Advertisement

ಆಯಿಲ್‌ಮಿಲ್‌ ಕಟ್ಟಡದಲ್ಲಿ ಪರೀಕ್ಷೆ!

03:06 PM Aug 05, 2017 | Team Udayavani |

ಜಗಳೂರು: ಪರೀಕ್ಷಾ ಕೇಂದ್ರಕ್ಕೆ ಸೂಕ್ತ ಕಟ್ಟಡ ಗುರುತಿಸಬೇಕಾಗಿದ್ದ ಇಲ್ಲಿನ ಐಟಿಐ ಕಾಲೇಜು ಪ್ರಾಂಶುಪಾಲರ ದಿವ್ಯ ನಿರ್ಲಕ್ಷ ದಿಂದಾಗಿ ವಿದ್ಯಾರ್ಥಿಗಳು ಶಿಥಿಲಾವಸ್ಥೆಯ ಆಯಿಲ್‌ಮಿಲ್‌ ಕಟ್ಟಡದಲ್ಲಿ ಪರೀಕ್ಷೆ ಬರೆಯುವಂತಾಗಿದೆ. ಇಲ್ಲಿನ ಮಿನಿವಿಧಾನ ಸೌಧದ ಹಿಂಭಾಗದಲ್ಲಿರುವ ಹಳೆಯ ಕಾಲದ ಆಯಿಲ್‌ಮಿಲ್‌ ಕಟ್ಟಡದ ಕೊಠಡಿಗಳಲ್ಲಿ ಆ.3ರಿಂದ ಆರಂಭವಾಗಿರುವ ಅಖೀಲ ಭಾರತ ವೃತ್ತಿ ಪರೀಕ್ಷೆಗಳನ್ನು ವಿವಿಧ ಐಟಿಐ ಕಾಲೇಜಿನ 230 ವಿದ್ಯಾರ್ಥಿಗಳು ಎದುರಿಸುತ್ತಿದ್ದಾರೆ. ಅವ್ಯವಸ್ಥೆ ಮತ್ತು ಅಸುರಕ್ಷತೆಯಿಂದ ಕೂಡಿರುವ ಪರೀಕ್ಷಾ ಕೇಂದ್ರ, ವಿದ್ಯಾರ್ಥಿಗಳ ಮಾನಸಿಕ ಸ್ಥಿತಿ ಸಹಜವಾಗಿ ಹದಗೆಡಿಸಿದೆ.

Advertisement

ಶೈಕ್ಷಣಿಕ ಭವಿಷ್ಯ ನಿರ್ಧರಿಸುವ ಮಹತ್ವದ ಪರೀಕ್ಷೆಯನ್ನು ಉತ್ತಮ ವಾತಾವರಣದಲ್ಲಿ ಬರೆಯಬೇಕಾಗಿದ್ದ ವಿದ್ಯಾರ್ಥಿಗಳು ಹತ್ತಾರು ಸಮಸ್ಯೆಗಳ ಕಿರಿಕಿರಿ ಅನುಭವಿಸುತ್ತಿದ್ದಾರೆ. ಸೂಕ್ತ ಗಾಳಿ ಇಲ್ಲ, ಬೆಳಕಿಲ್ಲ. ಹಲವು ಕೊಠಡಿಗಳಿಗೆ ಬಾಗಿಲು ಹೊರತುಪಡಿಸಿದರೆ ಕಿಟಕಿಗಳೇ ಇಲ್ಲ. ಒಟ್ಟಾರೆ ಮೂಲ ಸೌಲಭ್ಯಗಳಿಲ್ಲದೇ ವಂಚಿತವಾಗಿದೆ. ಆಗಲೂ ಈಗಲೂ ಬಿದ್ದು ಹೋಗುವ ಶಿಥಿಲಾವಸ್ಥೆಯ ಅವೈಜ್ಞಾನಿಕ ಕಟ್ಟಡದಲ್ಲಿ ಪರೀಕ್ಷೆಗಳನ್ನು ನಡೆಸುತ್ತಿರುವುದಕ್ಕೆ
ವಿದ್ಯಾರ್ಥಿ ಸಂಘಟನೆಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಪರೀಕ್ಷೆ ಆರಂಭದಿಂದ ಮುಕ್ತಾಯವರೆಗೂ ಪರೀಕ್ಷಾ ಕೇಂದ್ರದಲ್ಲಿ ಮೊಕ್ಕಂ ಹೂಡಬೇಕಾಗಿದ್ದ ನಿಯೋಜಿತ ಸ್ಥಾನಿಕ ಪರಿವೀಕ್ಷಕರು ಪರೀಕ್ಷೆಯ ಮಧ್ಯೆದಲ್ಲಿ ತಮ್ಮ ಇಲಾಖಾ ಕಚೇರಿಗೆ ಹೋಗಿ ಬರುತ್ತಿರುವುದು ಪರೀಕ್ಷಾ ಕೇಂದ್ರದಲ್ಲಿ ಹೇಳುವರು ಕೇಳುವರು ಇಲ್ಲದಂತಾಗಿದೆ ಎಂಬ ದೂರು ಕೇಳಿಬರುತ್ತಿದೆ. ಪರೀಕ್ಷಾ ಕೇಂದ್ರಕ್ಕೆ ಪೊಲೀಸ್‌ ಸಿಬ್ಬಂದಿ ಕೂಡಾ ಅಲ್ಲಿಲ್ಲ. ಪರೀಕ್ಷಾ ಕೇಂದ್ರಕ್ಕೆ ಯಾರಾದರೂ ಅಪರಿಚಿತರು ಬಂದು ಹೋಗುವುದಕ್ಕೆ ನಿರ್ಬಂಧವಿಲ್ಲ. ಒಟ್ಟಾರೆ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಯ ಗಂಭೀರತೆ ಇಲ್ಲವಾಗಿರುವುದು ದುರಂತವೇ ಸರಿ.

ಪ್ರತಿ ಸಾರಿಯೂ ಇಲ್ಲೇ ಪರೀಕ್ಷೆ..
“ಸೂಕ್ತ ಗಾಳಿ, ಬೆಳಕು, ಇತರೇ ಮೂಲ ಸೌಲಭ್ಯವನ್ನು ಹೊಂದಿರುವ ಕಟ್ಟಡವನ್ನು ಗುರುತಿಸಬೇಕಾದ ಜವಾಬ್ದಾರಿ ಸ್ಥಳೀಯ ಪರೀಕ್ಷಾ ಮಂಡಳಿಯ ಅಧ್ಯಕ್ಷರದು. ಪಟ್ಟಣದಲ್ಲಿ ಸಾಕಷ್ಟು ಸರ್ಕಾರಿ ಅಥವಾ ಖಾಸಗಿ ಶಾಲಾ ಕಟ್ಟಡಗಳಿವೆ. ಅಲ್ಲಿ ಪರೀಕ್ಷಾ ಕೇಂದ್ರ ಸ್ಥಾಪಿಸಬಹುದಾಗಿತ್ತು. ಆದರೆ ಪ್ರತಿ ಸಾರಿಯೂ ಆಯಿಲ್‌ಮಿಲ್‌ ಕಟ್ಟಡವನ್ನು ಪರೀಕ್ಷಾ ಕೇಂದ್ರಕ್ಕೆ ಆಯ್ಕೆ ಮಾಡಿಕೊಳ್ಳುತ್ತಿರುವ ಇದರ ಹಿಂದಿನ ಮರ್ಮ ಗೊತ್ತಾಗುತ್ತಿಲ್ಲ. ಪ್ರತಿ ಸಾರಿಯೂ ಐಟಿಐ ಪರೀಕ್ಷೆಗಳನ್ನು ಗುಪ್ತವಾಗಿ ನಡೆಸುತ್ತಿದ್ದಾರೆ.
ಮಹಾಲಿಂಗಪ್ಪ, ಎಸ್‌ಎಫ್‌ಐ ಜಿಲ್ಲಾ ಮುಖಂಡ

ಅವ್ಯವಹಾರ ನಡೆದಿಲ್ಲ..
ನಿಯೋಜನೆಯಂತೆ ಪರೀಕ್ಷೆ ಆರಂಭದಿಂದ ಮುಕ್ತಾಯವರೆಗೂ ಪರೀಕ್ಷಾ ಕೇಂದ್ರದಲ್ಲಿ ಸ್ಥಾನಿಕ ಪರಿವೀಕ್ಷಕರಾಗಿ ಕಾರ್ಯನಿರ್ವಹಿಸುತ್ತೇನೆ ಯಾವುದೇ ಅವ್ಯವಹಾರ ನಡೆದಿಲ್ಲ. ನಡೆಯಲು ಬಿಡುವುದಿಲ್ಲ.
ಈಶ್ವರಚಂದ್‌, ಕ್ಷೇತ್ರಶಿಕ್ಷಣಾದಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next