ಉಡುಪಿ: ಪ್ರಿಂಟೆಡ್ ಇಲೆಕ್ಟ್ರಾನಿಕ್ಸ್, ಆಗ್ಮೆಂಟ್ಡ್ ರಿಯಾಲಿಟಿ, ಸ್ಮಾರ್ಟ್ ಪ್ಯಾಕೇಜಿಂಗ್, ವಿಎಫ್ಎಕ್ಸ್ ಮೊದಲಾದ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮ ವಿಭಾಗದಲ್ಲಿ ವಿದ್ಯಾರ್ಥಿಗಳು ಹೊಸ ಹೊಸ ತಾಂತ್ರಿಕ ಅನ್ವೇಷಣೆಗೆ ಮುಂದಾಗಬೇಕು ಎಂದು ಮಣಿಪಾಲ್ ಟೆಕ್ನಾಲಜೀಸ್ ಲಿ. ಆಡಳಿತ ನಿರ್ದೇಶಕ ಟಿ. ಗೌತಮ್ ಎಸ್. ಪೈ ಹೇಳಿದರು.
ಮಣಿಪಾಲದ ಎಂಐಟಿ ಮೀಡಿಯ ಟೆಕ್ನಾಲಜಿ ವಿಭಾಗದಲ್ಲಿ ಎರಡು ದಿನಗಳ ಪುನಶ್ಚೇತನ ಮತ್ತು ಜ್ಞಾನದೀಪ ಉದ್ದೀಪನ ಕಾರ್ಯಕ್ರಮವನ್ನು ಉದ್ಘಾಟಿಸಿ ಮೀಡಿಯ ಟೆಕ್ನಾಲಜಿ ವಿಭಾಗದ ಎಲ್ಲ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಶುಭ ಕೋರಿದ ಅವರು, ವ್ಯಾಪಾರಕ್ಕೆ ಪರಿಹಾರ ಹುಡುಕುವ ಎಂಜಿನಿಯರ್‌ಗಳು ಅಗತ್ಯವಿದೆ ಎಂದು ಪೈ ಹೇಳಿದರು.
ಎಂಐಟಿ ಸಹ ನಿರ್ದೇಶಕ (ಶೈಕ್ಷಣಿಕ) ಡಾ| ಜಿಸಿ ಕೊವೂರ್ ಅವರು, ಪ್ರಸ್ತಾವನೆಗೈದರು.ಎರಡನೆಯ ದಿನ ವಿದ್ಯಾರ್ಥಿಗಳಿಗೆ ಉಪನ್ಯಾಸ, ಪ್ರಾತ್ಯಕ್ಷಿಕೆ, ಕೈಗಾರಿಕೆಗಳ ಭೇಟಿಯನ್ನು ಏರ್ಪಡಿಸಲಾಗಿತ್ತು. ಮಂಗಳೂರು ಆಕಾಶವಾಣಿಯ ಉಪನಿರ್ದೇಶಕ (ಎಂಜಿನಿಯರಿಂಗ್) ರಮೇಶ ಚಂದ್ರನ್ “ವಿದ್ಯುನ್ಮಾನ ಯುಗದಲ್ಲಿ ಸಮೂಹ ಸಂವಹನದ ಪ್ರಾಮುಖ್ಯ’ ವಿಷಯ ಕುರಿತು ಮಾತನಾಡಿದರು. ಅವರು ಟೆಲೆಕಾಸ್ಟಿಂಗ್ ನೆಟ್‌ವರ್ಕ್, ಸಿಗ್ನಲ್ ಪ್ರೊಸೆಸಿಂಗ್, ನ್ಯೂಸ್ ರೂಮ್ ಟೆಕ್ನಾಲಜೀಸ್, ಸ್ಟುಡಿಯೋ ಸೆಟ್‌ಅಪ್, ಸೌಂಡ್ ಎಂಜಿನಿಯರಿಂಗ್ ಕುರಿತು ಮಾತನಾಡಿದರು. ವಿದ್ಯುನ್ಮಾನ ಮಾಧ್ಯಮಗಳು ವಿಶೇಷವಾಗಿ ಯುವ ಪೀಳಿಗೆಯ ಜನಜೀವನದ ಮೇಲೆ ಪರಿಣಾಮ ಬೀರುತ್ತಿದೆ ಎಂದರು. ಇನ್ನೋವೇಶನ್ ಇನ್ ಪ್ರಿಂಟ್ ಕುರಿತು ಮಣಿಪಾಲ್ ಟೆಕ್ನಾಲಜೀಸ್ ಲಿ. ಜಿಎಂ (ಆರ್ ಆ್ಯಂಡ್ ಡಿ ವಿಭಾಗ) ಡಾ| ಶಿವಾನಂದ ವಾಗೆ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕ ನಿತೇಶ್‌ಕುಮಾರ್ ವಂದಿಸಿದರು. ವಿದ್ಯಾರ್ಥಿನಿ ಶಿಫಾನಾ ಕಾರ್ಯಕ್ರಮ ನಿರ್ವಹಿಸಿದರು.