Advertisement
ಅದು ವಿಪರೀತ ಕಷ್ಟದ ಕಾಲ. “ದೇನೆವಾಲಾ ಭಗವಾನ್ ಛಪ್ಪರ್ ಪಾಡ್ ಕೇ ದೇತಾ ಹೈ’ ಅಂತಾರಲ್ಲ ಹಾಗೆ, ಒಂದಾದ ಮೇಲೊಂದರಂತೆ ಬಂದೆರಗುವ ಯಾತನೆಗಳ ಬರಸಿಡಿಲು ಹಣಿದು ಹೈರಾಣಾಗಿಸಿತ್ತು. ನಗು ಎಂಬ ಎರಡಕ್ಷರ ನನ್ನ ಬದುಕಿನಿಂದ ಮೈಲು ದೂರ ಹೋಗಿ ಯಾವ ಕಾಲವಾಗಿತ್ತೋ? ಕೈuಹಿಡಿದ ಕಡೆಯಲ್ಲೆಲ್ಲಾ ಸೋಲುಗಳ ಸರಮಾಲೆ. ಹೆಜ್ಜೆಯಿಟ್ಟಲ್ಲೆಲ್ಲಾ ಹತಾಶೆಗಳ ಸುರಿಮಳೆ. ಎದೆಯ ಮೂಲೆಯಲ್ಲಿ ಹೆಪ್ಪುಗಟ್ಟಿದ ದುಃಖ ಸಣ್ಣಗೆ ಹನಿಯಾಗಿ ಕಣ್ಣ ಕೊನೆಯಿಂದ ಕೆನ್ನೆಯ ಮೇಲಿಳಿಯುತ್ತಿದ್ದರೆ ನಾನು ಕತ್ತಲ ಗರ್ಭದ ಮೊರೆ ಹೊಕ್ಕುಬಿಡುತ್ತಿದ್ದೆ. ಅದೆಷ್ಟು ಹೊತ್ತು ಕತ್ತಲನ್ನು ತೆಕ್ಕೆಗೆಳೆದುಕೊಂಡು ಕೂರುತ್ತಿದ್ದೆನೋ? ಲೆಕ್ಕ ಇಟ್ಟಿಲ್ಲ. ಸಣ್ಣ ಬಿಕ್ಕಳಿಕೆಯೊಂದು ಕೂತಿರುವಷ್ಟು ಹೊತ್ತು ನಿಶ್ಯಬ್ದವನ್ನು ಕದಡುತ್ತಿತ್ತು. ಅತ್ತು ಅತ್ತು ಕಣ್ಣೀರ ಕೊಳವೆಲ್ಲ ಬತ್ತಿ ಹೋದ ಮೇಲೆ ನನ್ನಷ್ಟಕ್ಕೆ ನಾನೇ ಗಟ್ಟಿಯಾಗುತ್ತಿದ್ದೆ. ಬರುವ ಕಷ್ಟಗಳ ಧಡಕಿಗೆ ಎದೆಕೊಡಲು ಅಣಿಯಾಗುತ್ತಿದ್ದೆ. ಖಾಯಿಲೆ ಬಿದ್ದಿದ್ದ ತಾಯಿಯ ಹೊರತು ಯಾರೂ ನನ್ನ ಜೊತೆಗಿರಲಿಲ್ಲ.
Related Articles
ನೀನೇ ತಾನೆ ಹೇಳಿ ಕೊಟ್ಟೆ ಪ್ರೀತಿಸಲು….
ಎಲ್ಲರೂ ಬೆಕ್ಕಸ ಬೆರಗಾಗುವಂತೆ ಎಲ್ಲ ಸೋಲುಗಳ ಮೈಕೊಡವಿ ಮೇಲೆದ್ದುಬಿಟ್ಟೆ ನೋಡು. ಕಷ್ಟಗಳು ಹೇಳದೆ ಕೇಳದೆ ಪೇರಿ ಕಿತ್ತವು. ಕಣ್ಮರೆಯಾಗಿದ್ದ ನಗು ಬಾಚಿ ತಬ್ಬಿಕೊಂಡಿತ್ತು. ಅದೇನೋ ಹೇಳ್ತಾರಲ್ಲ, ಬೀಸೋ ಗಾಳಿಗೆ ಬೆದರುವವ ಚಂಡಮಾರುತದ ಬೆನ್ನತ್ತಲಾರ ಎಂದು. ಹಾಗೆ ಚಂಡಮಾರುತವನ್ನು ಎದುರಿಸಿ ನಿಂತೆ ನೋಡು; ಬದುಕು ದೊಡ್ಡ ನಗೆ ನಕ್ಕು ಬರಸೆಳೆದಿತ್ತು.
Advertisement
ಥ್ಯಾಂಕ್ಸ್… ಬಿದ್ದವನನ್ನು ಮೇಲೆತ್ತಿದ್ದಕ್ಕೆ, ನಗುವಿನ ಸಂತೆಯಲ್ಲಿ ನನ್ನ ದುಃಖವನ್ನು ಕೊಂಡುಕೊಂಡದ್ದಕ್ಕೆ. ನೀನು ನನ್ನಲ್ಲಿ ತುಂಬಿದ ಉತ್ಸಾಹಕ್ಕೆ, ಆತ್ಮವಿಶ್ವಾಸಕ್ಕೆ ಉಸಿರು ಇರೋವರೆಗೂ ನಿನ್ನ ಸಹಾಯ ಮರೆಯೋದಿಲ್ಲ.
– ನಾಗೇಶ್ ಜೆ. ನಾಯಕ, ಬೈಲಹೊಂಗಲ