ಹೊಸದಿಲ್ಲಿ: ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಅವರ ಭಾರತ ಭೇಟಿ ದಿಢೀರ್ ಮುಂದೂಡಿಕೆಯಾಗಿದೆ.
ವೇಳಾಪಟ್ಟಿ ಪ್ರಕಾರ ರವಿವಾರ, ಸೋಮವಾರ ಭಾರತ ಪ್ರವಾಸ ಕೈಗೊಂಡು ಪಿಎಂ ಮೋದಿ ಅವರನ್ನು ಭೇಟಿಯಾಗಬೇಕಾಗಿತ್ತು. ಈ ಬಗ್ಗೆ ಟ್ವೀಟ್ ಮಾಡಿದ್ದ ಮಸ್ಕ್ “ಟೆಸ್ಲಾದ ಅನಿವಾರ್ಯ ಹೊಣೆಗಳಿಂದ ಭಾರತ ಭೇಟಿ ಮುಂದೂಡುತ್ತಿದ್ದೇನೆ. ಆದರೆ ಈ ವರ್ಷದ ಮುಂದಿನ ಭಾಗದಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದೇನೆ’ ಎಂದು ಬರೆದುಕೊಂಡಿದ್ದರು.
ಟೆಸ್ಲಾಕ್ಕೆ ಸಂಬಂಧಿಸಿದ ಸಭೆಯಲ್ಲಿ ಮಸ್ಕ್ ಎ.23ಕ್ಕೆ ಪಾಲ್ಗೊಳ್ಳಬೇಕಿರುವ, ಭಾರತ ಭೇಟಿ ಮುಂದೂಡಿಕೆಯಾಗಿದೆ. ಈ ಬಾರಿ ಮಸ್ಕ್ ಭಾರತ ಪ್ರವಾಸ ಕೈಗೊಂಡಿದ್ದರೆ ಟೆಸ್ಲಾದ ಉತ್ಪಾ ದನ ಘಟಕ ಆರಂಭ ಆಗುವ ಬಗ್ಗೆ ಘೋಷಣೆ ಆಗುವ ನಿರೀಕ್ಷೆಗಳಿದ್ದವು.
ಮೋದಿ ಸೋಲು ಮಸ್ಕ್ ಗೂ ಗೊತ್ತು: ಕಾಂಗ್ರೆಸ್ ವ್ಯಂಗ್ಯ
ಮಸ್ಕ್ ಗೂ ಮೋದಿ ಸೋಲುವುದು ಗೊತ್ತಾಗಿದೆ. ಹಾಗಾಗಿ ಅವರು ಭಾರತ ಭೇಟಿ ಮುಂದೂಡಿದ್ದಾರೆ. “ಇಂಡಿಯಾ’ ಕೂಟದ ಪ್ರಧಾನಿ ಶೀಘ್ರ ಮಸ್ಕ್ರನ್ನು ಭಾರತಕ್ಕೆ ಸ್ವಾಗತಿ ಸಲಿದ್ದಾರೆ ಎಂದು ಕೈ ನಾಯಕ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ. ಕೂಟದ ಇತರ ಪಕ್ಷಗಳು ಮೋದಿಯನ್ನು ಟೀಕಿಸಿವೆ.