ಮುಂಬೈ: ಥಾಣೆಯ ಪುರಸಭೆ ಆಸ್ಪತ್ರೆಯೊಂದರಲ್ಲಿ ಕೋವಿಡ್ ಸೋಂಕಿಗೆ ತುತ್ತಾಗಿ ಮೃತಪಟ್ಟ ಇಬ್ಬರ ದೇಹಗಳನ್ನು ಒಂದೇ ಕುಟುಂಬಸ್ಥರಿಗೆ ಹಸ್ತಾಂತರಿಸಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ದುರಂತವೆಂದರೇ ಎರಡು ಮೃತ ವ್ಯಕ್ತಿಗಳು ಬೇರೆ ಬೇರೆ ಕುಟುಂಬಕ್ಕೆ ಸೇರಿದ್ದರು.
ಸರ್ಕಾರದ ಮಾರ್ಗಸೂಚಿಯ ಪ್ರಕಾರವೇ ಅಂತ್ಯಸಂಸ್ಕಾರ ನೆರವೇರಿಸಲಾಗಿದ್ದರೂ, ಪುರಸಭೆ ಕೆಲದಿನಗಳ ನಂತರ ತನ್ನ ಎಡವಟ್ಟನ್ನು ತಪ್ಪನ್ನು ಮನಗಂಡಿದೆ. ಮಾತ್ರವಲ್ಲದೆ ಎರಡು ಮೃತದೇಹಗಳ ಅಂತ್ಯಸಂಸ್ಕಾರ ಪ್ರಕ್ರಿಯೆಯಲ್ಲಿ ಭಾಗಿಯಾದ ಒಂದೇ ಕುಟುಂಬಸ್ಥರನ್ನು ಕರೆಯಿಸಿ ಪುರಸಭೆ ಹಾಗೂ ಕುಟುಂಬಸ್ಥರು ಮಾಡಿದ ತಪ್ಪನ್ನು ತಿಳಿಸುವ ಘೋಷಣಾ ಪತ್ರಕ್ಕೆ ಸಹಿ ಹಾಕಿಸಿಕೊಂಡಿದೆ.
ಘಟನೆಯ ಹಿನ್ನಲೆ:
ಸಂತೋಷ್ ಸೋನಾವಾನೆ ಎಂಬ ವ್ಯಕ್ತಿ ಕೋವಿಡ್ ಸೊಂಕಿನಿಂದ ಮೃತಪಟ್ಟ ತನ್ನ ತಂದೆಯ ಮೃತದೇಹವನ್ನು ಮೊದಲು ಅಂತ್ಯಸಂಸ್ಕಾರ ನಡೆಸಿದ್ದ. ನಾಲ್ಕು ದಿನಗಳ ನಂತರ ತನ್ನ ತಂದೆ ಬದುಕಿದ್ದಾರೆ ಎಂಬ ಪೋನ್ ಪುರಸಭೆಯ ಕಡೆಯಿಂದ ಬಂದಿದ್ದು ಮಾತ್ರವಲ್ಲದೆ, ಕೆಲಹೊತ್ತಿನಲ್ಲೆ ಮೃತಪಟ್ಟರು ಎಂಬ ಸುದ್ದಿಯೂ ಬಂದಿದೆ.
ಗೊಂದಲಕ್ಕೊಳಗಾದ ಸೋನಾವಾನೆ ಅದಾಗಲೇ ಅಂತ್ಯಸಂಸ್ಕಾರ ನೆರವೇರಸಿರುವುದಾಗಿ ಮಾಹಿತಿ ನೀಡಿದ್ದಾರೆ. ಆದರೆ ಇದನ್ನು ಒಪ್ಪದ ಆಸ್ಪತ್ರೆ ಸಿಬ್ಬಂದಿ ‘ಮೃತದೇಹ ಎರಡು ಬಾರಿ ಪರಿಶೀಲಿಸಿಲಾಗಿದೆ. ಇದು ಖಚಿತವಾಗಿ ನಿಮ್ಮ ತಂದೆಯದ್ದೆ ಎಂದಿದ್ದಾರೆ. ಕೋವಿಡ್ ಮಾರ್ಗಸೂಚಿಯ ಪ್ರಕಾರ ಮೃತದೇಹವನ್ನು ಸಂಪೂರ್ಣ ಮುಚ್ಚಿದ್ದರಿಂದ ಸೋನಾವಾನೆ ಮಗದೊಮ್ಮೆ ಅಂತ್ಯಸಂಸ್ಕಾರ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ.
ಕೋವಿಡ್ ಸೋಂಕಿತರಾಗಿದ್ದ ಬಾಲಚಂದ್ರ ಗಾಯಕ್ ವಾಡ್ ಎಂಬ ವೃದ್ಧ ಕೂಡ ಅದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಅವರ ಕುಟುಂಬಸ್ಥರು ಮೃತದೇಹಕ್ಕಾಗಿ ಎಷ್ಟು ಕಾದರೂ ಪ್ರಯೋಜನವಾಗಿರಲಿಲ್ಲ. ಆಸ್ಪತ್ರೆ ಕೂಡ ಮೃತದೇಹ ಕಾಣೆಯಾಗಿದೆ ಎಂಬ ಸಬೂಬು ಹೇಳುತ್ತಲೇ ಇದ್ದರು. ಇಷ್ಟಲ್ಲಾ ಘಟನೆ ಸಂಭವಿಸಿದ ನಂತರ ಥಾಣೆಯ ಪುರಸಭೆ ಆಸ್ಪತ್ರೆ ಸಿಬ್ಬಂದಿಗಳಿಗೆ ಬಾಲಚಂದ್ರ ಗಾಯಕ್ ವಾಡ್ ಅವರ ದೇಹವನ್ನು ಅದಾಗಲೇ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ ಎಂಬ ಜ್ಞಾನೋದಯವಾಗಿದೆ.
ಇತ್ತ ಗಾಯಕ್ ವಾಡ್ ಕುಟುಂಬಸ್ಥರು ಸ್ಥಳೀಯ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಈ ಕಾರಣದಿಂದ ಪುರಸಭೆ ಆಸ್ಪತ್ರೆ ಸೋನಾವಾನೆಯವರನ್ನು ಕರೆಯಿಸಿ ತಪ್ಪು ಘೋಷಣಾ ಪತ್ರಕ್ಕೆ ಸಹಿ ಹಾಕಿಸಿಕೊಂಡಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಸೋನಾವಾನೆ ನನಗೆ ಇಂಗ್ಲೀಷ್ ಬರೆಯಲು ಮತ್ತು ಓದಲು ಬರುವುದಿಲ್ಲ. ಆಸ್ಪತ್ರೆ ಸಿಬ್ಬಂದಿ ಪತ್ರವೊಂದಕ್ಕೆ ಸಹಿ ಹಾಕಿಸಿಕೊಂಡರು. ಮೃತದೇಹ ಸಂಪೂರ್ಣ ಕವರ್ ಆಗಿದ್ದರಿಂದ ನನಗೆ ಗುರುತು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಆಸ್ಪತ್ರೆ ಸಿಬ್ಬಂದಿ ಹೇಳಿದ ಮಾತನ್ನೇ ನಂಬಬೇಕಾಯಿತು. ಆ ಕಾರಣದಿಂದ ಎರಡು ಮೃತದೇಹಗಳ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದೆ ಎಂದಿದ್ದಾರೆ.