Advertisement

ಥರಾವರಿ ಪೂರಿ…

05:02 AM Jul 01, 2020 | Lakshmi GovindaRaj |

ಇದು ಮನೆಯಲ್ಲಿಯೇ ವೆರೈಟಿ ತಿನಿಸು ಮಾಡುವ ಸಮಯ. ಹೋಟೆಲಿನ ರುಚಿಯನ್ನು ಅಡುಗೆ ಮನೆಗೆ ತಂದು, ಮನೆ ಮಂದಿಯ ಬಾಯಿ ರುಚಿ ತಣಿಸುವ ಕಾಲ. ಪೂರಿ ಅಂದಾಕ್ಷಣವೇ ಅದರ ಆಕಾರ ಕಣ್ಮುಂದೆ ಬಂದು ನಿಲ್ಲುತ್ತದೆ.  ಬೀಟ್‌ರೂಟ್‌, ಉದ್ದಿನ ಬೇಳೆ, ಆಲೂ ಪೂರಿಯ ಬಗ್ಗೆ ಗೊತ್ತಿದೆಯಾ? ಇಲ್ಲಿದೆ, ಬಹುಬಗೆ ಪೂರಿ ತಯಾರಿಯ ಪರಿಚಯ.

Advertisement

ಬೀಟ್‌ರೂಟ್‌
ಬೇಕಾಗುವ ಸಾಮಗ್ರಿ: ಬೀಟ್‌ ರೂಟ್-1, ಗೋಧಿ ಹಿಟ್ಟು- 2 ಕಪ್‌, ಉಪ್ಪು ರುಚಿಗೆ, ಅಜವಾನ/ ಓಂ ಕಾಳು- 1/4 ಚಮಚ, ಅಚ್ಚ ಖಾರದ ಪುಡಿ, ಗರಂಮಸಾಲೆ- 1/4 ಚಮಚ, ತುಪ್ಪ- 1 ಚಮಚ, ಕರಿಯಲು ಎಣ್ಣೆ.

ಮಾಡುವ ವಿಧಾನ: ಬೀಟ್‌ ರೂಟ್‌ನ ಸಿಪ್ಪೆ ತೆಗೆದು ತುರಿದು, ಒಂದು ಲೋಟ ನೀರು ಹಾಕಿ ಬೇಯಿಸಿ. ಅದು ಬೆಂದ ನಂತರ ನೀರನ್ನು ಬೇರೆಯಾಗಿ ಇಟ್ಟು, ಬೀಟ್ರೂಟ್‌ ಅನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿ. ಬಾಣಲೆಯಲ್ಲಿ ಗೋಧಿ ಹಿಟ್ಟನ್ನು ಹಾಕಿ ಅದರದಲ್ಲಿ ಅಜವಾನ, ಅಚ್ಚಖಾರದ ಪುಡಿ, ಗರಂಮಸಾಲೆ, ಉಪ್ಪು, ತುಪ್ಪ ಹಾಕಿ ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ ಸ್ವಲ್ಪ ಸ್ವಲ್ಪವೇ ಬಿಟ್‌ರೂಟ್‌ ಬೇಯಿಸಿದ ನೀರನ್ನು ಮತ್ತು ರುಬ್ಬಿದ ಮಿಶ್ರಣವನ್ನು ಹಾಕಿ, ಕಲಸಿ. ಹತ್ತು  ನಿಮಿಷ ಬಿಟ್ಟು ಹಿಟ್ಟನ್ನು ಚಿಕ್ಕ ಚಿಕ್ಕ ಉಂಡೆ ಮಾಡಿ, ಪೂರಿ ಲಟ್ಟಿಸಿ, ಎಣ್ಣೆಯಲ್ಲಿ ಕರಿಯಿರಿ.

ಉದ್ದಿನ ಪೂರಿ
ಬೇಕಾಗುವ ಸಾಮಗ್ರಿ: ಉದ್ದಿನ ಬೇಳೆ- 100 ಗ್ರಾಂ, ಗೋಧಿ ಹಿಟ್ಟು ಅಥವಾ ಮೈದಾ- 250 ಗ್ರಾಂ, ಜೀರಿಗೆ- 1/4 ಚಮಚ, ಸಕ್ಕರೆ ಪುಡಿ- 1 ಚಮಚ, ಉಪ್ಪು, ಎಣ್ಣೆ.

ಮಾಡುವ ವಿಧಾನ: ಉದ್ದಿನ ಬೇಳೆಯನ್ನು 7-8 ಗಂಟೆ ನೀರಿನಲ್ಲಿ ನೆನೆಸಿ, ಸ್ವಲ್ಪ ನೀರು ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ನಂತರ, ಗೋಧಿ ಹಿಟ್ಟು/ ಮೈದಾ ಹಿಟ್ಟು, ಜೀರಿಗೆ, ಉಪ್ಪು, ಎರಡು ಚಮಚ ಎಣ್ಣೆ, ಸಕ್ಕರೆ ಹಾಕಿ ಮಿಶ್ರಣ ಮಾಡಿ.  ರುಬ್ಬಿದ ಉದ್ದಿನ ಬೇಳೆಯನ್ನು ಹಿಟ್ಟಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಪೂರಿ ಹಿಟ್ಟಿನ ಹದಕ್ಕೆ ಎಷ್ಟು ನೀರು ಬೇಕೋ ಅಷ್ಟನ್ನು ಹಾಕಿ ಗಟ್ಟಿಯಾಗಿ ಕಲಸಿ. ಇಪ್ಪತ್ತು ನಿಮಿಷದ ನಂತರ ಪೂರಿ ಲಟ್ಟಿಸಿ, ಎಣ್ಣೆಯಲ್ಲಿ ಕರಿಯಿರಿ.

Advertisement

ಆಲೂ ಪೂರಿ
ಬೇಕಾಗುವ ಸಾಮಗ್ರಿ: ಗೋಧಿ ಹಿಟ್ಟು- 2 ಕಪ್‌, ಆಲೂಗಡ್ಡೆ ಬೇಯಿಸಿದ್ದು 2, ಚಿರೋಟಿ ರವೆ- 2 ಚಮಚ, ಹಸಿ ಮೆಣಸು-1, ಕೊತ್ತಂಬರಿ ಸೊಪ್ಪು, ಜೀರಿಗೆ- 1 ಚಮಚ, ಎಳ್ಳು- 1 ಚಮಚ, ಉಪ್ಪು, ಖಾರದ ಪುಡಿ- 1/2 ಚಮಚ, ಅರಿಶಿನ,  ಅಜವಾನ- 1/2 ಚಮಚ, ಕರಿಯಲು ಎಣ್ಣೆ.

ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ಗೋಧಿ ಹಿಟ್ಟನ್ನು ಹಾಕಿ, ಬೇಯಿಸಿದ ಆಲೂಗಡ್ಡೆಯನ್ನು ತುರಿದು ಅದಕ್ಕೆ ಸೇರಿಸಿ. ಈ ಹಿಟ್ಟಿನ ಜೊತೆಗೆ ಉಪ್ಪು, ಖಾರದಪುಡಿ, ಎಳ್ಳು, ಅರಿಶಿನ, ಜೀರಿಗೆ, ಅಜವಾನ, ಹೆಚ್ಚಿದ ಹಸಿ ಮೆಣಸು,  ಚಿರೋಟಿ ರವೆ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಮಿಶ್ರಣ ಮಾಡಿ. ಸ್ವಲ್ಪ ಸ್ವಲ್ಪ ನೀರು ಹಾಕಿ ಕಲಸಿ. (ಆಲೂಗಡ್ಡೆಯಲ್ಲಿ ನೀರಿನಾಂಶ ಇರುವುದರಿಂದ ಜಾಸ್ತಿ ನೀರು ಬೇಡ) ನಂತರ ಎರಡು ಚಮಚ ಎಣ್ಣೆ ಹಾಕಿ ಮಿಶ್ರಣ ಮಾಡಿ. ಕಲಸಿದ ಹಿಟ್ಟಿನ  ಮೇಲೆ ಒದ್ದೆ ಬಟ್ಟೆಯನ್ನು ಹದಿನೈದು ನಿಮಿಷ ಹಾಕಿ ಮುಚ್ಚಿಡಿ. ನಂತರ ಆ ಹಿಟ್ಟಿನಿಂದ ಉಂಡೆ ಮಾಡಿ, ಪೂರಿಗಳನ್ನು ಲಟ್ಟಿಸಿ, ಕರಿಯಿರಿ.

Advertisement

Udayavani is now on Telegram. Click here to join our channel and stay updated with the latest news.

Next