Advertisement
“ಇದು ಅಪಾಯಕಾರಿ ಪಿಚ್ ಮೇಲೆ ಟೆಸ್ಟ್ ಪಂದ್ಯವೊಂದನ್ನು ಆಡುವ ರೀತಿಯಲ್ಲಿದೆ. ಚೆಂಡು ಅತ್ಯುತ್ತಮ ರೀತಿಯಲ್ಲಿ ಸೀಮ್ ಮತ್ತು ಸ್ಪಿನ್ ಆಗುತ್ತಿದೆ. ಬ್ಯಾಟ್ಸ್‌ಮನ್ ಮಾತ್ರ ಅತ್ಯಂತ ಕಠಿನ ಸನ್ನಿವೇಶದಲ್ಲಿದ್ದಾರೆ. ಸ್ವಲ್ಪ ಯಾಮಾರಿದರೂ ವಿಕೆಟ್ ಪತನ ಖಂಡಿತ. ಆತ ರನ್ನೂ ಗಳಿಸಬೇಕು, ವಿಕೆಟನ್ನೂ ಉಳಿಸಿಕೊಳ್ಳಬೇಕು, ಟೆಸ್ಟ್ ಪಂದ್ಯವನ್ನೂ ಗೆಲ್ಲಿಸಬೇಕಾದ ಅನಿವಾರ್ಯತೆಯಲ್ಲಿದ್ದಾನೆ’ ಎಂದು ಗಂಗೂಲಿ ಇಲ್ಲಿ ನಡೆದ “100 ಅವರ್, 100 ಸ್ಟಾರ್’ ಕಾರ್ಯಕ್ರಮದಲ್ಲಿ ಈ ಅಭಿಪ್ರಾಯಪಟ್ಟರು.
“ಇಂದಿನ ಪರಿಸ್ಥಿತಿಯಿಂದ ನಾನು ಬಹಳ ಚಿಂತಿತನಾಗಿದ್ದೇನೆ. ಈ ಮಹಾಮಾರಿಯನ್ನು ಹೇಗೆ ಕೊನೆಗೊಳಿಸಬಹುದೆಂಬುದೇ ದೊಡ್ಡ ಪ್ರಶ್ನೆ. ಯಾವಾಗ ಜಗತ್ತು ಸಹಜಸ್ಥಿತಿಗೆ ಮರಳುತ್ತದೋ, ಯಾರಿಗೂ ಗೊತ್ತಿಲ್ಲ. ಆದರೆ ಆದಷ್ಟು ಬೇಗ ಈ ಸಂಕಟ ನಿವಾರಣೆಯಾಗಲಿ ಎಂಬುದೇ ನನ್ನ ಹಾರೈಕೆ…’ ಎಂದು ಗಂಗೂಲಿ ಹೇಳಿದರು. “ಲಾಕ್‌ಡೌನ್ ನಿಮಿತ್ತ ನಾನು ಕಳೆದ 30-32 ದಿನಗಳಿಂದ ಮನೆಯಲ್ಲಿ ಕುಟುಂಬದವರೊಂದಿಗೆ ಕಾಲ ಕಳೆಯುತ್ತಿದ್ದೇನೆ. ಇವರ ಜತೆ ಇರಲು ಇಷ್ಟೊಂದು ಸಮಯ ಸಿಗುತ್ತದೆಂದು ನಾನು ಯೋಚಿಸಿಯೇ ಇರಲಿಲ್ಲ. ಇದೊಂದು ಅತ್ಯಂತ ಖುಷಿಯ ಸಂಗತಿ’ ಎಂಬುದಾಗಿ ಸೌರವ್ ಗಂಗೂಲಿ ಹೇಳಿದರು.