ಹರಿಹರ: ದೇಶದಲ್ಲಿ ಇತ್ತೀಚಿಗೆ ಮಿತಿಮೀರುತ್ತಿರುವ ಪ್ರಾದೇಶಿಕತೆಯಿಂದ ಮಾನವ ಹಕ್ಕುಗಳಿಗೆ ಧಕ್ಕೆಯಾಗುತ್ತಿದೆ ಎಂದು ವಕೀಲ, ಮಾನವ ಹಕ್ಕುಗಳ ಹೋರಾಟಗಾರರಾದ ಮೋಸಸ್ ಮುರುಗವೇಲು ಅಭಿಪ್ರಾಯಪಟ್ಟರು.
ರಾಜ್ಯ ವಕೀಲರ ಪರಿಷತ್, ತಾಲೂಕು ವಕೀಲರ ಸಂಘ ಹಾಗೂ ಕಾನೂನು ಸೇವಾ ಸಮಿತಿ ಆಶ್ರಯದಲ್ಲಿ ನಗರದ ನ್ಯಾಯಾಲಯ ಸಂಕೀರ್ಣದಲ್ಲಿ ಆಯೋಜಿಸಿದ್ದ ಕಾನೂನು ಕಾರ್ಯಗಾರದಲ್ಲಿ ಮಾನವ ಹಕ್ಕುಗಳ ಕುರಿತು ಉಪನ್ಯಾಸ ನೀಡಿದ ಅವರು, ಭಾರತದ ನಾಗರಿಕರಿಗೆ ದೇಶದ ಯಾವುದೇ ಪ್ರದೇಶಕ್ಕೆ ಮುಕ್ತವಾಗಿ ಸಂಚರಿಸುವ, ವಾಸಿಸುವ, ಉದ್ಯೋಗ ಹಿಡಿಯುವ ಹಕ್ಕಿದೆ. ಆದರೆ ಮಹಾರಾಷ್ಟ್ರದ ಒಂದು ರಾಜಕೀಯ ಪಕ್ಷ ಮರಾಠಿಗರಲ್ಲದವರನ್ನು ಹೊರದೂಡಲು ನೋಡುತ್ತಿದೆ. ಕೆಲ ರಾಜ್ಯಗಳಲ್ಲಿ ಆಯಾ ಭಾಷಿಕರಿಗೆ ಮಾತ್ರ ಉದ್ಯೋಗ ದೊರೆಯಬೇಕು ಎನ್ನಲಾಗುತ್ತಿದೆ. ನೆಲ-ಜಲ, ಜಾತಿ-ಧರ್ಮ, ಭಾಷೆ ಆಧಾರದಲ್ಲಿ ತಾರತಮ್ಯ ಹೆಚ್ಚಾಗಲು ಕೆಲ ಪ್ರಾದೇಶಿಕ ಪಕ್ಷಗಳೂ ಕಾರಣವಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ನಾಗರಾಜ್ ಹಲವಾಗಲು ಮಾತನಾಡಿ, ಮೂರು ದಿನಗಳ ಕಾರ್ಯಾಗಾರದಲ್ಲಿ ಪರಿಣಿತರು ವಕೀಲಿ ವೃತ್ತಿಯ ಕೌಶಲಗಳನ್ನು ತಿಳಿಸಿಕೊಟ್ಟಿದ್ದು, ಅವುಗಳ ಸದ್ಬಳಕೆ ಮಾಡಿಕೊಂಡು ಯುವ ವಕೀಲರು ಯಶಸ್ಸು ಸಾಧಿಸಬೇಕು ಎಂದರು.
ಹಿರಿಯ ವಕೀಲರಾದ ಕೆ.ರಾಜು ಕಾರ್ಯಾಗಾರ ಕುರಿತು ಅನಿಸಿಕೆ ವ್ಯಕ್ತಪಡಿಸಿ, ಪರಿಣಿತರು ಬಹು ಮುಖ್ಯ ಕಾಯ್ದೆಗಳ ಮುಖ್ಯಾಂಶಗಳನ್ನು ಸಂಕ್ಷಿಪ್ತವಾಗಿ ತಿಳಿಸಿದ್ದಲ್ಲದೆ ತಮ್ಮ ವೃತ್ತಿ ಬದುಕಿನ ಅನುಭವ ಹಂಚಿಕೊಂಡಿದ್ದು ಉಪಯುಕ್ತವಾಗಿತ್ತು ಎಂದರು. ಮತ್ತೂಬ್ಬ ಹಿರಿಯ ವಕೀಲರಾದ ನಾಗರಾಜ್ ಬಿ. ಮಾತನಾಡಿ, ಆಗಾಗ್ಗೆ ಇಂತಹ ಕಾರ್ಯಗಾರಗಳನ್ನು ಆಯೋಜಿಸಬೇಕು ಎಂದರು. ವಕೀಲರಾದ ಶ್ರೀಧರ್ ಮೆಹರಾಡೆ ಮಾತನಾಡಿ, ಕಾನೂನು ವಿಷಯಗಳ ಚರ್ಚೆ, ಸಂವಾದ ನಮ್ಮ ಜ್ಞಾನವನ್ನು ಮತ್ತಷ್ಟು ಹರಿತಗೊಳಿಸುತ್ತದೆ ಎಂದರು.
ಸಂಘದ ಕಾರ್ಯದರ್ಶಿ ಎಚ್.ಎಚ್. ಲಿಂಗರಾಜು, ವಕೀಲರಾದ ಸೈಯದ್ ಯೂನಸ್, ಇನಾಯತ್ ಉಲ್ಲಾ ಟಿ., ಜಿ.ಬಸವಣ್ಯಪ್ಪ, ಪುಷ್ಪ ಕೆ.ಜಿ., ಲೋಹಿತಾ, ಚೇತನಾ, ಜಮುನಾ, ಅಶ್ವಿನಿ, ಸಾಕಮ್ಮ, ಜಿ.ಎಚ್. ಭಾಗೀರಥಿ, ಕೆ.ಜಿ.ಕೆ.ಪಾಟೀಲ್, ರಿಯಾಜ್ ಅಹಮದ್, ಸುಬಾಶ್ಚಂದ್ರ ಬೋಸ್, ಅಂಬಾದಾಸ ಮೆಹರಾಡೆ, ರಾಜು ಟಿ.ಮಸವಳ್ಳಿ, ಗಣೇಶ್ ದುರ್ಗದ್, ಸಿ.ಬಿ.ರಾಘವೇಂದ್ರ, ಸುರೇಶ್ ಕುಮಾರ್ ವೈ., ಬಿ.ಎಸ್.ಗಣೇಶ್, ಪರಶುರಾಮ್ ಅಂಬೇಕರ್ ಮತ್ತಿತರರಿದ್ದರು.