Advertisement

ಬರದ ಛಾಯೆ ಬದಲಿಸಿದ ವರುಣ

08:51 AM Sep 16, 2017 | |

ಬೆಂಗಳೂರು: ರಾಜ್ಯದಲ್ಲಿ ಕಳೆದ 15 ದಿನಗಳಲ್ಲಿ ಸುರಿದ ಮಳೆ ಬರಗಾಲದ ಚಿತ್ರಣವನ್ನೇ ಬದಲಾಯಿಸಿದೆ. ಆಗಸ್ಟ್‌ ಮಧ್ಯ
ಭಾಗದವರೆಗೆ ಹಲವೆಡೆ ಮಳೆ ಬಾರದೆ ಇದ್ದುದರಿಂದ 176 ತಾಲೂಕುಗಳ ಪೈಕಿ ಸುಮಾರು 160 ತಾಲೂಕುಗಳಲ್ಲಿ ಬರ ಸ್ಥಿತಿ ನಿರ್ಮಾಣವಾಗುವ ಆತಂಕ ಎದುರಾಗಿತ್ತು. ಆದರೆ, ವರುಣನ ಕೃಪೆಯಿಂದ ಬರ ಮಾಯ ವಾಗಿ ರಾಜ್ಯ ಸರಕಾರ ಬರ ಪೀಡಿತ ಪ್ರದೇಶ ಘೋಷಣೆಯನ್ನೇ ಕೈಬಿಡುವ ಪರಿಸ್ಥಿತಿ ಈಗ ನಿರ್ಮಾಣವಾಗಿದೆ.

Advertisement

ರಾಜ್ಯದ 176 ತಾಲೂಕುಗಳ ಪೈಕಿ 36 ತಾಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಒಂದು ತಾಲೂಕಿನಲ್ಲಿ ಅತಿ ಕಡಿಮೆ, 48 ತಾಲೂಕುಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. 91 ತಾಲೂಕುಗಳಲ್ಲಿ ವಾಡಿಕೆ ಮಳೆಯಾಗಿದ್ದು, ಆಗಸ್ಟ್‌, ಸೆಪ್ಟಂಬರ್‌ನಲ್ಲಿ ಸುರಿದ ಮಳೆ ಸರಕಾರ ಮತ್ತು ರಾಜ್ಯದ ಜನತೆಯಲ್ಲಿ ಮಂದಹಾಸ ಮೂಡಿಸಿದೆ. ಕರಾವಳಿ ಭಾಗದಲ್ಲಿ ಬೆಳ್ತಂಗಡಿ, ಬಂಟ್ವಾಳ, ಸುಳ್ಯ ತಾಲೂಕುಗಳು ಮಳೆ ಕೊರತೆ ಎದುರಿಸುತ್ತಿವೆ. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನಲ್ಲಿ ಅತೀ ಕಡಿಮೆ ಮಳೆ  ಬಿದ್ದಿದ್ದು, ಧಾರವಾಡ ಮತ್ತು ಕೊಡಗು ಜಿಲ್ಲೆಗಳ ಎಲ್ಲ ತಾಲೂಕುಗಳಲ್ಲಿ ವಾಡಿಕೆಗಿಂತ ಮಳೆ ಕಡಿಮೆಯಾಗಿದೆ.  

ಕಂದಾಯ ಇಲಾಖೆ ಪ್ರತಿ ವರ್ಷ ಜೂನ್‌ನಿಂದ ಸೆಪ್ಟಂಬರ್‌ವರೆಗೂ ಮಳೆಯ ಪ್ರಮಾಣವನ್ನು ನೋಡಿಕೊಂಡು ಮುಂಗಾರು ಹಂಗಾಮಿನ ಬರ ಪೀಡಿತ ತಾಲೂಕುಗಳ ಪಟ್ಟಿಯನ್ನು ಸಿದ್ಧಪಡಿಸುತ್ತದೆ. ಸೆಪ್ಟಂಬರ್‌ 14ರ ವರೆಗಿನ ಮಳೆಯ ಪ್ರಮಾಣವನ್ನು ಗಮನಿಸಿದಾಗ, 37 ತಾಲೂಕುಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಸೆಪ್ಟಂಬರ್‌ ಅಂತ್ಯದ ವರೆಗೂ ಇನ್ನೂ ಮಳೆಯಾಗುವ ಸಾಧ್ಯತೆ ಇರುವುದರಿಂದ ಅದರ ಆಧಾರದಲ್ಲಿ ಬರ ಪೀಡಿತ ತಾಲೂಕುಗಳ ಪಟ್ಟಿ ಸಿದ್ಧಪಡಿಸಲು ಕಂದಾಯ ಇಲಾಖೆ ನಿರ್ಧರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next