗಳೇ ಹರಿವರ್ಥ ಪ್ರಜೀತ್‌ ಮತ್ತು ಡಾ| ಮಂಗಯಾರ್ಕೆರಸೇ.

Advertisement

ಎಂಎನ್‌ಸಿ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಹರಿವರ್ಥ ಪ್ರಜೀತ್‌ ಒಮ್ಮೆ ಅನಾರೋಗ್ಯಕ್ಕೆ ತುತ್ತಾದರು. ಅವರು ಬದುಕುಳಿಯುವುದೇ ದೊಡ್ಡದಾಗಿತ್ತು. ಆದರೂ ಅದೇನೋ ದೊಡ್ಡ ಪವಾಡವೋ ಅಥವಾ ವೈದ್ಯರ ಚಮತ್ಕಾರವೋ ಗೊತ್ತಿಲ್ಲ ಪ್ರಜೀತ್‌ ಆರೋಗ್ಯದಲ್ಲಿ ಸುಧಾರಣೆ ಕಂಡಿತು. ಕೊನೆಗೆ ಸಂಪೂರ್ಣವಾಗಿ ಗುಣಮುಖರಾದರು. ಈ ಸಮಯವೇ ಪ್ರಜೀತ್‌ ಅವರಲ್ಲಿ ಒಂದು ಮುಖ್ಯ ಬದಲಾವಣೆ ಕಂಡುಬಂತು. ಅವರಿಗೆ ಪ್ರಕೃತಿಯ ಮಡಿಲಲ್ಲಿ ನೆಮ್ಮದಿಯ ಜೀವನ ಮಾಡಬೇಕು. ಈ ಬದುಕಿನ ಜಂಜಡಗಳು ಬೇಡ ಎಂದು ನಿರ್ಧರಿಸಿದ್ದರು. ಹಾಗಾಗಿ 2015ರಲ್ಲಿ ತಮ್ಮ ಕೈತುಂಬಾ ಸಂಬಳದ ಹುದ್ದೆಗೆ ರಾಜೀನಾಮೆ ನೀಡಿ ತಮ್ಮ ಮುಂದಿನ ಖುಷಿ ಕಾಣಲು ಕೃಷಿಯುತ್ತ ಒಲುವು ತೋರಿಸಿದರು.

ರಾಜೀನಾಮೆ ನೀಡಿದ ಬಳಿಕ ಪ್ರಜೀತ್‌ ಅವರು ಪತ್ನಿ ಡಾ| ಮಂಗಯಾರ್ಕೆರಸೇ ಅವರ ಗ್ರಾಮವಾದ ತಮಿಳುನಾಡಿನ ವಿಲ್ಲಾಪುರಂ ಜಿಲ್ಲೆಯ ರಾಮನಾಥಪುರಮ್‌ ಎಂಬಲ್ಲಿ ಮೂರು ಎಕ್ರೆ ಭೂಮಿಯಲ್ಲಿ ಸಾವಯವ ಕೃಷಿಗೆ ಮುಂದಾದರು. ಇನ್ನು ವಿಶೇಷ ಎಂದರೆ, ಇವರು ತಮ್ಮ ಕರ್ಮಭೂಮಿಯಲ್ಲಿ ಫ‌ುಕೋವಾಕೋ ಅವರ ಕೃಷಿ ಮಾದರಿಗೆ ಮುಂದಾಗಿರುವುದು. ಇದು ನೈಸರ್ಗಿಕ ಮತ್ತು ಸಾವಯವ ಕೃಷಿ ವಿಧಾನವಾಗಿದೆ. ಇವರು ಕೃಷಿಯಲ್ಲಿ ಯಾವುದೇ ರಾಸಾಯನಿಕ ಗೊಬ್ಬರ, ಕ್ರಿಮಿನಾಶಗಳನ್ನು ಬಳಸುವುದಿಲ್ಲ. ಹೀಗಾಗಿ ಇದು ಸ್ಥಳೀಯವಾಗಿ ಮಾದರಿ ಕೃಷಿಯಾಗಿದೆ ಎಂದು ಹೇಳಬಹುದು.

ಆ ಒಂದು ಪುಸ್ತಕ ಅವರನ್ನು ಬದಲಾಯಿಸಿತು!
ಪ್ರಜೀತ್‌ ಅವರು ತಮ್ಮ ವೃತ್ತಿಯನ್ನು ತ್ಯಜಿಸುವ ನಿರ್ಧಾರಕ್ಕೆ ಬಂದ ಸಮಯದಲ್ಲಿ ಅವರು ಮಸಾನೊಬು ಫ‌ುಕಾವೋಕಾ ಅವರ “ದಿ ಒನ್‌ ಸ್ಟ್ರಾ ರೆವೆಲ್ಯೂಷನ್‌; ಆನ್‌ ಇಂಟ್ರೊಡಕ್ಷನ್‌ ಟು ನ್ಯಾಚುರಲ್‌ ಫಾರ್ಮಿಂಗ್‌ ‘ಎಂಬ ಪುಸ್ತಕವನ್ನು ಓದಿದರು. ಈ ಪುಸ್ತಕ ಅವರನ್ನು ಮತ್ತಷ್ಟು ಉತ್ಸಾಹಿಯಾಗಿ ಮಾಡಿತು. ಇದೇ ಸ್ಫೂರ್ತಿಯಲ್ಲಿ ಅವರು 2017ರಿಂದ ಸಾವಯವ ಕೃಷಿ ಮಾಡಲು ನಿರ್ಧರಿಸಿದ್ದರು.

ನೈಸರ್ಗಿಕ ಬಿತ್ತನೆ
ಇವರು ತಮ್ಮ ಕೃಷಿ ಭೂಮಿಯಲ್ಲಿ ಬಿತ್ತನೆಗೆ ನಿರ್ದಿಷ್ಟ ಮಾದರಿಗಳನ್ನು ಅನುಸರಿಸದೇ ಸಾಂಪ್ರಾದಾಯಿಕ ಮಾದರಿಯನ್ನು ಅನುಸರಿಸುತ್ತಿದ್ದಾರೆ. ಸ್ಥಳೀಯ ಪ್ರಭೇದ ಬೀಜಗಳಿಗೆ ಇದೇ ಮಾದರಿ ಉತ್ತಮವಾಗಿದ್ದು, ಅಲ್ಲದೇ ಒಳ್ಳೆಯ ಇಳುವರಿ ಪಡೆಯಬಹುದು ಎಂಬುದು ಅವರ ನಂಬಿಕೆ.

Advertisement

ಪ್ರಜೀತ್‌ ಅವರು ತಮ್ಮ ತುಂಡು ಭೂಮಿಯಲ್ಲಿ ಮೊದಲು ಕಲ್ಲಂಗಡಿ ಹಣ್ಣನ್ನು ಬೆಳೆಯಲು ಮುಂದಾದರು. ಆದರೆ, ಮೊದಮೊದಲಿಗೆ ಕಲ್ಲಂಗಡಿ ಬೀಜ ಕೊಯ್ಲು ಮಾಡಿದಾಗ, ಅವುಗಳಿಗೆ ಕಾಡುಹಾಂದಿಗಳ ಹಾವಳಿ ಅಧಿಕವಾಗಿತ್ತು. ಇದನ್ನು ನಿರ್ವಹಣೆ ಮಾಡುವುದು ಕೂಡ ಅವರಿಗೆ ಸವಾಲಾಗಿತ್ತು. ಅದಕ್ಕಾಗಿ ಅವರು ತಮ್ಮ ಜಮೀನಿನಲ್ಲಿ ಹಾಳಾದ ಕಲ್ಲಂಗಡಿ ಬೀಜಗಳನ್ನು ಕಾಡುಹಂದಿಗಳ ತಿನ್ನಲು ಬಿಟ್ಟರು. ಆಗ ಹಾಳಾದ ಕಲ್ಲಂಗಡಿ ಬೀಜ ತಿಂದ ಕಾಡುಹಂದಿಗಳು ಹಿಕ್ಕೆಯನ್ನು ಅದೇ ಜಮೀನಿನಲ್ಲಿ ಬಿಡುತ್ತಿದ್ದವು, ಇದು ಅವರಿಗೆ ವರವಾಗಿ ಪರಿಣಮಿಸಿತು. ಇದರಿಂದ ವರ್ಷದೊಳಗೆ ಅವರು ಉತ್ತಮವಾದ ಕಲ್ಲಂಗಡಿ ಸಸಿಗಳು ಬೆಳೆದು ನಿಂತಿರುವುದು ಕಂಡು ಖುಷಿಪಟ್ಟರು. ಆದರೆ ಇದು ಸ್ಥಳೀಯರಿಗೆ ಆಶ್ಚರ್ಯವಾಗಿ ಕಂಡಿತ್ತು.

ಇನ್ನು ಅವರು ಆಳವಾದ ಉಳುಮೆ ಮಾಡುವುದಿಲ್ಲ. ಹಸಿಗೊಬ್ಬರ ಮತ್ತು ಒಣಗಿದ ಎಲೆಗಳನ್ನು ಬಳಸಿ ಮಣ್ಣಿನಲ್ಲಿ ಉಳುಮೆ ಮಾಡುತ್ತಾರೆ. ಈ ಪ್ರಕ್ರಿಯೆಯಿಂದ ಮಣ್ಣಿನ ಸವಕಳಿ ತಡೆಯಬಹುದಾಗಿದೆ. ಉಳುಮೆ ಮಾಡಿದ ಬಳಿಕ ಅಗತ್ಯ ಪೋಷಕಾಂಶಗಳನ್ನು ಒದಗಿಸಲಾಯಿತು. ಈ ನಡುವೆ ಅನೇಕ ರೈತರನ್ನು, ಕೃಷಿ ಸಂಪನ್ಮೂಲ ವ್ಯಕ್ತಿಗಳನ್ನು ಭೇಟಿ ಮಾಡಿ ಸಲಹೆ ಪಡೆದು, ಅವುಗಳನ್ನು ಕೃಷಿಯಲ್ಲಿ ಅಭಿವೃದ್ಧಿಗೊಳಿಸಿದ ಪರಿಣಾಮವೇ ಇಂದು ಅವರ ಕೃಷಿ ಮಾದರಿ ಯಶಸ್ವಿಯಾಗಲು ಕಾರಣವಾಗಿದೆ.

ಕೋವಿಡ್‌ ಕಾಲದಲ್ಲೂ ಸುಖೀ ಜೀವನ
ಕೋವಿಡ್‌ ಕಾರಣದಿಂದಾಗಿ ಇಡೀ ಜಗತ್ತಿನ ನೆಮ್ಮದಿ ಕಳೆದುಕೊಂಡಿದ್ದಾರೆ. ಆದರೆ ಈ ದಂಪತಿ ಮಾತ್ರ ಅಷ್ಟೇ ಉತ್ಸಾಹ, ನೆಮ್ಮದಿಯಿಂದ ಬದುಕುತ್ತಿದ್ದಾರೆ. ಕಾಡಿನ ಮಧ್ಯೆ, ನೈಸರ್ಗಿಕವಾದ ಗಾಳಿ, ಸಾವಯವ ಆಹಾರ ಸೇವಿಸಿ ನಾವು ಆರೋಗ್ಯದಿಂದ್ದೇವೆ. ಈ ಕೃಷಿ ವಿಧಾನವೂ ಶೇ. 100 ರಷ್ಟು ನೈಸರ್ಗಿಕವಾಗಿದ್ದು, ಹೀಗಾಗಿ ನಮಗೆ ಯಾವುದೇ ಕಾಣದ ವೈರಸ್‌ಗಳ ಬಗ್ಗೆ ಭಯವಿಲ್ಲ ಎಂಬುದು ದಂಪತಿಯ ಮನದಾಳದ ಮಾತು.

ಇವರ ಜಮೀನಲ್ಲಿ ಪಕ್ಷಿಗಳು ಮತ್ತು ಕೀಟಗಳಿಗೆ ಕೂಡ ಆವಾಸ ಸ್ಥಾನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದು ಇವರ ಮಾದರಿ ಜೀವನ. ಅಲ್ಲದೇ ಸ್ಥಳೀಯವಾಗಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಹಣವೇ ಇಡೀ ಜೀವನದಲ್ಲಿ ತೃಪ್ತಿ ನೀಡುವುದಿಲ್ಲ ಬದಲಾಗಿ ಪ್ರಕೃತಿ ನಮಗೆ ಬಹಳಷ್ಟು ಸುಖ, ಶಾಂತಿ, ನೆಮ್ಮದಿ ನೀಡುತ್ತದೆ. ಸಾವಯವ ಕೃಷಿಯಿಂದ ಸ್ವಾವಲಂಬಿ ಜೀವನ ನಡೆಸಬಹುದು ಎಂದು ಯುವ ದಂಪತಿಗಳು ನಮಗೆ ತೋರಿಸಿಕೊಟ್ಟಿದ್ದಾರೆ ಎಂಬುದು ಗಮನಾರ್ಹವಾದ ಸಂಗತಿ.

ಶಿವ

Advertisement

Udayavani is now on Telegram. Click here to join our channel and stay updated with the latest news.

Next