Advertisement

ನಗರದ ನಾಲ್ಕು ದಿಕ್ಕಲ್ಲಿ ಟರ್ಮಿನಲ್‌

12:27 PM Dec 11, 2018 | Team Udayavani |

ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ವಾಹನದಟ್ಟಣೆಯನ್ನು ತಗ್ಗಿಸಲು ಹೊರವಲಯಗಳಲ್ಲೇ ಖಾಸಗಿ ಬಸ್‌ಗಳಿಗೆ ಬ್ರೇಕ್‌ ಹಾಕಲು ಉದ್ದೇಶಿಸಿರುವ ಸರ್ಕಾರ, ಈ ಸಂಬಂಧ ನಾಲ್ಕು ದಿಕ್ಕುಗಳಲ್ಲಿ ಟರ್ಮಿನಲ್‌ ನಿರ್ಮಾಣಕ್ಕೆ ಮುಂದಾಗಿದೆ. ತುಮಕೂರು ರಸ್ತೆ, ಮೈಸೂರು ರಸ್ತೆ, ಬಳ್ಳಾರಿ ರಸ್ತೆ ಮತ್ತು ಕೋಲಾರ ರಸ್ತೆಗಳಿಂದ ನಗರಕ್ಕೆ ಆಗಮಿಸುವ ವಿವಿಧ ಪ್ರಕಾರದ ಖಾಸಗಿ ವಾಹನಗಳನ್ನು ಆಯಾ ಪ್ರವೇಶ ದ್ವಾರಗಳಲ್ಲೇ ತಡೆದು ನಿಲ್ಲಿಸಲು ಸರ್ಕಾರ ಉದ್ದೇಶಿಸಿದೆ.

Advertisement

ಇದಕ್ಕೆ ನಾಲ್ಕೂ ದಿಕ್ಕುಗಳಲ್ಲಿ ತಲಾ ಸುಮಾರು ಎರಡು ಎಕರೆ ಜಾಗದ ಅವಶ್ಯಕತೆ ಇದ್ದು, ಈ ಸಂಬಂಧದ ಸಾಧಕ-ಬಾಧಕ ಹಾಗೂ ಭೂಮಿಯನ್ನು ಗುರುತಿಸುವ ಸಲುವಾಗಿ ನಗರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್‌ ಭಾಸ್ಕರ್‌ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ಸಭೆಯಲ್ಲಿ ಈ ಸಮಿತಿ ರಚನೆ ಆಗಿದೆ.  

ಈಗಾಗಲೇ ಹೆಬ್ಟಾಳ ಬಳಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ಕ್ಕೆ ಸೇರಿದ ಸಾಕಷ್ಟು ಜಾಗ ಇದೆ ಎಂದು ಗುರುತಿಸಲಾಗಿದೆ. ಇದು ಟರ್ಮಿನಲ್‌ಗೆ ಯೋಗ್ಯವಾಗಿದೆ ಎಂದೂ ಸಂಚಾರ ಪೊಲೀಸ್‌ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಅದೇ ರೀತಿ, ಉಳಿದ ಮೂರು ಕಡೆಗಳಲ್ಲಿ ಜಾಗದ ಹುಡುಕಾಟ ನಡೆದಿದೆ. ಹಾಗೊಂದು ವೇಳೆ ಸರ್ಕಾರಿ ಜಾಗ ಇಲ್ಲದಿದ್ದರೆ, ಖಾಸಗಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಈ ಬಸ್‌ಗಳ ನಿಲುಗಡೆಗೆ ಟರ್ಮಿನಲ್‌ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಸಾರಿಗೆ ಇಲಾಖೆ ಉನ್ನತ ಮೂಲಗಳು ತಿಳಿಸಿವೆ.

ನಗರದಲ್ಲಿ ಖಾಸಗಿ ಬಸ್‌ಗಳ ಹಾವಳಿಗೆ ಕಡಿವಾಣ ಹಾಕುವುದರ ಜತೆಗೆ ಇವುಗಳು ಸೃಷ್ಟಿಸುವ ದಟ್ಟಣೆ ತಗ್ಗಿಸಲು ಈ ನಿರ್ಧಾರಕ್ಕೆ ಸರ್ಕಾರ ಮುಂದಾಗಿದೆ. ಹೊರವಲಯದಲ್ಲೇ ಇವುಗಳನ್ನು ನಿರ್ಬಂಧಿಸಿ, ಅಲ್ಲಿಂದ ನಗರದ ವಿವಿಧೆಡೆ ಬಿಎಂಟಿಸಿ ಬಸ್‌ಗಳ ಸೇವೆ ಕಲ್ಪಿಸಲು ಸಾಧ್ಯವಿದೆ. ಇದರಿಂದ ನಿಗಮಕ್ಕೆ ಆದಾಯ ಹೆಚ್ಚುವುದರ ಜತೆಗೆ ಪ್ರಯಾಣಿಕರಿಗೆ ಉತ್ತಮ ಸೇವೆ ದೊರೆಯುತ್ತದೆ. 

ಮೆಟ್ರೋ ಸೇವೆಯೂ ಇದೆ: ಅಷ್ಟಕ್ಕೂ ಈಗಾಗಲೇ ತುಮಕೂರು ರಸ್ತೆ ಹಾಗೂ ಮೈಸೂರು ರಸ್ತೆಯಿಂದ ಮೆಟ್ರೋ ಸೇವೆಯೂ ಲಭ್ಯವಿದೆ. ಅತ್ತ ಬೈಯಪ್ಪನಹಳ್ಳಿ ಹಾಗೂ ಯಲಚೇನಹಳ್ಳಿಯಿಂದಲೂ ಮೆಟ್ರೋ ಸಂಪರ್ಕ ಇದೆ. ಮುಂದಿನ ದಿನಗಳಲ್ಲಿ ಇದು ವಿಸ್ತರಣೆಯೂ ಆಗುತ್ತಿದೆ. ಹಾಗಾಗಿ, ಹೊರಭಾಗದಲ್ಲೇ ನಿಲುಗಡೆ ಮಾಡುವುದರಿಂದ ಪ್ರಯಾಣಿಕರ ಹಿತದೃಷ್ಟಿಯಿಂದಲೂ ಇದು ಒಳ್ಳೆಯ ನಿರ್ಧಾರ.

Advertisement

ಸಮಯ ವ್ಯಯ ಆಗುವುದಿಲ್ಲ ಹಾಗೂ ಸಂಚಾರದಟ್ಟಣೆ ಕಿರಿಕಿರಿಯೂ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಖಾಸಗಿ ಬಸ್‌ಗಳು ನಗರದ ಒಳಗೆ ಬರುವ ಅವಶ್ಯಕತೆ ಏನಿದೆ? ಇದರಿಂದ ಮೆಟ್ರೋ ಉದ್ದೇಶವೂ ಸಾಕಾರಗೊಳ್ಳುತ್ತದೆ ಎನ್ನುತ್ತಾರೆ ಸಾರಿಗೆ ಇಲಾಖೆ ಅಧಿಕಾರಿಗಳು. ಆನಂದರಾವ್‌ ವೃತ್ತ, ಕಲಾಸಿಪಾಳ್ಯ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಖಾಸಗಿ ಬಸ್‌ಗಳಿಂದಲೇ ವಾಹನದಟ್ಟಣೆ ಉಂಟಾಗುತ್ತಿದೆ.

ಹಬ್ಬ ಅಥವಾ ಸಾಲು ರಜೆಗಳ ಸಂದರ್ಭದಲ್ಲಂತೂ ಸಮಸ್ಯೆ ಹೇಳತೀರದು. ಹಾಗಾಗಿ, ನಗರದಿಂದ ಇವುಗಳನ್ನು ಹೊರಹಾಕಲು ಚಿಂತನೆ ನಡೆದಿದೆ. ಆದರೆ, ಖಾಸಗಿ ಟ್ರಾವೆಲ್‌ಗ‌ಳು ಹೆಚ್ಚು ಪ್ರಭಾವಶಾಲಿಯಾಗಿದ್ದು, ಇದೇ ಕಾರಣಕ್ಕೆ ಹಲವಾರು ಬಾರಿ ಈ ಪ್ರಯತ್ನ ಯಶಸ್ವಿಯಾಗಿದೆ. ಈಗ ಮತ್ತೆ ಸರ್ಕಾರ ಈ ಸಾಹಸಕ್ಕೆ ಕೈಹಾಕುತ್ತಿದೆ. 

ಮೆಜೆಸ್ಟಿಕ್‌ನಿಂದಲೇ ನಾಲ್ಕು ಸಾವಿರ ಬಸ್‌!: ಮೆಜೆಸ್ಟಿಕ್‌ ಸುತ್ತಲಿನಿಂದಲೇ ನಿತ್ಯ ಸುಮಾರು ನಾಲ್ಕು ಸಾವಿರ ಬಸ್‌ಗಳು ಕಾರ್ಯಾಚರಣೆ ಮಾಡುತ್ತವೆ ಎಂದು ಅಂದಾಜಿಸಲಾಗಿದೆ. ಕೆಂಪೇಗೌಡ ಬಸ್‌ ನಿಲ್ದಾಣದ ಮೂಲಕ ಪ್ರತಿ ದಿನ ಅಂದಾಜು 3,000 ಬಸ್‌ಗಳು ಕಾರ್ಯಾಚರಣೆ ಮಾಡುತ್ತವೆ. ಇದರಲ್ಲಿ ವೇಗದೂತ (ಕೆಂಪು ಬಸ್‌), ವೋಲ್ವೋ, ಸ್ಲಿàಪರ್‌, 150 ಕೂಡ ಸೇರಿವೆ. ಹಾಗೂ ಆನಂದರಾವ್‌ ವೃತ್ತದಲ್ಲಿ ಸುಮಾರು 500 ಹಾಗೂ ಧನ್ವಂತರಿ ಆಯುರ್ವೇದಿಕ್‌ ಕಾಲೇಜಿನಿಂದ 300ಕ್ಕೂ ಹೆಚ್ಚು ಖಾಸಗಿ ಬಸ್‌ಗಳು ಕಾರ್ಯಾಚರಣೆ ಮಾಡುತ್ತಿವೆ.

ಖಾಸಗಿ ಮತ್ತು ಸರ್ಕಾರಿ ಎರಡೂ ಮಾದರಿ ಬಸ್‌ಗಳನ್ನು ನಗರದ ಹೊರವಲಯದಲ್ಲೇ ತಡೆದು, ಅಲ್ಲಿಂದ ಬಿಎಂಟಿಸಿ ಬಸ್‌ ಸೇವೆ ಕಲ್ಪಿಸಲು ಉದ್ದೇಶಿಸಲಾಗಿದೆ. ಈ ಬಸ್‌ಗಳ ನಿಲುಗಡೆಗೆ ಅಗತ್ಯ ಇರುವ ಜಾಗ ಗುರುತಿಸುವ ಸಂಬಂಧ ಸಮಿತಿಯನ್ನೂ ರಚಿಸಲಾಗಿದೆ. ಸಮಿತಿ ವರದಿ ಸಲ್ಲಿಸಿದ ತಕ್ಷಣ ಈ ನಿಟ್ಟಿನಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗುವುದು.
-ಬಿ.ಬಸವರಾಜು, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next