ಶ್ರೀನಗರ: ಭದ್ರತಾ ಪಡೆಗಳು ಉಗ್ರರನ್ನು ಹತ್ಯೆಗೈಯುವ ಬದಲು ಸೆರೆ ಹಿಡಿಯಬೇಕು ಎಂದು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಶನಿವಾರ(ನ2) ಒತ್ತಾಯಿಸಿದ್ದು, ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ.
ಜಮ್ಮು ಮತ್ತು ಕಾಶ್ಮೀರದಾದ್ಯಂತ ಇತ್ತೀಚೆಗೆ ಹೆಚ್ಚುತ್ತಿರುವ ದಾಳಿಯನ್ನು ಉಗ್ರರನ್ನು ಸೆರೆ ಹಿಡಿದು ವಿಚಾರಣೆ ಮಾಡುವ ಮೂಲಕ ನಿಗ್ರಹಿಸಬಹುದು. ಹಿಂಸಾಚಾರದ ಹಿಂದಿನ ವಿಶಾಲ ಜಾಲಗಳ ಮಾಸ್ಟರ್‌ಮೈಂಡ್‌ಗಳನ್ನು ಬಹಿರಂಗಪಡಿಸಲು ಅದು ಸಹಾಯ ಮಾಡಬಹುದು ಎಂದು ಅಬ್ದುಲ್ಲಾ ಹೇಳಿದ್ದಾರೆ.
ಇತ್ತೀಚಿನ ಬುದ್ಗಾಮ್ ಉಗ್ರರ ದಾಳಿಯ ತನಿಖೆಗೆ ಫಾರೂಕ್ ಅಬ್ದುಲ್ಲಾ ಕರೆ ನೀಡಿದ್ದು, ‘ಜಮ್ಮು ಮತ್ತು ಕಾಶ್ಮೀರ ಸರ್ಕಾರವನ್ನು ಅಸ್ಥಿರಗೊಳಿಸಲು’ ಪ್ರಯತ್ನಿಸುತ್ತಿರುವವರು ಸಂಚು ರೂಪಿಸಿರಬಹುದು ಎಂದು ಶಂಕಿಸಿದ್ದಾರೆ.
ಫಾರೂಕ್ ಅಬ್ದುಲ್ಲಾ ಹೇಳಿಕೆಗೆ ಪ್ರತಿಕ್ರಿಯಿಸಿದ ಎನ್‌ಸಿಪಿ-ಎಸ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಮಾಜಿ ಸಿಎಂ ಹೇಳಿಕೆಯನ್ನು ಕೇಂದ್ರ ಸರ್ಕಾರ ಮತ್ತು ಗೃಹ ಸಚಿವಾಲಯ ಎಚ್ಚರಿಕೆಯಿಂದ ಪರಿಗಣಿಸಬೇಕು ಎಂದು ಕರೆ ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ ಅವರು ಫಾರೂಕ್ ಅವರ ತನಿಖೆಯ ಸಲಹೆಯನ್ನು ತಿರಸ್ಕರಿಸಿ “ತನಿಖೆ ಮಾಡಲು ಏನಿದೆ? ಉಗ್ರವಾದ ಮತ್ತು ಉಗ್ರರು ಪಾಕಿಸ್ಥಾನದಿಂದ ಬರುತ್ತಿದೆ ಎಂದು ಫಾರೂಕ್ ಅಬ್ದುಲ್ಲಾ ಅವರಿಗೆ ತಿಳಿದಿದೆ, ಎಲ್ಲರಿಗೂ ತಿಳಿದಿರುವ ಸತ್ಯ. ನಾವೆಲ್ಲರೂ ನಮ್ಮ ಸೇನೆ, ಪೊಲೀಸ್ ಮತ್ತು ಭದ್ರತಾ ಪಡೆಗಳನ್ನು ಬೆಂಬಲಿಸಬೇಕು” ಎಂದು ತಿರುಗೇಟು ನೀಡಿದ್ದಾರೆ.