ಜಮ್ಮು-ಕಾಶ್ಮೀರ್: ಉಗ್ರಗಾಮಿ ಸಂಘಟನೆಯ ಸಹಚರನೊಬ್ಬನನ್ನು ಸ್ಫೋಟಕ ಮತ್ತು ಶಸ್ತ್ರಾಸ್ತ್ರಗಳೊಂದಿಗೆ ಗುರುವಾರ (ಜುಲೈ 08) ಬಂಧಿಸಿರುವುದಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ. ಈತನನ್ನು ಚೆಕ್ ಸಾರಿ ಸಿಂಗ್ ಪೊರಾ ಪಟ್ಟನ್ ನಿವಾಸಿ ಮೊಹಮ್ಮದ್ ಅಶ್ರಫ್ ದಾರ್ ಪುತ್ರ ಡ್ಯಾನಿಶ್ ಅಹ್ಮದ್ ದಾರ್ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:ಕೆಆರ್ ಎಸ್ ಜಲಾಶಯದಲ್ಲಿ ಬಿರುಕು ವಿಚಾರ ಕೇವಲ ಊಹಾಪೋಹ: ಸಚಿವ ನಿರಾಣಿ
ಜಮ್ಮು-ಕಾಶ್ಮೀರ ಪೊಲೀಸರು ಬಿಡುಗಡೆಗೊಳಿಸಿರುವ ಪ್ರಕಟಣೆಯಲ್ಲಿ, ಅರ್ಚಂದ್ ಹಾಮಾ ಮಗಂ ಸಮೀಪದ ರೈಲ್ವೆ ಕ್ರಾಸಿಂಗ್ ಬಳಿ ತಪಾಸಣೆ ನಡೆಸುತ್ತಿದ್ದಾಗ, ವ್ಯಕ್ತಿಯೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಚೀಲವನ್ನು ಹೊತ್ತುಕೊಂಡು ಹೋಗುತ್ತಿದ್ದಾಗ ತಡೆದಿದ್ದರು, ಈ ಸಂದರ್ಭದಲ್ಲಿ ಆತ ಪರಾರಿಯಾಗಲು ಯತ್ನಿಸಿದಾಗ ಬಂಧಿಸಿರುವುದಾಗಿ ತಿಳಿಸಿದ್ದಾರೆ.
ದಾರ್ ನನ್ನು ಬಂಧಿಸಿ ಚೀಲವನ್ನು ಪರಿಶೀಲಿಸಿದಾಗ ಆತನ ಬ್ಯಾಗ್ ನಲ್ಲಿ 1.2 ಕೆಜಿ ತೂಕದಷ್ಟು ಸ್ಫೋಟಕ ಮತ್ತು ಎರಡು ಎಲೆಕ್ಟ್ರಾನಿಕ್ ಡಿಟೋನೇಟರ್ ಅನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಬುಡ್ಗಾಮ್ ನ ವಿವಿಧ ಪ್ರದೇಶದಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಲಷ್ಕರ್ ಎ ತೊಯ್ಬಾ ಭಯೋತ್ಪಾದಕರಿಗೆ ಸ್ಫೋಟಕ ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುವ ಕಾರ್ಯದಲ್ಲಿ ದಾರ್ ತೊಡಗಿಕೊಂಡಿರುವುದಾಗಿ ಪ್ರಾಥಮಿಕ ತನಿಖೆ ವೇಳೆ ಮಾಹಿತಿ ನೀಡಿರುವುದಾಗಿ ವರದಿ ಹೇಳಿದೆ.