ಮೆಲ್ಬರ್ನ್: ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾವು ಭಾನುವಾರ ಐಕಾನಿಕ್ ಮೆಲ್ಬರ್ನ್ ಗ್ರೌಂಡ್ ನಲ್ಲಿ ಫೇಮಸ್ ವಿಕ್ಟರಿ ಸಾಧಿಸಿದೆ. ಐಸಿಸಿ ಟಿ20 ವಿಶ್ವಕಪ್ ನ ಸೂಪರ್ 12 ಹಂತದ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನ ವಿರುದ್ಧ ನಾಲ್ಕು ವಿಕೆಟ್ ಅಂತರದ ಜಯಭೇರಿ ಗಳಿಸಿದೆ.
ಮಾಜಿ ನಾಯಕ ವಿರಾಟ್ ಕೊಹ್ಲಿ ತನ್ನ ಅಜೇಯ 82 ರನ್ ಆಟದಿಂದ ಟೀಂ ಇಂಡಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಆರಂಭದಲ್ಲಿ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾ ನೆರವಿಗೆ ನಿಂತ ವಿರಾಟ್ ತಂಡಕ್ಕೆ ಜಯ ತಂದಿತ್ತರು. ಆದರೆ ಇದೇ ವೇಳೆ ಅಂತಿಮ ಎಸೆತದಲ್ಲಿ ಒಂಟಿ ರನ್ ತೆಗೆದ ಅಶ್ವಿನ್ ಕೂಡಾ ಪ್ರಶಂಸೆಗೆ ಪಾತ್ರರಾದರು.
ಇದನ್ನೂ ಓದಿ:ದೀಪಾವಳಿ ಸಂಭ್ರಮಕ್ಕೆ ಹಚ್ಚಿದ ದೀಪ : ಬಸ್ ಚಾಲಕ, ಕಂಡಕ್ಟರ್ ಸಜೀವ ದಹನ
ಪಂದ್ಯದ ಬಳಿಕ ತಂಡದ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಅವರು ರವಿ ಅಶ್ವಿನ್ ಗೆ ಧನ್ಯವಾದಗಳನ್ನು ಹೇಳಿದ್ದಾರೆ.
ಕೊನೆಯ ಎರಡು ಎಸೆಗಳಲ್ಲಿ ಎರಡು ರನ್ ಬೇಕಾಗಿದ್ದಾಗ ಸ್ಟ್ರೈಕ್ ನಲ್ಲಿದ್ದ ಕಾರ್ತಿಕ್ ವಿಕೆಟ್ ಒಪ್ಪಿಸಿದರು. ಇದು ತಂಡದ ಒತ್ತಡ ಹೆಚ್ಚುವಂತೆ ಮಾಡಿತು. ಆಗ ಸ್ಟ್ರೈಕ್ ಗೆ ಬಂದ ಅಶ್ವಿನ್ ತಾಳ್ಮೆಯಿಂದ ಆಡಿ ನವಾಜ್ ಎಸೆದ ವೈಡ್ ಬಾಲನ್ನು ಸರಿಯಾಗಿ ಗುರುತಿಸಿದರು. ಕೊನೆಯ ಎಸೆತದಲ್ಲಿ ಸಿಂಗಲ್ ತೆಗೆದು ಜಯ ತಂದಿತ್ತರು.
ಬಿಸಿಸಿಐನ ಅಧಿಕೃತ ಸಾಮಾಜಿಕ ಮಾಧ್ಯಮಗಳಲ್ಲಿ ಟೀಮ್ ಇಂಡಿಯಾ ಸಿಡ್ನಿಗೆ ತೆರಳುವ ವೀಡಿಯೊವನ್ನು ಪೋಸ್ಟ್ ಮಾಡಿದೆ. ಸಿಡ್ನಿಯಲ್ಲಿ ಟೀಂ ಇಂಡಿಯಾ ಗುರುವಾರ ನೆದರ್ಲ್ಯಾಂಡ್ಸ್ ವಿರುದ್ಧ ಪಂದ್ಯಾವಳಿಯ ತಮ್ಮ ಎರಡನೇ ಪಂದ್ಯವನ್ನು ಆಡಲಿದ್ದಾರೆ.
ವೀಡಿಯೊದಲ್ಲಿ, ದಿನೇಶ್ ಕಾರ್ತಿಕ್ ಅವರು ಅಶ್ವಿನ್ ಅವರಿಗೆ ಧನ್ಯವಾದ ಹೇಳಿದ್ದಾರೆ: “ನಿನ್ನೆ ನನ್ನನ್ನು ಉಳಿಸಿದ್ದಕ್ಕಾಗಿ ಧನ್ಯವಾದಗಳು, ಕೂಲ್ ಆ್ಯಂಡ್ ಕಾಮ್’ ಎಂದು ಹೇಳಿದ್ದಾರೆ. ಒಂದು ವೇಳೆ ಅಶ್ವಿನ್ ತಂಡವನ್ನು ಗುರಿ ತಲುಪಿಸದೇ ಇದ್ದರೆ ಕಾರ್ತಿಕ್ ಟೀಕೆಗೆ ಗುರಿಯಾಗುತ್ತಿದ್ದರು. ಹೀಗಾಗಿ ಡಿಕೆ ಅಶ್ವಿನ್ ಗೆ ಥ್ಯಾಂಕ್ಸ್ ಹೇಳಿದ್ದಾರೆ.