ನವದೆಹಲಿ:ಜಮ್ಮು-ಕಾಶ್ಮೀರದಲ್ಲಿ ಸಂವಿಧಾನದ 370ನೇ ಕಲಂ ಅನ್ನು ರದ್ದುಗೊಳಿಸಿದ್ದ ಕೇಂದ್ರ ಸರ್ಕಾರದ ನಿರ್ಧಾರದಿಂದ ಸಕಾರಾತ್ಮಕ ಪರಿಣಾಮ ಬೀರಿರುವುದಾಗಿ ವರದಿ ತಿಳಿಸಿದೆ.
2019ರ ಆಗಸ್ಟ್ 5ರಂದು ಕೇಂದ್ರ ಸರ್ಕಾರ ಕೈಗೊಂಡಿದ್ದ ಐತಿಹಾಸಿಕ ನಿರ್ಣಯವಾದ 370ನೇ ಕಲಂ ರದ್ದುಗೊಳಿಸಿದ್ದರಿಂದ ಕಣಿವೆ ಪ್ರದೇಶದಲ್ಲಿನ ಭದ್ರತಾ ಪರಿಸ್ಥಿತಿ ತುಂಬಾ ಉತ್ತಮವಾಗಿದೆ. ಕೇಂದ್ರ ಗೃಹ ಸಚಿವಾಲಯದ ವರದಿ ಪ್ರಕಾರ, ಆಗಸ್ಟ್ 5ರ ನಂತರ ಕಣಿವೆ ಪ್ರದೇಶದಲ್ಲಿ ಹಿಂಸಾಚಾರದ ಪ್ರಕರಣಗಳು
ಕಡಿಮೆಯಾಗಿದೆ ಎಂದು ವಿವರಿಸಿದೆ.
ಅಷ್ಟೇ ಅಲ್ಲ ಭದ್ರತಾ ಪಡೆಗಳು ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಮಹತ್ವದ ಯಶಸ್ಸು ಸಾಧಿಸಿವೆ. ಕಣಿವೆ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ಕಲಂ ಅನ್ನು ರದ್ದುಗೊಳಿಸಿದ ನಂತರ ಉಗ್ರ ಚಟುವಟಿಕೆಗೆ ಸಂಬಂಧಿಸಿದ ಚಟುವಟಿಕೆಗಳು ಶೇ.36ರಷ್ಟು ಕಡಿಮೆಯಾಗಿದೆ ಎಂದು ವರದಿ ತಿಳಿಸಿದೆ.
2019ರ ಜನವರಿಯಿಂದ ಜುಲೈ 15ರವರೆಗೆ 188 ಭಯೋತ್ಪಾದಕ ಸಂಬಂಧಿತ ಚಟುವಟಿಕೆಗಳು ಕಾಶ್ಮೀರ ಕಣಿವೆಯಲ್ಲಿ ದಾಖಲಾಗಿದ್ದು, 2020ರಲ್ಲಿ 120ಕ್ಕೆ ಈ ಸಂಖ್ಯೆ ಇಳಿಕೆಯಾಗಿದೆ ಎಂದು ಹೇಳಿದೆ.
ಕೇಂದ್ರ ಗೃಹ ಸಚಿವಾಲಯದ ವರದಿಯಲ್ಲಿ ಉಲ್ಲೇಖಿಸಿದಂತೆ, 2019ರಲ್ಲಿ ಕಣಿವೆ ಪ್ರದೇಶದಲ್ಲಿ ಒಟ್ಟು 126 ಉಗ್ರರನ್ನು ಭದ್ರತಾ ಪಡೆಗಳು ಹತ್ಯೆಗೈದಿದ್ದವು. 2020ರಲ್ಲಿಯೂ 136 ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ ಎಂದು ವರದಿ ತಿಳಿಸಿದೆ.
2019ರಲ್ಲಿ 2020ರ ಜನವರಿಯಿಂದ ಜುಲೈವರೆಗೆ ಕಾಶ್ಮೀರದಲ್ಲಿ 51 ಗ್ರೆನೇಡ್ ದಾಳಿ ನಡೆದಿತ್ತು. ಆದರೆ 2020ರಲ್ಲಿ ಕೇವಲ 21 ಗ್ರೆನೇಡ್ ದಾಳಿ ಪ್ರಕರಣ ನಡೆದಿದೆ ಎಂದು ವರದಿ ವಿವರಿಸಿದೆ.