Advertisement

Terrorism: ನಕಲಿ ನೋಟು ಮುದ್ರಣ ಇನ್ನು “ಭಯೋತ್ಪಾದಕ ಕೃತ್ಯ”

12:09 AM Dec 13, 2023 | Pranav MS |

ಹೊಸದಿಲ್ಲಿ: “ಭಯೋತ್ಪಾದನ ಕೃತ್ಯ’ದ ಕಾನೂನಾತ್ಮಕ ವ್ಯಾಖ್ಯಾನವನ್ನು ಕೇಂದ್ರ ಸರಕಾರವು ಪರಿಷ್ಕರಿಸಿದೆ. ಇನ್ನು ಮುಂದೆ ನಕಲಿ ನೋಟುಗಳ ಮುದ್ರಣ, ಸರಕಾರಿ ಅಧಿಕಾರಿಗಳನ್ನು ಅಪಹರಿಸುವುದು, ಹಲ್ಲೆ ಮಾಡುವುದು ಅಥವಾ ಅವರ ಸಾವಿಗೆ ಕಾರಣವಾಗುವ ಮೂಲಕ ದೇಶದ ಆರ್ಥಿಕ ಮತ್ತು ಹಣಕಾಸು ಭದ್ರತೆಗೆ ಅಪಾಯ ತಂದೊಡ್ಡುವುದನ್ನು ಕೂಡ “ಭಯೋತ್ಪಾದನೆ” ಎಂದು ಪರಿಗಣಿಸಲಾಗುತ್ತದೆ.

Advertisement

ಮಂಗಳವಾರ ಲೋಕಸಭೆಯಲ್ಲಿ ಮಂಡಿಸಲಾದ ಭಾರತೀಯ ನ್ಯಾಯ ಸಂಹಿತೆಯ ಪರಿಷ್ಕೃತ ಮಸೂದೆ ಯಲ್ಲಿ ಈ ಅಂಶಗಳನ್ನು ಸೇರ್ಪಡೆ ಮಾಡಲಾಗಿದೆ. ಭಾರತೀಯ ದಂಡ ಸಂಹಿತೆಯ ಬದಲಿಗೆ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ಕ್ರಿಮಿನಲ್‌ ಪ್ರಕ್ರಿಯೆ ಸಂಹಿತೆಯ ಬದಲಿಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಇಂಡಿಯನ್‌ ಎವಿಡೆನ್ಸ್‌ ಆ್ಯಕ್ಟ್ ಬದಲು ಭಾರತೀಯ ಸಾಕ್ಷ್ಯ ಅಧಿನಿಯಮದ ಪರಿಷ್ಕೃತ ಮಸೂದೆಯನ್ನು ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮಂಡಿಸಿದ್ದಾರೆ.

ಪರಿಷ್ಕೃತ ಮಸೂದೆಯಲ್ಲಿ “ಭಯೋತ್ಪಾದನೆ’ಗೆ ಮರುವ್ಯಾಖ್ಯಾನ ನೀಡಲಾಗಿದೆ. ಜತೆಗೆ ಸೆಕ್ಷನ್‌ 86ರಲ್ಲಿ ಮಹಿಳೆಯ ಮಾನಸಿಕ ಆರೋಗ್ಯಕ್ಕೆ ಹಾನಿ ಮಾಡುವುದನ್ನು ಕೂಡ “ಕ್ರೌರ್ಯ”ದ ವ್ಯಾಪ್ತಿಗೆ ತರಲಾಗಿದೆ. ಮಸೂದೆಯ ಹಿಂದಿನ ಆವೃತ್ತಿಯಲ್ಲಿ ಸೆಕ್ಷನ್‌ 85ರ ಅನ್ವಯ ಪತ್ನಿಯ ವಿರುದ್ಧ ಕ್ರೌರ್ಯ ಮೆರೆಯುವಂಥ ಪತಿ ಅಥವಾ ಆತನ ಕುಟುಂಬದ ಸದಸ್ಯರಿಗೆ 3 ವರ್ಷಗಳ ಜೈಲು ಶಿಕ್ಷೆ ವಿಧಿಸುವ ಬಗ್ಗೆ ಪ್ರಸ್ತಾವಿ ಸಲಾಗಿತ್ತು. ಆದರೆ “ಕ್ರೌರ್ಯ’ದ ವ್ಯಾಖ್ಯಾನವನ್ನು ಅದರಲ್ಲಿ ಉಲ್ಲೇಖೀಸಿರಲಿಲ್ಲ.

ಆಗಸ್ಟ್‌ನಲ್ಲಿ ಈ ಮೂರು ಮಸೂದೆಗಳನ್ನು ಮಂಡಿಸಲಾಗಿತ್ತಾದರೂ ಹೆಚ್ಚಿನ ಪರಿಶೀಲನೆಗಾಗಿ ಸಂಸದೀಯ ಸಮಿತಿಗೆ ಒಪ್ಪಿಸಲಾಗಿತ್ತು. ಸಮಿತಿಯ ಶಿಫಾರಸು ಗಳನ್ನು ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಈ ಮೂರೂ ಮಸೂದೆಗಳನ್ನು ವಾಪಸ್‌ ಪಡೆದು, ಪರಿಷ್ಕೃತ ಆವೃತ್ತಿಯನ್ನು ಮಂಗಳವಾರ ಮಂಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next