ಬೆಂಗಳೂರು: ರಾಜ್ಯಾದ್ಯಂತ ಭಾನುವಾರ (ನ.6) 1,370 ಕೇಂದ್ರಗಳಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ನಡೆಯಲಿದೆ. ಈ ಬಾರಿಯಿಂದ ಪರೀಕ್ಷೆಯ ಒಎಂಆರ್ ಉತ್ತರ ಪತ್ರಿಕೆಯಲ್ಲಿ ಅಭ್ಯರ್ಥಿಗಳ ಸಹಿ ಜತೆಗೆ ಹೆಬ್ಬೆಟ್ಟಿನ ಗುರುತು ಹೊಂದಿರಬೇಕೆಂದು ಶಿಕ್ಷಣ ಇಲಾಖೆ ಸೂಚಿಸಿದೆ.
ಪತ್ರಿಕೆ-1 ಮತ್ತು 2ಕ್ಕೆ ಪರೀಕ್ಷೆ ನಡೆಯಲಿದೆ. ಬೆಳಗ್ಗೆ 9.30ರಿಂದ 12ರ ವರೆಗೆ ಪತ್ರಿಕೆ-1ಕ್ಕೆ ರಾಜ್ಯದ 589 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. 54,929 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಪತ್ರಿಕೆ-2 ಮಧ್ಯಾಹ್ನ 2ರಿಂದ 4.30ರ ವರೆಗೆ ನಡೆಯಲಿದೆ.
ರಾಜ್ಯದ 781 ಕೇಂದ್ರಗಳಲ್ಲಿ ನಡೆಯಲಿದ್ದು, 2,06,456 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.
ಟಿಇಟಿ ಪರೀಕ್ಷೆಯ ಮಾರ್ಗಸೂಚಿಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕ ಪ್ರಕಟಿಸಿದೆ. ಉತ್ತರ ಪತ್ರಿಕೆಗಳಲ್ಲಿ ಚಿತ್ ಮಾಡುವುದು, ಬಿಳಿ ಫ್ಯೂಯಡ್ ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ಇಂತಹ ಒಎಂಆರ್ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸುವುದಿಲ್ಲ. ಅದೇ ರೀತಿ ಒಎಂಆರ್ ಹಿಂತಿರುಗಿಸಿದ ನಂತರ ನಾಮಿನಲ್ ರೋಲ್‌ನಲ್ಲಿ ಎರಡನೇ ಬಾರಿ ಸಹಿ ಮಾಡಬೇಕು. ಒಂದು ವೇಳೆ ಮಾಡದಿದ್ದರೆ ಅಂತಹ ಒಎಂಆರ್ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನಕ್ಕೆ ಒಳಪಡಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.
ಪರೀಕ್ಷೆ ಆರಂಭವಾಗುವುದಕ್ಕೂ ಒಂದು ಗಂಟೆ ಮೊದಲು ಪರೀಕ್ಷಾ ಕೇಂದ್ರಕ್ಕೆ ಮತ್ತು ಅರ್ಧ ಗಂಟೆ ಮೊದಲು ಕೊಠಡಿಯೊಳಗೆ ಪ್ರವೇಶ ಪಡೆಯಬೇಕು. ಈ ವೇಳೆ ಅಭ್ಯರ್ಥಿಗಳು ಶೂ, ಬೆಲ್ಟ್, ವಾಚ್ ಅನ್ನು ಧರಿಸಬಾರದು. ಯಾವುದೇ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳನ್ನು ತರದಂತೆ ಸೂಚನೆ ನೀಡಿದೆ.