ನೆಲ್ಲೂರು : ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಬಂಡಕಿಂಡ ಪಲ್ಲೆ ಎಂಬ ಪುಟ್ಟ ಗ್ರಾಮದ ಹತ್ತೆಕರೆ ಕೃಷಿ ಭೂಮಿಯಲ್ಲಿ ಈಗ ಭರ್ಜರಿ ತರಕಾರಿ ಫಸಲು ಪಡೆಯುವ ಪರಿಶ್ರಮಿ ರೈತ ಚೆಂಚು ರೆಡ್ಡಿ ತನ್ನ ಈ ಸಾಧನೆಗೆ “ನೀಲಿ ಚಿತ್ರಗಳ ಜನಪ್ರಿಯ ತಾರೆ ಸನ್ನಿ ಲಿಯೋನ್’ಗೆ ಕೃತಜ್ಞನಾಗಿದ್ದಾನೆ.
ಸನ್ನಿ ಲಿಯೋನ್‌ಗೂ ಹಳ್ಳಿ ಕೃಷಿಕ ಚೆಂಚು ರೆಡ್ಡಿಗೂ ಎತ್ತಣಿಂದೆತ್ತ ಸಂಬಂಧವಯ್ಯ ಎಂದು ನೀವು ಮೂಗಿನ ಮೇಲೆ ಬೆರಳೇರಿಸಬೇಡಿ. ನಿಜಕ್ಕಾದರೆ ಅಂತಹ ಯಾವ ಸಂಬಂಧವೂ ಇವರಿಬ್ಬರ ನಡುವೆ ಇಲ್ಲ.
ಪ್ರತೀ ವರ್ಷ ಉತ್ತಮ ತರಕಾರಿ ಫಸಲು ಪಡೆಯಲು ಕಠಿನವಾಗಿ ಪರಿಶ್ರಮಿಸುವ ಚೆಂಚು ರೆಡ್ಡಿ ಯ ಹೊಲದಲ್ಲಿ ಫಲ ಬರುವಾಗ ಎಲ್ಲ ದಾರಿಹೋಕರ ಕಣ್ಣು ಆ ಫಲದ ಮೇಲೇ ನೆಟ್ಟಿರುವುದು ಸಹಜ ಮತ್ತು ಸಾಮಾನ್ಯವೇ ಆಗಿತ್ತು. ಆದರೆ ಹಾಗೆ ಆಸೆಯಿಂದ ನೋಡುವವರ ಕೆಟ್ಟ ದೃಷ್ಟಿ ಬಿದ್ದು ತನಗೆ ಫಸಲು ಖೋತಾ ಆಗುತ್ತಿದ್ದುದು ಚೆಂಚು ರೆಡ್ಡಿ ವರ್ಷಂಪ್ರತಿಯ ಕಹಿ ಅನುಭವ.
ಇದಕ್ಕೆ ಆತನೊಂದು ಉಪಾಯ ಮಾಡಿದ. ಬಿಕಿನಿ ಉಡುಪಿನಲ್ಲಿ ಅತ್ಯಾಕರ್ಷಕ ದೇಹ ಸೌಂದರ್ಯವನ್ನು ಪ್ರದರ್ಶಿಸುವ ಸನ್ನಿ ಲಿಯೋನ್‌ನ ಆಳೆತ್ತರದ ಫ್ಲೆಕ್ಸ್ ಬೋರ್ಡನ್ನು ಚೆಂಚು ರೆಡ್ಡಿ ತನ್ನ ಹೊಲದ ಎದುರು ಭಾಗದಲ್ಲಿ ಏರಿಸಿದ !
ಈಗ ನೋಡಿ ಏನು ಅದ್ಭುತ; ಎಂತಹ ಮಾಯೆ ! ಈ ಅತ್ಯಾಕರ್ಷಕ ಫ್ಲೆಕ್ಸ್ ಬೋರ್ಡ್ ಹಾಕಿದ್ದೇ ತಡ, ಈಗ ಯಾರ ದೃಷ್ಟಿಯೂ ಚೆಂಚು ರೆಡ್ಡಿಯ ಹೊಲದ ಮೇಲಾಗಲೀ, ಅಲ್ಲಿನ ಫಸಲಿನ ಮೇಲಾಗಲೀ ಬೀಳುವುದೇ ಇಲ್ಲ. ಪರಿಣಾಮವಾಗಿ ಚೆಂಚು ರೆಡ್ಡಿಗೆ ಈಗ ಕೈತುಂಬ ಪುಷ್ಕಳ ತರಕಾರಿ ಫಸಲು ಬರುತ್ತದೆ; ಹಾಗೆಯ ಕೈತುಂಬ ಕಾಸು ಕೂಡ !
ಹಾಗಾಗಿ ಚೆಂಚು ರೆಡ್ಡಿ ಈಗ ತನ್ನ ಕೃಷಿ ಲಾಭಕ್ಕಾಗಿ ಸನ್ನಿ ಲಿಯೋನ್‌ಗೆ ತುಂಬ ಕೃತಜ್ಞತೆ ಹೇಳುತ್ತಾನೆ. ಈ ಟ್ರಿಕ್ ಹೀಗೆಯೇ ಮುಂದುವರಿಸುವ ಆಲೋಚನೆ ಚೆಂಚು ರೆಡ್ಡಿಯದ್ದು; ಹಾಗಾಗಿ ಆತ ಸನ್ನಿ ಲಿಯೋನ್ ಳ ಇನ್ನೂ ಆಕರ್ಷಕ ಚಿತ್ರಕ್ಕಾಗಿ ಹುಡುಕಾಟ ನಡೆಸುತ್ತಿದ್ದಾನೆ ಎಂದರೆ ನೀವು ನಂಬಲೇಬೇಕು !
ಅಂದ ಹಾಗೆ ಒಂದು, ಕೃಷಿಯಲ್ಲಿ ಸನ್ನಿ ಲಿಯೋನ್ ಪ್ರಯೋಗ ಮಾಡಿರುವವರಲ್ಲಿ ಚೆಂಚು ರೆಡ್ಡಿಯೇ ಮೊದಲಿಗನಲ್ಲ. ನೆಲ್ಲೂರು ಜಿಲ್ಲೆಯ ಕೆಲವರು ಕೃಷಿಕರು ಈಗಾಗಲೇ ಇಂತಹ ಪವಾಡ ಮಾಡಿ ಗೆದ್ದಿದ್ದಾರೆ.
ಹಾಗಿರುವಾಗ ನಮ್ಮಲ್ಲಿನ ಬಡಪಾಯಿ ಕೃಷಿಕರು ಇನ್ನೂ ಬೆರ್ಚಪ್ಪನಂತೆ ಕುಳಿತಿರುವುದರಲ್ಲಿ ಯಾವ ಅರ್ಥವೂ ಇಲ್ಲ. ಯಶಸ್ವೀ ಕೃಷಿಗಾಗಿ ಸನ್ನಿ ಲಿಯೋನ್ ಳಿಗೆ ಜೈ ಎಂದು ಹೇಳುವುದೇ ಈಗ ಸುಲಭೋಪಾಯ.