Advertisement

ಉಗ್ರ ಸಂಘಟನೆಗೆ ದರೋಡೆ ಹಣ

06:00 AM Oct 04, 2018 | Team Udayavani |

ಬೆಂಗಳೂರು: ಕೆಲ ತಿಂಗಳ ಹಿಂದಷ್ಟೇ ರಾಮನಗರದಲ್ಲಿ ಬಂಧನಕ್ಕೊಳಗಾದ ಜೆಎಂಬಿ ಸಂಘಟನೆಯ ಉಗ್ರ ಕೌಸರ್‌ ಬೌದ್ಧ ಧರ್ಮ ಗುರು ದಲೈಲಾಮಾ  ಹತ್ಯೆಗೆ ಸಂಚು ರೂಪಿಸಿರುವುದು ಮಾತ್ರವಲ್ಲದೆ, ದರೋಡೆ ಮತ್ತಿತರ ಅಪರಾಧ ಕೃತ್ಯಗಳಲ್ಲೂ ಭಾಗಿಯಾಗಿರುವ ಅಂಶ ಎನ್‌ಐಎ ತನಿಖೆ ವೇಳೆ ಬೆಳಕಿಗೆ ಬಂದಿದೆ.

Advertisement

ಎನ್‌ಐಎ ವಿಚಾರಣೆ ಸಂದರ್ಭದಲ್ಲಿ ಕೌಸರ್‌ ಕೆಲವೊಂದು ಮಹತ್ವದ ಮಾಹಿತಿಗಳನ್ನು ಬಾಯಿ ಬಿಟ್ಟಿದ್ದಾನೆ. ತನ್ನ ಜೆಎಂಬಿ ಸಂಘಟನೆಯನ್ನು ಆರ್ಥಿಕವಾಗಿ ಸದೃಢಪಡಿಸಲು ಹಣ ಹೊಂದಿಸಲು ಹರ ಸಾಹಸ ಪಡುತ್ತಿದ್ದ. ಹೀಗಾಗಿ ಬೆಂಗಳೂರು, ತುಮಕೂರಿನಲ್ಲಿ ವಾಸವಾಗಿದ್ದ ಸಂಘಟನೆಯ ಇತರೆ ಸದಸ್ಯರು ಹಾಗೂ ಸ್ಥಳೀಯ ಕೆಲ ವ್ಯಕ್ತಿಗಳ ಜತೆಗೂಡಿ ನಗರದ ಹೊರವಲಯಗಳಲ್ಲಿರುವ ಶ್ರೀಮಂತರ ಮನೆಗಳನ್ನು ಗುರುತಿಸಿ ದರೋಡೆ ಮಾಡುತ್ತಿದ್ದರು. ಬಂದ ಹಣದಲ್ಲಿ ಸ್ಥಳೀಯ ವ್ಯಕ್ತಿಗಳಿಗೂ ಹಂಚಿ, ಇನ್ನುಳಿದ ಮೊತ್ತವನ್ನು ಸಂಘಟನೆಯ ಖಾತೆಗೆ ವರ್ಗಾಯಿಸುತ್ತಿದ್ದ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಎನ್‌ಐಎ ಅಧಿಕಾರಿಗಳು ಬೆಂಗಳೂರು ಗ್ರಾಮಾಂತರ ಮತ್ತು ರಾಜ್ಯದ ಇತರ ಜಿಲ್ಲೆಗಳ ಪೊಲೀಸರ ಜತೆ ನಿರಂತರ ಸಂಪರ್ಕದಲ್ಲಿದ್ದು, ದರೋಡೆಗೊಳಗಾದ ಕುಟುಂಬಸ್ಥರ ಜತೆಗೂ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಆದರೆ, ಬೆಂಗಳೂರು ಗ್ರಾಮಾಂತರದಲ್ಲಿ ಪತ್ತೆಯಾಗಿರುವ ಪ್ರಕರಣದ ಘಟನಾ ಸ್ಥಳಗಳಲ್ಲಿ ಸಿಸಿಟಿವಿ ದೃಶ್ಯಾವಳಿಗಳು ಇಲ್ಲದ ಕಾರಣ ಕೌಸರ್‌ ಮತ್ತು ತಂಡದ ಸದಸ್ಯರ ಪತ್ತೆ ಕಾರ್ಯ ವಿಳಂಬವಾಗುತ್ತಿದೆ. ಹೀಗಾಗಿ ಈ ವ್ಯಾಪ್ತಿಯ ಎಲ್ಲ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿ, ಪರಿಶೀಲನೆ ಕಾರ್ಯ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಈ ಸಂಬಂಧ ಎನ್‌ಐಎ ಅಧಿಕಾರಿಗಳು ಆನೇಕಲ್‌ ತಾಲೂಕಿನ ಅತ್ತೀಬೆಲೆ ಪಿಳ್ಳರೆಡ್ಡಿ ಲೇಔಟ್‌ನಲ್ಲಿರುವ ವೆಂಕಟೇಶ್‌ ರೆಡ್ಡಿ ಹಾಗೂ ನಾಗರಾಜ್‌ ರೆಡ್ಡಿ ಅವರ ಮನೆಗಳಿಗೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಮತ್ತೂಂದೆಡೆ ಎನ್‌ಐಎ ಅಧಿಕಾರಿಗಳ ತನಿಖೆ ಮುಕ್ತಾಯಗೊಳ್ಳುತ್ತಿದ್ದಂತೆ ಆರೋಪಿ ಕೌಸರ್‌ನನ್ನು ಅತ್ತಿಬೆಲೆ ಪೊಲೀಸರು ವಶಕ್ಕೆ ಪಡೆಯಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಚಿನ್ನಾಭರಣ ದೋಚಿದ್ದರು:
ಕಳೆದ ಏಪ್ರಿಲ್‌ 24ರಂದು ರಾತ್ರಿ 10 ಗಂಟೆ ಸುಮಾರಿಗೆ ಉಗ್ರ ಕೌಸರ್‌ ಅಲಿ ಮತ್ತು ತಂಡ ವೆಂಕಟೇಶ್‌ ರೆಡ್ಡಿ ಅವರ ಮನೆಗೆ ನುಗ್ಗಿ ಅವರ ಕೈ, ಕಾಲುಗಳನ್ನು ಕಟ್ಟಿ ಮನೆಯಲ್ಲಿದ್ದ 4.5 ಲಕ್ಷ ರೂ. ನಗದು, 12 ಗ್ರಾಂ ತೂಕದ ಉಂಗುರ, 25 ಸಾವಿರ ರೂ. ಮೌಲ್ಯದ ವಾಚ್‌ ಹಾಗೂ ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣ ಹಾಗೂ ಬೆಳ್ಳಿಯ ವಸ್ತುಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ. ಇದೇ ರೀತಿ ನಾಗರಾಜ್‌ರೆಡ್ಡಿ ಅವರ ಮನೆಗೂ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ದರೋಡೆ ಮಾಡಿದ್ದಾರೆ. ಎರಡು ಪ್ರಕರಣಗಳಲ್ಲೂ ಆರೇಳು ಮಂದಿಯ ತಂಡ ಕೃತ್ಯವೆಸಗಿರುವುದು ಕಂಡು ಬಂದಿದೆ ಎಂದು ಮೂಲಗಳು ತಿಳಿಸಿವೆ.
ದೂರುದಾರರ ಮಾಹಿತಿ ಪ್ರಕಾರ ಎರಡು ಮನೆಗಳಿಗೆ ನುಗ್ಗಿದ ದರೋಡೆಕೋರರಿಗೆ ಉರ್ದು ಹೊರತು ಪಡಿಸಿ ಬೇರೆ ಯಾವುದೇ ಭಾಷೆ ಬರುತ್ತಿರಲಿಲ್ಲ. ಮಾಂಸ ಕತ್ತರಿಸುವ ಮಚ್ಚು ಹಾಗೂ ರೈಫ‌ಲ್‌ಗ‌ಳನ್ನು ಹೊಂದಿದ್ದರು. ಆರೋಪಿಗಳೆಲ್ಲರೂ 25-30 ವರ್ಷದ ವಯೋಮಾನದವರಾಗಿದ್ದಾರೆ ಎಂದಿದ್ದಾರೆ.

Advertisement

ಸಿಸಿಟಿವಿ ಪೂಟೇಜ್‌ ಸಂಗ್ರಹ!
ಜಮಾತ್‌-ಉಲ್‌-ಮುಜಾಹಿದ್ದೀನ್‌ ಬಾಂಗ್ಲಾದೇಶ್‌ (ಜೆಎಂಬಿ) ಸಂಘಟನೆ ಉಗ್ರ ಜಹೀಲುªಲ್‌ ಇಸ್ಲಾಂ ಅಲಿಯಾಸ್‌ ಕೌಸರ್‌ ಸೇರಿ ಆತನ ಸಹಚರರು ಕಲಬುರಗಿಯ ಬುದ್ಧವಿಹಾರ ಸೇರಿ ಟಿಬೇಟಿಯನ್‌ ಕ್ಯಾಂಪ್‌ಗ್ಳ ಮೇಲೆ ಕಣ್ಣಿಟ್ಟಿದ್ದರು ಎಂಬ ಅಂಶ ಬಹಿರಂಗಗೊಂಡ ಬೆನ್ನಲ್ಲೇ, ರಾಜ್ಯ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಗುಪ್ತಚರ ದಳದ ವಿಶೇಷ ತಂಡಗಳು ತನಿಖೆ ಆರಂಭಿಸಿದ್ದು, ಕಲಬುರಗಿಯ ಬುದ್ಧವಿಹಾರ, ಬೈಲುಕುಪ್ಪೆ, ಮುಂಡೋಡು ಟಿಬೇಟಿಯನ್‌ ಕ್ಯಾಂಪ್‌ಗ್ಳಿಗೆ ತೆರಳಿದ್ದು, ಮಾಹಿತಿ ಕಲೆ ಹಾಕುತ್ತಿವೆ. ಇದರ ಜತೆಗೆ, ಉಗ್ರ ಕೌಸರ್‌ ಸೇರಿ ಅಪರಿಚಿತರು ಕ್ಯಾಂಪ್‌ ಹಾಗೂ ಬುದ್ಧವಿಹಾರಕ್ಕೆ ಭೇಟಿ ನೀಡಿದ್ದರೇ ಎಂಬುದನ್ನು ಪತ್ತೆಹಚ್ಚುವ ಸಲುವಾಗಿ ಸಿಸಿಟಿವಿ ಪೂಟೇಜ್‌ ಸಂಗ್ರಹಿಸಲು ಮುಂದಾಗಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಅಲ್ಲದೆ, ರಾಜ್ಯ ಪೊಲೀಸ್‌ ಇಲಾಖೆ ಕೂಡ ಈ ನಿಟ್ಟಿನಲ್ಲಿ ಕಾರ್ಯ ತ್ಪತರವಾಗಿದೆ. ಉಗ್ರ ಕೌಸರ್‌ ಪೂರ್ವಾಪರ, ಆತ ರಾಜ್ಯದಲ್ಲಿ ವಿಧ್ವಂಸಕ ಕೃತ್ಯಗಳಿಗೆ ಸಂಚು ರೂಪಿಸಿದ್ದರ ಬಗ್ಗೆ ಮಾಹಿತಿ ಕೋರಿದೆ ಎಂದು ತಿಳಿದು ಬಂದಿದೆ.

– ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next