Advertisement

ಉಗ್ರ ನಿಷೇಧಕ್ಕೇಕೆ ಆಕ್ಷೇಪ; ಪಾಕಿಸ್ತಾನ, ಚೀನಕ್ಕೆ ವಿದೇಶಾಂಗ ಸಚಿವ ಜೈಶಂಕರ್‌ ಟಾಂಗ್‌

08:20 PM Sep 25, 2022 | Team Udayavani |

ನ್ಯೂಯಾರ್ಕ್‌: ಭಯೋತ್ಪಾದನೆಯನ್ನು ರಾಜಕೀಯವಾಗಿ ದಾಳವಾಗಿ ಬಳಕೆ ಮಾಡಬಾರದು. ಉಗ್ರ ಕೃತ್ಯಗಳಲ್ಲಿ ಭಾಗಿಯಾದವರನ್ನು ವಿಶ್ವಸಂಸ್ಥೆಯ ನಿಷೇಧಿತ ಉಗ್ರರ ಪಟ್ಟಿಗೆ ಸೇರ್ಪಡೆ ಮಾಡುವುದಕ್ಕೆ ತಡೆಯೊಡ್ಡುವ ಕ್ರಮ ನಡೆಸುವವರ ಸಾಮಾನ್ಯ ಜ್ಞಾನವೇ ಪ್ರಶ್ನಾರ್ಹ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹೇಳಿದ್ದಾರೆ.

Advertisement

ವಿಶ್ವಸಂಸ್ಥೆಯ 77ನೇ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಕೆಲವೊಂದು ರಾಷ್ಟ್ರಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಗಡಿಯಾಚೆಯಿಂದ ಉಗ್ರರನ್ನು ಮತ್ತೊಂದು ದೇಶದ ಗಡಿಯೊಳಕ್ಕೆ ನುಗ್ಗಿಸುತ್ತಿವೆ ಎಂದು ಪಾಕಿಸ್ತಾನದ ಹೆಸರು ಪ್ರಸ್ತಾಪ ಮಾಡದೆ ಟೀಕಿಸಿದ್ದಾರೆ.

ದೇಶದಲ್ಲಿ ದುಷ್ಕೃತ್ಯ ನಡೆಸಿದ ಪಾಕಿಸ್ತಾನ ಮೂಲದ ಉಗ್ರ ಸಂಘಟನೆಯ ನಾಯಕರನ್ನು ವಿಶ್ವಸಂಸ್ಥೆಯ ನಿಷೇಧಿತ ಉಗ್ರರ ಪಟ್ಟಿಗೆ ಸೇರ್ಪಡೆ ಮಾಡುವುದರ ಬಗ್ಗೆ ಚೀನಾ ತಡೆಯೊಡ್ಡುತ್ತಿರುವುದರ ಬಗ್ಗೆಯೂ ಆಕ್ಷೇಪ ಮಾಡಿದ್ದಾರೆ.

“ಘಾತಕ ಕೃತ್ಯಗಳಲ್ಲಿ ಭಾಗಿಯಾಗುವವರ ವಿರುದ್ಧ ವಿಶ್ವಸಂಸ್ಥೆ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಆದರೆ, ಕೆಲವರು ಆ ಪಟ್ಟಿಗೆ ಉಗ್ರರನ್ನು ಸೇರ್ಪಡೆ ಮಾಡುವುದಕ್ಕೆ ತಡೆಯೊಡ್ಡುತ್ತಿದ್ದಾರೆ. ಭಯೋತ್ಪಾದನೆಯನ್ನು ರಾಜಕೀಯ ದಾಳವಾಗಿ ಬಳಕೆ ಮಾಡಬಾರದು’ ಎಂದು ಸ್ಪಷ್ಟ ಮಾತುಗಳಲ್ಲಿ ಚೀನಾಕ್ಕೆ ವಿದೇಶಾಂಗ ಸಚಿವರು ಚುಚ್ಚಿದ್ದಾರೆ.

ಶಾಂತಿಯ ಪರ:
ರಷ್ಯಾ ಮತ್ತು ಉಕ್ರೇನ್‌ ನಡುವಿನ ಯುದ್ಧ ಕೊನೆಗಾಣಿಸಬೇಕು ಎಂದು ಜೈಶಂಕರ್‌ ಪ್ರತಿಪಾದಿಸಿದ್ದಾರೆ. ಭಾರತ ನಿಲುವು ಯಾರ ಕಡೆಗೆ ಎಂದು ಜಗತ್ತಿನ ಹಲವು ರಾಷ್ಟ್ರಗಳು ಪ್ರಶ್ನೆ ಮಾಡುತ್ತಿವೆ. ನಮ್ಮ ನಿಲುವು ಶಾಂತಿ ಕಾಪಾಡುವ ಪರವಾಗಿ ಭಾರತ ಇದೆ ಎಂದರು. ಇಂಡೋ-ಪೆಸಿಫಿಕ್‌ ವಲಯದಲ್ಲಿ ಸದ್ಯ ಇರುವ ಪರಿಸ್ಥಿತಿ ಕಳವಳಕಾರಿಯಾಗಿದೆ. ಜಿ-20 ರಾಷ್ಟ್ರಗಳ ಜತೆಗೂಡಿ ಜಗತ್ತಿನ ಆಹಾರ ಮತ್ತು ಇಂಧನ ಬಿಕ್ಕಟ್ಟು ನಿವಾರಿಸಲು ಭಾರತ ಸಿದ್ಧವಿದೆ ಎಂದರು.

Advertisement

ನಮ್ಮ ಮಾತು ಕೇಳುತ್ತಿದ್ದಾರೆ:
ಜಗತ್ತು ಈಗ ಬದಲಾಗಿದ್ದು, ಹಲವು ರಾಷ್ಟ್ರಗಳು ಭಾರತದ ಮಾತುಗಳನ್ನು ಕೇಳುತ್ತಿವೆ ಎಂದು ಜೈಶಂಕರ್‌ ಹೇಳಿದ್ದಾರೆ. ಬದಲಾಗುತ್ತಿರುವ ಜಗತ್ತಿನಲ್ಲಿ ಭಾರತ ನಾಯಕತ್ವದ ಹೊಣೆ ಹೊರಲು ಸಿದ್ಧವಿದೆ. ತೊಂದರೆಗೆ ಒಳಾಗಾಗಿರುವ ಜಗತ್ತು ಅದಕ್ಕೆ ಕಾರಣಗಳನ್ನು ಕೇಳುತ್ತಿದೆ. ಜತೆಗೆ ಅನುಭವದ ಸಹಾನುಭೂತಿಯ ಮಾತುಗಳನ್ನು ಹೇಳಲು ಸಿದ್ಧವಿದೆ. ಎರಡೂ ಹೊಣೆಯನ್ನು ಹೊರತು ಭಾರತ ಸಿದ್ಧವಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next