ಚಿತ್ರದುರ್ಗ: ನಗರದ ಗಾಂಧಿ ವೃತ್ತದಲ್ಲಿ ಬಸವಕೇಂದ್ರ, ಶ್ರೀಮುರುಘಾಮಠ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಕ್ಯಾಂಡಲ್ ಬೆಳಗಿಸುವ ಮೂಲಕ ಉಗ್ರರ ಗುಂಡಿನ ದಾಳಿಗೆ ಬಲಿಯಾದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸೇರಿದ್ದ ನೂರಾರು ಸಾರ್ವಜನಿಕರು ಪಾಪಿ ಪಾಕಿಸ್ತಾನಕ್ಕೆ ಧಿಕ್ಕಾರ ಎಂದು ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು. ಅಲ್ಲದೆ ಭಾರತ ದೇಶವು ಶೀಘ್ರ ಪಾಪಿಗಳ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಬೇಕು, ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತೂಗೆಯಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ| ಶಿವಮೂರ್ತಿ ಮುರುಘಾ ಶರಣರು, ಭಯೋತ್ಪಾದನಾ ಕೃತ್ಯಗಳು ಈ ಜಗತ್ತಿಗೆ ಅಂಟಿದ ಮಾರಕ ಕಾಯಿಲೆಯಾಗಿದೆ. ಅದರಲ್ಲೂ ನೆರೆಯ ರಾಷ್ಟ್ರದಿಂದ ಭಯೋತ್ಪಾದನೆ ಕೃತ್ಯಗಳು ದೇಶದಲ್ಲಿ ನಿರಂತರವಾಗಿ ನಡೆಯುತ್ತಿವೆ.
ರಾಷ್ಟ್ರವನ್ನು ಕಾಯುವಂತ ವೀರ ಯೋಧರನ್ನ ಉಗ್ರರು ಗುರುವಾರ ನಡೆಸಿದ ಗುಂಡಿನ ದಾಳಿ, ಮಾನವ ಬಾಂಬ್ ದಾಳಿಯಿಂದ 40ಕ್ಕೂ ಹೆಚ್ಚಿನ ವೀರಯೋಧರು ಭಯೋತ್ಪಾದನೆಯ ಕೃತ್ಯಕ್ಕೆ ಒಳಗಾಗಿ ಅಮೂಲ್ಯವಾದ ಪ್ರಾಣ ಕಳೆದುಕೊಂಡು ಸಾವನ್ನಿಪ್ಪಿದ್ದು, ರಾಷ್ಟ್ರಕ್ಕೆ ತುಂಬಲಾರದ ನಷ್ಟವಾಗಿದೆ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ. ಮುಂದೆ ಈ ರೀತಿಯ ಕೃತ್ಯಗಳು ನಡೆಯಬಾರದು ಎಂದು ಆಗ್ರಹಿಸಿದರು.
ವೀರ ಯೋಧರು ಅಮೂಲ್ಯವಾದ ಪ್ರಾಣವನ್ನು ದೇಶಕ್ಕಾಗಿ ಬಲಿದಾನ ಮಾಡುವ ಹುತಾತ್ಮರಾಗಿದ್ದಾರೆಂದು ಕಂಬನಿ ಮಿಡಿದರು. ಇದೇ ಸಂದರ್ಭದಲ್ಲಿ ವೀರ ಮರಣವನ್ನಪ್ಪಿದ ಯೋಧರಿಗೆ ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು. ಸಾರ್ವಜನಿಕರು ಮೇಣದ ಬತ್ತಿ ಹಿಡಿದು ಜ್ಯೋತಿ ಬೆಳಗಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.
ವೀರಶೈವ ಸಮಾಜದ ಅಧ್ಯಕ್ಷ ಜಯಣ್ಣ, ಎಸ್‌ಜೆಎಂ ಸಂಸ್ಥೆಯ ಮುಖ್ಯಸ್ಥರು, ಎಸ್‌ಜೆಎಂ ವಿದ್ಯಾಪೀಠದ ಕಾರ್ಯ ದರ್ಶಿ ಎ.ಜೆ.ಪರಮಶಿವಯ್ಯ, ಕಾರ್ಯವನಿರ್ವಹಣಾಧಿಕಾರಿಗಳಾದ ಡಾ| ಈ.ಚಿತ್ರಶೇಖರ್, ಡಾ| ಜಿ.ಎನ್. ಮಲ್ಲಿಕಾರ್ಜುನಪ್ಪ ಇನ್ನಿತರರಿದ್ದರು.