ನವದೆಹಲಿ: ಮಯನ್ಮಾರ್ ಮೂಲಕ ದೇಶಕ್ಕೆ 30-40 ಮಂದಿ ವಿವಿಧ ಸಂಘಟನೆಗಳಿಗೆ ಸೇರಿದ ಉಗ್ರರು ಲಗ್ಗೆ ಹಾಕಿ ದಾಳಿ ನಡೆಸಲಿದ್ದಾರೆ.
ವಿಶೇಷವಾಗಿ ಮಣಿಪುರ ಕೇಂದ್ರೀಕರಿಸಿ ಕುಕೃತ್ಯ ನಡೆಸಲಿದ್ದಾರೆ ಎಂಬ ಬಗ್ಗೆ ಗುಪ್ತಚರ ಮೂಲಗಳು ಮುನ್ನೆಚ್ಚರಿಕೆ ನೀಡಿವೆ.
ಭಾರತದ ನೆರೆಯ ದೇಶದಲ್ಲಿ ಸೇನೆ ದಂಗೆ ಎದ್ದು ಅಧಿಕಾರ ವಶಪಡಿಸಿ ಒಂದು ವರ್ಷ ಸಮೀಪಿಸುತ್ತಿರುವಂತೆಯೇ ಇಂಥದ್ದೊಂದು ಮುನ್ಸೂಚನೆ ಲಭಿಸಿದೆ. ಇದರ ಜತೆಗೆ ಆ ದೇಶದಲ್ಲಿ ಭಾರತವನ್ನು ಗುರಿಯಾಗಿರಿಸಿಕೊಂಡು ಹಲವು ಕುತ್ಸಿತ ಚಟುವಟಿಕೆಗಳು ನಡೆಯುತ್ತಿವೆ ಎಂದು ಗುಪ್ತಚರ ಸಂಸ್ಥೆಗಳು ಆತಂಕ ವ್ಯಕ್ತಪಡಿಸಿವೆ.
ಪೀಪಲ್ಸ್ ರೆವೊಲ್ಯೂಷನರಿ ಪಾರ್ಟಿ ಆಫ್ ಕಾಂಗ್ಲೆಪಿಕ್ (ಪ್ರಿಪಾಕ್), ಯುನೈಟೆಡ್ ನ್ಯಾಷನಲ್ ಲಿಬರೇಷನ್ ಫ್ರಂಟ್ (ಯುಎನ್‌ಎಲ್‌ಎಫ್), ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ) ಸಂಘಟನೆಗಳಿಗೆ ಸೇರಿದ 150 ಉಗ್ರರು ಭಾರತ ಮತ್ತು ಮಯನ್ಮಾರ್ ಗಡಿ ಪ್ರದೇಶದಲ್ಲಿ ಸಕ್ರಿಯರಾಗಿದ್ದಾರೆ ಎಂದು ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ “ಡಿಎನ್‌ಎ’ ಆಂಗ್ಲ ಪತ್ರಿಕೆ ವರದಿ ಮಾಡಿದೆ.
ಇದನ್ನೂ ಓದಿ:ರಾಜ್ಯದಲ್ಲಿಂದು 299 ಕೋವಿಡ್ ಪಾಸಿಟಿವ್ ಪತ್ತೆ: 2 ಸಾವು
2019ರಲ್ಲಿ ಈ ಎಲ್ಲಾ ಸಂಘಟನೆಗಳಿಗೆ ಸೇರಿದ ಶಿಬಿರಗಳನ್ನು ದೇಶದ ಸೇನಾಪಡೆ, ಮಯನ್ಮಾರ್ ಸಹಯೋಗದ ಜತೆಗೆ ನಾಶಗೊಳಿಸಿತ್ತು. ಚಿನ್ ಪ್ರಾಂತ್ಯದಲ್ಲಿ ಉಗ್ರ ಶಿಬಿರಗಳು ಮತ್ತೆ ಸಕ್ರಿಯವಾಗಿವೆ ಎಂದೂ ಮಾಹಿತಿ ಕೇಂದ್ರ ಸರ್ಕಾರಕ್ಕೆ ಲಭ್ಯವಾಗಿದೆ.
ಪಿಎಲ್‌ಎ ಸಂಘಟನೆಯ 18-20 ಮಂದಿ ಉಗ್ರರು ಭಾರತ-ಮಯನ್ಮಾರ್ ಗಡಿ ಪ್ರದೇಶದ ಸೆನಾಮ್ ಎಂಬಲ್ಲಿಂದ ಸಿಯಾಲ್ಮಿ ವರೆಗೆ ಸಕ್ರಿಯರಾಗಿದ್ದಾರೆ. ಅವರೇ ಕಳೆದ ತಿಂಗಳು ಮಣಿಪುರದಲ್ಲಿ ಅಸ್ಸಾಂ ರೈಫಲ್ಸ್ ಯೋಧರ ಮೇಲೆ ನಡೆಸಲಾಗಿರುವ ದಾಳಿಯ ರೂವಾರಿಗಳಾಗಿದ್ದಾರೆ.