30 ಗಿ 40 ಅಳತೆಯ ಜಾಗದಲ್ಲಿ ಮನೆಕಟ್ಟಿಕೊಂಡವರಂತೆ, 90 ಅಂಕದಲ್ಲೇ ಬದುಕು ಅನ್ನೋದು ಇದೆ ಎಂಬುದನ್ನು ನಾವು ಇತ್ತೀಚಿನ ಜನಾಂಗಕ್ಕೆ ಹೇಳಿಕೊಡುತ್ತಿರುವ ಪಾಠ ! 90 ಮಾರ್ಕ್ಸ್ಗಿಂತ ಹೆಚ್ಚಾಗಿ ನೀನು ಪರೀಕ್ಷೆಯಲ್ಲಿ ಅಂಕ ಪಡೆದೆ ಎಂದಾದರೆ ನೀನು ಲೈಫ್ನಲ್ಲಿ ಗೆದ್ದೆ ಎಂಬುದಾಗಿ ಹೊಸ ವ್ಯಾಖ್ಯಾನಕ್ಕೆ ಸಿದ್ದವಾಗುತ್ತಿರುವ ಕಾಲವಿದು. ಮಾರ್ಕ್ಸ್ಗಳಿದ್ದರೆ ಮಾತ್ರವೇ ನಿಮಗೊಂದು ಕೆಲಸ, ಕೈಗೊಂದಿಷ್ಟು ದುಡ್ಡು ಸಿಗುತ್ತದೆ. ಅದ್ದರಿಂದಲೇ ಅದೇ ಜೀವನವೆಂದು ಭಾವಿಸಿಕೊಂಡಿದ್ದೇವೆ. ಅಷ್ಟಕ್ಕೂ ಶಿಕ್ಷಣವೆನ್ನುವುದು ಮಾರ್ಕ್ಸ್ ಅಲ್ಲವೇ ಅಲ್ಲ.ಮಾರ್ಕ್ಸ್ ಇಟ್ಟಿರುವುದು ನೀವು ಕಲಿತಿರುವುದನ್ನು ಒಂದಿಷ್ಟು ಅಳೆಯಲು ಮಾತ್ರ. ಈಗ ಇಟ್ಟಿರುವ ಮಾಪನಗಳು ಅವುಗಳನ್ನು ಅಳೆಯಲು ಸಮರ್ಪಕವಾಗಿವೆಯೇ ಎಂದು ಕೇಳಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಕೇವಲ ಮೂರು ಗಂಟೆಯಲ್ಲಿ ವ್ಯಕ್ತಿಯ ಕಲಿಕಾ ವ್ಯಕ್ತಿತ್ವವೊಂದನ್ನು ಹೇಗೆ ಓರೆಗೆ ಹಚ್ಚಲಾದೀತು!? ನೀವೇ ಊಹಿಸಿ!
ನಿಮಗೆಲ್ಲಾ ಇದನ್ನು ಯಾಕೆ ಹೇಳುತ್ತಿದ್ದೇನೆ ಅಂದರೆ ಓದು ಮತ್ತು ಪರೀಕ್ಷೆಗಳೇ ಜೀವನವಲ್ಲ ಎಂಬುದನ್ನು ನೀವು ಕಂಡುಕೊಳ್ಳಬೇಕಿದೆ. ಓದು ಅನ್ನುವುದು ಕೇವಲ ಅಕ್ಷರ ಜ್ಞಾನವಷ್ಟೇ! ಬುದ್ದಿವಂತಿಕೆ ಅಲ್ಲ. ನಿಮಗೊಂದಿಷ್ಟು ವ್ಯವಹಾರ ಜ್ಞಾನ ಅದರಿಂದ ಲಭ್ಯವಾಗುತ್ತದೆ ಅಷ್ಟೇ. ಶಿಕ್ಷಣವೂ ನಿಮ್ಮೊಳಗಿನ ಪ್ರತಿಭೆಯನ್ನು ಆಚೆ ತರಲು ಕೇವಲ ಸಹಾಯಕವಷ್ಟೇ. ಅದನ್ನು ಪ್ರತಿಯೊಬ್ಬರು ತಮ್ಮಷ್ಟಕ್ಕೆ ತಾವೇ ಅರಿತುಕೊಳ್ಳಬೇಕಿದೆ.
ಪರೀಕ್ಷೆ ಫಲಿತಾಂಶದ ನಂತರದ ಆತ್ಮಹತ್ಯೆಗಳು, ಓದಿನ ಒತ್ತಡಕ್ಕೆ ಬಿದ್ದ ಸಾವುಗಳು ಇಂದು ಶಿಕ್ಷಣವನ್ನು ಬದುಕು ಇಲ್ಲವೇ ಸಾವು ಅನ್ನುವ ಸ್ಥಿತಿಗೆ ತಂದು ನಿಲ್ಲಿಸಿವೆ. ಎಲ್ಲರ ಅಪೇಕ್ಷೆ ಶಿಕ್ಷಣದ ಕುರಿತಾಗಿ ಒಂದೇ ಆಗಿದೆ ಅಂಕ ಮತ್ತು ಕೆಲಸ. ನೀವೆ ಒಂದು ಲೆಕ್ಕಚಾರ ಮಾಡಿಕೊಳ್ಳಿ. ಓದುವ ಪ್ರತಿಯೊಬ್ಬರಿಗೂ ಅವರು ಬಯಸಿದ ಕೆಲಸ ನೀಡಲು ಸಾಧ್ಯವೇ!? ಸಾಧ್ಯವಾಗಲಾರದು ಕೂಡ. ಶಿಕ್ಷಣ ನಿಮಗೆ ಬದುಕು ಕಲಿಸುವಂಥಾದ್ದು. ಅದರಿಂದ ನಿಮಗೆ ಅಂಕಗಳು ಬರಬಹುದು, ಬಾರಧೆನೆ ಕೂಡ ಇರಬಹುದು. ಆದರೆ, ನೀವು ಏನು ಕಲಿತ್ತಿದ್ದೀರಿ ಅನ್ನುವುದು ಮುಖ್ಯವಾಗುತ್ತದೆ. ಪರೀಕ್ಷೆಯಲ್ಲಿ ಕೊಟ್ಟಿರುವ ಆ ಹತ್ತಾರು ಪ್ರಶ್ನೆಗಳಿಗೆ ನಿಮಗೆ ಉತ್ತರ ಗೊತ್ತಿಲ್ಲದಿರಬಹುದು. ಅದಕ್ಕಿಂತ ಹೆಚ್ಚು ಗೊತ್ತಿರಬಹುದು.
ನೀವು ಆ ಪ್ರಶ್ನೆಗಳಿಗೆ ಸಂಬಂಧಪಟ್ಟಂತೆ ಸೋತಿರುವುದೇ ಹೊರತು ಅಲ್ಲಿ ನಿಮ್ಮ ಕಲಿತ ಶಿಕ್ಷಣ ಸೋತಿರುವುದಿಲ್ಲ. ಬೇರೆ ಬೇರೆ ರೂಪದಲ್ಲಿ ನಿಮ್ಮಲ್ಲಿ ಹುದುಗಿ ಹೋಗಿರುತ್ತದೆ. ಸಂದರ್ಭ ಸಿಕ್ಕಾಗ ಅದು ಆಚೆ ಬಂದು ಫಲ ನೀಡುತ್ತದೆ. ಪರೀಕ್ಷೆಯಲ್ಲಿ ರ್‍ಯಾಂಕ್ ಬಂದವ ಬದುಕಿನಲ್ಲಿ ಯಾವ ಪರಿ ಗೆದ್ದಿದ್ದಾನೆ ಎಂಬ ಸಾವಿರಾರು ಉದಾಹರಣೆಗಳು ನಮ್ಮ ಮುಂದಿವೆ.
ಪರೀಕ್ಷೆಯಲ್ಲಿ ಸೋತವ, ಬದುಕನ್ನು ಹಿಡಿದು ಪಳಗಿಸಿಕೊಂಡು ಅದರ ಮೇಲೆಯೇ ಸವಾರಿ ಮಾಡಿರುವ ಲಕ್ಷೊàಪಲಕ್ಷ ಉದಾಹರಣೆಗಳು ನಮ್ಮ ಮುಂದಿವೆ. ಹಾಗಾದರೆ ನಾವು ಓದಲೇಬಾರದಾ? ಸುಮ್ಮನೇ ಇದ್ದು ಬಿಡುವುದಾ? ಎಂಬುದು ನಿಮ್ಮ ಪ್ರಶ್ನೆಯಾಗಿದ್ದರೆ ಅದಕ್ಕೂ ಉತ್ತರವಿದೆ. ನಿಮಗೆ ಶಿಕ್ಷಣ ಕೊಡಮಾಡಲ್ಪಡುವುದನ್ನು ಎಲ್ಲವನ್ನೂ ಪ್ರಾಮಾಣಿಕವಾಗಿ ಕಲಿಯುತ್ತ ಹೋಗಿ. ಅದನ್ನು ಬದುಕಿನೊಂದಿಗೆ ಬೆರೆಸಿಕೊಳುತ್ತ ಹೋಗಿ. ಮೂರು ಗಂಟೆಯಲ್ಲಿ ಯಶಸ್ವಿಯಾಗಿ ಹೊರಹಾಕಲಾಗಲಿಲ್ಲ ಅಂದ ಮಾತ್ರಕ್ಕೆ ನೀವು ಶಿಕ್ಷಣ ಕ್ರಮದಿಂದ ಸೋತಂತೆ ಇಲ್ಲ. ಹಾಗಾದರೆ, ಫೇಲ್ ಅಂತ ಸರ್ಟಿಫೈಡ್ ಮಾಡ್ತಾರಲ್ಲ ಅಂತ ನೀವು ಕೇಳಬಹುದು. ಅದು ನಮ್ಮಂಥವರೇ ರೂಪಿಸಿಕೊಂಡ ಒಂದು ಕ್ರಮ ಅಷ್ಟೇ. ಮೊದಲೇ ಹೇಳಿದಂತೆ ಕೇಳಿದ ಪ್ರಶ್ನೆಗಳ ಮೇಲೆ ಆಧರಿಸಿ ನಿಮ್ಮನ್ನು ಅಳೆಯಲಾಗುವುದು ಎಂದು. ಆವಾಗಲೇ ಹೇಳಿದಂತೆ ನಮ್ಮ ಶಿಕ್ಷಣಕ್ರಮವೂ ಒಂದಿಷ್ಟು ಅಸಂಬದ್ಧವಾಗಿರುವುದು ಕೂಡ ಉಂಟು.
ನೆನಪಿರಲಿ ಗೆಳೆಯರೇ, ಬದುಕು ಅನ್ನೋದು ತುಂಬಾ ಸುಂದರವಾದದ್ದು. ನೀವು ನಿಮ್ಮ ಉಸಿರಾಟದ ದಿನಗಳಲ್ಲಿ ಅದಕ್ಕಿಂತ ಸುಂದರವಾದದ್ದನ್ನು ಕಾಣಲಾರಿರಿ. ಪ್ರಕೃತಿ ನಿಮಗೇನು ಕಲಿಸಬೇಕೊ ಅದನ್ನು ಕಲಿಸಿಯೇ ತೀರುತ್ತದೆ. ನಮ್ಮ ತಂದೆ-ತಾಯಿಗಳು ಮತ್ತು ಅವರ ಪೂರ್ವಿಕರು ಓದುಬರಹ ಗೊತ್ತಿಲ್ಲದೇ ಎಂತಹ ಅದ್ಭುತ ಮತ್ತು ಅರ್ಥಗರ್ಭಿತ ಜೀವನ ನಡೆಸಿದ್ದರು ಎಂಬುದನ್ನು ನೀವು ಊಹಿಸಿಕೊಳ್ಳಿ. ಹಾಗಂತ ನೀವು ನಾಳೆಯಿಂದ ಶಾಲೆಗೆ ಹೋಗಬೇಡಿ, ಪರೀಕ್ಷೆ ಬರೆಯಬೇಡಿ ಎಂದು ನಾನು ಹೇಳುತ್ತಿಲ್ಲ. ನಾವೊಂದು ವ್ಯವಸ್ಥೆ ಒಳಗೆ ಇದ್ದಾಗ ಆ ವ್ಯವಸ್ಥೆ ಬಯಸುವಷ್ಟು ಒಂದಿಷ್ಟು ವ್ಯವಹಾರ ಜಾnನವನ್ನು ನಾವು ಶಿಕ್ಷಣದಿಂದ ಪಡೆಯೋಣ. ಅಷ್ಟನ್ನು ಕೊಡಲು ಶಿಕ್ಷಣವಿರುವುದು. ಉಳಿದಿದ್ದು ಅದರ ನಂತರದ ಸಾಧನೆ ಮಾಡುವುದು ಅವರಿವರಿಗೆ ಬಿಟ್ಟಿದ್ದು.
ತುಂಬು ಮಾರ್ಕ್ಸ್, ಕೈ ತುಂಬಾ ದುಡ್ಡು ತಗೆದುಕೊಳ್ಳುವವನ ಬದುಕು ಬಂಗಾರವೆಂದು ನೀವು ಭಾವಿಸಿದ್ದೀರಿ. ಅವನಿಗೂ ಅವನದೇ ಆದ ಕಿರಿಕಿರಿಗಳುಂಟು. ಓದುಬರಹ ಬಾರದವ ಅವನಿಗಿಂತ ಸುಂದರವಾಗಿ ಬದುಕಬಲ್ಲ. ನಮ್ಮ ಜೀವನದಲ್ಲಿ ಬದುಕಿಗೂ ನಮ್ಮ ಪಾಸ್‌ಫೇಲ್‌ಗೂ ಯಾವುದೇ ರೀತಿಯಲ್ಲಿ ಅಷ್ಟೊಂದು ಸಂಬಂಧ ಕಂಡು ಬಾರದು. ಕೇವಲ ಒಂದು ಫೇಲ್ ಅಥವಾ ಒಂದು ಅಂಕ ಕಡಿಮೆ ಬಂತೆಂದು ಪ್ರಾಣವನ್ನೇ ತಗೆದುಕೊಂಡು ಬದುಕು ಮುಗಿಸುತ್ತಾರಲ್ಲ ಅದೆಂತಹ ಹುಚ್ಚುತನ. ಬದುಕು ಎಷ್ಟು ದೊಡ್ಡದು. ಅದರಲ್ಲಿ ಪರೀಕ್ಷೆ, ಪಾಸ್‌ಫೇಲ್‌ಗಳು ಕೇವಲ ಬದುಕಿನ ಪುಸ್ತಕದ ಒಂದು ಪುಟ ಮಾತ್ರ. ಒಂದು ಪುಟ ಹರಿಯಿತೆಂದು ಪುಸ್ತಕ ಸುಡುವ ಮೂರ್ಖರುಂಟೇ!? ಜೀವನ ಕೊಡುವ ಶಿಕ್ಷಣ, ಅದು ಒಡ್ಡುವ ಪರೀಕ್ಷೆಗಳೇ ಬೇರೆ.
ನಾವು ಅದಕ್ಕೆ ಪಳಗಬೇಕು, ಒಗ್ಗಿಕೊಳ್ಳಬೇಕು. ಮೂರು ಗಂಟೆಯ ಪರೀಕ್ಷೆಯ ಸೋಲಿಗಲ್ಲ. ನಿಜಕ್ಕೂ ಅದು ಸೋಲೇ ಅಲ್ಲ. ಸಾಕಷ್ಟು ಅವಕಾಶಗಳು ಇವೆ. ಅದರ ಮೂಲಕವಾಗಿ ಸಾಗಿ ಗುರಿ ಸೇರಬಹುದು. ನಿಜ ಹೇಳಬೇಕು ಅಂದರೆ ಅದಕ್ಕೂ ಪರೀಕ್ಷೆಗೂ ಸಂಬಂಧವೇ ಇಲ್ಲ. ಈಗಾಲಾದರೂ ನಿಮ್ಮ ಅರಿವೆಗೆ ಬಂದಿರಬೇಕು. ಪರೀಕ್ಷೆಯ ಫೇಲ್ ಬದುಕಿನ ಫೇಲ್ ಅಲ್ಲ ಅನ್ನುವುದು. ಪರೀಕ್ಷೆ ಫೇಲ್‌ನಿಂದ ಬದುಕನ್ನು ಫೇಲ್ ಮಾಡಿಕೊಳ್ಳುವ ವ್ಯರ್ಥ ಅಪಾಯಕಾರಿ ಪ್ರಯತ್ನಕ್ಕೆ ಇಳಿಯಬೇಡಿ.
– ಸದಾಶಿವ್ ಸೊರಟೂರು