ಬೆಂಗಳೂರು: ಬಿಬಿಎಂಪಿ ವತಿಯಿಂದ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳಿಂದಾಗಿ ಮುಂದಿನ ಎರಡು ವರ್ಷಗಳಲ್ಲಿ ಥಣಿಸಂದ್ರ ವಾರ್ಡ್ ಮಾದರಿ ವಾರ್ಡ್ ಆಗಿ ರೂಪುಗೊಳ್ಳಲಿದೆ ಎಂದು ಮೇಯರ್ ಗಂಗಾಂಬಿಕೆ ಭರವಸೆ ನೀಡಿದ್ದಾರೆ.
ಥಣಿಸಂದ್ರ ವಾರ್ಡ್‌ನಲ್ಲಿ ಪಾಲಿಕೆಯಿಂದ ಕೈಗೆತ್ತಿಕೊಂಡಿರುವ ಅಭಿವೃದ್ಧಿ ಕಾಮಗಾರಿಗಳು ಹಾಗೂ ಸಾಮೂಹಿಕ ಸ್ವಚ್ಛತಾ ಕಾರ್ಯ ಪರಿಶೀಲಿಸಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಥಣಿಸಂದ್ರ ವಾರ್ಡ್ ಅತಿ ಹಿಂದುಳಿದ ವಾರ್ಡ್ ಎಂಬ ಅಪಖ್ಯಾತಿಗೆ ಒಳಗಾಗಿದೆ. ಆ ಹಿನ್ನೆಲೆಯಲ್ಲಿ ವಾರ್ಡ್‌ನ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ ಎಂದು ಹೇಳಿದರು.
ಥಣಿಸಂದ್ರ ವಾರ್ಡ್‌ಗೆ ಹೆಚ್ಚಿನ ಹಳ್ಳಿಗಳು ಒಳಪಡುವುದರಿಂದ ವಾರ್ಡ್ ಅಭಿವೃದ್ಧಿಗಾಗಿ ಹಿಂದಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಯಲಹಂಕ ವಲಯ ವ್ಯಾಪ್ತಿಗೆ ಬರುವ ವಾರ್ಡ್‌ಗಳ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಿದ್ದಾರೆ. ಆ ಹಿನ್ನೆಲೆಯಲ್ಲಿ ಥಣಿಸಂದ್ರ ವಾರ್ಡ್ ಹಲವಾರು ಕಡೆಗಳಲ್ಲಿಯೂ ಕಾಮಗಾರಿ ಪ್ರತಿಯಲ್ಲಿದೆ ಎಂದು ತಿಳಿಸಿದರು.
ಹೊಸದಾಗಿ ಒಳಚರಂಡಿ ವ್ಯವಸ್ಥೆ ಹಾಗೂ ಕಾವೇರಿ ನೀರು ಸಂಪರ್ಕ ಪೂರೈಕೆಗಾಗಿ ಜಲಮಂಡಳಿ 80 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದೆ. ಸದ್ಯ ವಾರ್ಡ್‌ನ 120 ನಿವಾಸಿಗಳಿಗೆ ಮಾತ್ರ ನೀರಿನ ಸಂಪರ್ಕ ಲಭ್ಯವಾಗಿದ್ದು, ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಎಲ್ಲರಿಗೂ ನೀರು ಸಂಪರ್ಕ ಕಲ್ಪಿಸುವುಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಕಾಫಿ ಬೋರ್ಡ್ ಬಡಾವಣೆ, ಭುವನೇಶ್ವರಿ ನಗರ, ಭಾರತ್‌ನಗರ, ಫಾತಿಮಾ ಬಡಾವಣೆ, ಅಮರಜ್ಯೋತಿ ಬಡಾವಣೆ ಸೇರಿದಂತೆ ಇತರೆಡೆಗಳಲ್ಲಿ ಜಲಮಂಡಳಿಯಿಂದ ಕೈಗೆತ್ತಿಕೊಂಡ ಕಾಮಗಾರಿಗಳು ಪೂರ್ಣಗೊಂಡಿವೆ. ರಸ್ತೆಗಳ ಪುನರ್‌ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಅದನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ ಎಂದು ಹೇಳಿದರು.
ಇದೇ ವೇಳೆ ಎಂಎಸ್‌ಆರ್ ಬಡಾವಣೆಲ್ಲಿನ ರಾಜಕಾಲುಕಾಲುವೆಗಳಲ್ಲಿ ರೊಬೋಟಿಕ್ ಯಂತ್ರಗಳ ಮೂಲಕ ಹೂಳೆತ್ತುವ ಪರಿಶೀಲಿಸಿದ ಅವರು, ಮಳೆಗಾಲ ಆರಂಭವಾಗುವ ಮೊದಲೇ ತ್ವರಿತವಾಗಿ ಹೂಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಮೇಯರ್ ಸೂಚಿಸಿದರು. ಜತೆಗೆ ಸಾಮೂಹಿಕ ಸ್ವಚ್ಛತಾ ಕಾರ್ಯ ನಡೆಸುವ ಕೆಲ ಸ್ಥಳಗಳಿಗೆ ಭೇಟಿ ನೀಡಿದರು.