ಬೆಂಗಳೂರು: ರಾಜ್ಯದ ಸರ್ಕಾರಿ ಹಿರಿಯ ಹಾಗೂ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ನಿಯೋಜನೆ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಪ್ರೌಢಶಾಲಾ ಸಹ ಶಿಕ್ಷಕರ ಗ್ರೇಡ್-2 ವೃಂದದ ತರಬೇತಿ ಪಡೆದ ಪದವೀಧರ (ಟಿಜಿಟಿ) ಶಿಕ್ಷಕರನ್ನು ಮರು ಹೊಂದಾಣಿಕೆ ಮಾಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚಿಸಿದೆ.
ಟಿಜಿಟಿ ಶಿಕ್ಷಕರ ಮರುಹೊಂದಾಣಿಕೆ ಮಾಡದಿದ್ದರೆ, ವರ್ಗಾವಣೆ ಪ್ರಕ್ರಿಯೆ ನಡೆಸಲು ಕಷ್ಟವಾಗುತ್ತದೆ. ಹೀಗಾಗಿ ಆದಷ್ಟು ಬೇಗ ಮರು ಹೊಂದಾಣಿಕೆ ಮಾಡಿ, ಅದರ ವಿವರವನ್ನು ಆನ್‌ಲೈನ್ ಮೂಲಕ ಸಲ್ಲಿಸುವಂತೆ ನಿರ್ದೇಶಿಸಿದೆ.
2017-18ನೇ ಸಾಲಿನ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ವೃಂದದ ವರ್ಗಾವಣೆಗಾಗಿ ಮತ್ತು ಹೆಚ್ಚುವರಿ ಶಿಕ್ಷಕರನ್ನು ಮರು ನಿಯೋಜಿಸಲು ಈಗಾಗಲೇ ಮಾರ್ಗಸೂಚಿ ಹೊರಡಿಸಲಾಗಿದೆ. ಸರ್ಕಾರಿ ಹಿರಿಯ ಹಾಗೂ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರೌಢಶಾಲಾ ಸಹ ಶಿಕ್ಷಕರನ್ನು ಗ್ರೇಡ್-2 ವೃಂದದ ಟಿಜಿಟಿ ಶಿಕ್ಷಕರ ಮರು ಹೊಂದಾಣಿಕೆ ಬಗ್ಗೆ ಅನುಸರಿಸಬೇಕಾದ ಕಾರ್ಯ ವಿಧಾನವನ್ನು ಇಲಾಖೆಯಿಂದ ಈಗಾಗಲೇ ನೀಡಲಾಗಿದೆ.
ಪ್ರಾಥಮಿಕ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರೌಢಶಾಲಾ ವೃಂದದ ಟಿಜಿಟಿ ಶಿಕ್ಷಕರನ್ನು ಖಾಲಿ ಹುದ್ದೆಗಳ ಲಭ್ಯತೆ ಆಧಾರದ ಮೇಲೆ ಪ್ರೌಢಶಾಲೆಗಳಲ್ಲಿ ಪ್ರೌಢಶಾಲೆಗಳಲ್ಲಿನ ವಿಜ್ಞಾನ(ಪಿಸಿಎಂ) ಹುದ್ದೆಗೆ ಮರು ಹೊಂದಾಣಿಕೆ ಮಾಡಿರುವ ಕ್ರಮಕ್ಕೆ ಉಪನಿರ್ದೇಶಕರದ ಹಂತದಲ್ಲಿ ಟಿಡಿಎಸ್‌ನಲ್ಲಿ ಅಳವಡಿಸಲಾಗಿದೆ.
2018-19ನೇ ಸಾಲಿನ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕರ ತತ್ಸಮಾನ ವೃಂದದ ವರ್ಗಾವಣೆಗಳನ್ನು ಗಣಕೀಕೃತ ಕೌನ್ಸೆಲಿಂಗ್ ಮೂಲಕ ಮಾಡುವ ಪೂರ್ವದಲ್ಲಿ ಟಿಜಿಟಿ ಶಿಕ್ಷಕರ ಮಾಹಿತಿಯನ್ನು ಕಡ್ಡಾಯವಾಗಿ ಅಳವಡಿಸಬೇಕು. ಆದರೆ, ಬಹುತೇಕ ಉಪನಿರ್ದೇಶಕರು ಟಿಜಿಟಿ ಶಿಕ್ಷಕರ ಮರು ಹೊಂದಾಣಿಕೆ ಮಾಡಿಲ್ಲ.
ಇದರಿಂದ ವರ್ಗಾವಣೆಗೆ ಸಮಸ್ಯೆಯಾಗಲಿದೆ. ಆದಷ್ಟು ಬೇಗ ಮರು ಹೊಂದಾಣಿಕೆ ಮಾಡಿ, ಪೂರಕ ದಾಖಲೆಗಳನ್ನು ಇಲಾಖೆಗೆ ಆನ್‌ಲೈನ್‌ನಲ್ಲಿ ಸಲ್ಲಿಸಬೇಕು. ಇಲ್ಲವಾದರೆ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ.