Advertisement

ತೇರದಾಳ ಪುರಸಭೆ: 1.63 ಲಕ್ಷ ರೂ. ಉಳಿತಾಯ ಬಜೆಟ್‌ ಮಂಡನೆ

05:44 PM Feb 17, 2022 | Team Udayavani |

ತೇರದಾಳ: ಪಟ್ಟಣದ ಸರ್ವಾಂಗೀಣ ಪ್ರಗತಿ ದೃಷ್ಟಿಯಲ್ಲಿಟ್ಟುಕೊಂಡು 2022-23ನೇ ಸಾಲಿನ ಆಯವ್ಯಯ ಅಂದಾಜು ಪತ್ರಿಕೆಯನ್ನು ಬುಧವಾರ ಪುರಸಭಾಧ್ಯಕ್ಷೆ ಕುಸುಮಾಂಡಿನಿ ಬಾಬಗೊಂಡ ಪುರಸಭೆಯ ನೂತನ ಕಾರ್ಯಾಲಯದ ಸಭಾಂಗಣದಲ್ಲಿ ಒಟ್ಟು ಆದಾಯ 1145.25 ಲಕ್ಷ ರೂ. ಮತ್ತು ಒಟ್ಟು ಖರ್ಚು 1443.62 ಲಕ್ಷ ರೂ. ಸೇರಿದಂತೆ 1.63 ಲಕ್ಷ ರೂ. ಉಳಿತಾಯ ಬಜೆಟ್‌ ಮಂಡಿಸಿದರು.

Advertisement

ಕಂದಾಯ ವಿಭಾಗದ ಆದಾಯಗಳಲ್ಲಿ ಆಸ್ತಿ ತೆರಿಗೆ, ದಂಡಗಳು, ಖಾತಾ ಬದಲಾವಣೆ ಶುಲ್ಕ, ಖಾತಾ ಉತಾರೆ ಶುಲ್ಕ, ಎನ್‌ಒಸಿ, ಸೆಸ್‌ ಸಂಗ್ರಹಣೆ, ನೀರಿನ ಕರ, ಹೊಸ ನಲ್ಲಿಗಳ ಜೋಡಣೆ, ಸಂತೆ ಕರ, ಕಟ್ಟಡಗಳು ಮತ್ತು ವಾಣಿಜ್ಯ ಮಳಿಗೆಗಳ ಆದಾಯ, ಜಾತ್ರೆ ಮತ್ತು ಉರುಸ್‌ ಶುಲ್ಕಗಳು, ಘನತ್ಯಾಜ್ಯ ನಿರ್ವಹಣೆ, ಕಸ ಸಂಗ್ರಹಣೆ ಶುಲ್ಕ ಸೇರಿದಂತೆ ಒಟ್ಟು 154.85 ಲಕ್ಷ ರೂ. ಗಳ ಆದಾಯವಿದ್ದರೆ, ಆರೋಗ್ಯ ವಿಭಾಗದ ವ್ಯಾಪಾರ ಪರವಾನಗಿ ಶುಲ್ಕ, ಜನನ-ಮರಣ ಪ್ರಮಾಣ ಪತ್ರಗಳ ಶುಲ್ಕ, ಸಾಂಪ್ರದಾಯಕ ಗೊಬ್ಬರ ಮಾರಾಟ, ಸಕ್ಕಿಂಗ್‌/ಜಟ್ಟಿಂಗ್‌ ಮಶಿನ್‌ ಶುಲ್ಕ ಸೇರಿ ಒಟ್ಟು ರೂ. 2.65 ಲಕ್ಷ ಆದಾಯವಿದೆ.

ಪಿಡಬ್ಲೂಡಿ ವಿಭಾಗದ ಆದಾಯಗಳಲ್ಲಿ ಕಟ್ಟಡ ಪರವಾನಗಿ, ಎಲ್‌ಡಬ್ಲೂಎಫ್‌, ಸ್ಲಂ ಚಾರ್ಜ್‌, ಸಂಗ್ರಹಣಾ ಶುಲ್ಕ, ಬಡಟರಮೆಂಟ್‌ ಫೀ, ಟೆಂಡರ್‌ಫಾರಂ ಫೀ, ಎಸ್‌ಎಫ್‌ಸಿ ಅನುದಾನ, ಹೊಸ ನಿವೇಶನಗಳ ಅಭಿವೃದ್ಧಿ ಶುಲ್ಕ, ದಾಸ್ತಾನು ಮತ್ತು ಅನುಪಯುಕ್ತ ವಸ್ತು ಮಾರಾಟ, ಶುದ್ಧ ಕುಡಿಯುವ ನೀರು ಘಟಕಗಳ ಆದಾಯ ಸೇರಿ ಒಟ್ಟು 67.30 ಲಕ್ಷ ರೂ., ಲೆಕ್ಕಪತ್ರ ವಿಭಾಗದ ಆದಾಯ ಮೂಲದಿಂದ 16.80 ಲಕ್ಷ ರೂ., ರೆವೆನ್ಯೂ ಆದಾಯ 241.60 ಲಕ್ಷ ರೂ. ಗಳಾದರೆ,
ಬಂಡವಾಳ ಸ್ವೀಕೃತಿ ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನಗಳಲ್ಲಿ 1113.00 ಲಕ್ಷ ರೂ.ಗಳಾದರೆ, ಅಸಾಧಾರಣ ಸ್ವೀಕೃತಿಗಳ ಆದಾಯ 90.65 ಲಕ್ಷ ರೂ.ಗಳಾಗಿದ್ದು, ಒಟ್ಟಾರೆ ಮುಂಗಡ ಪತ್ರದ ಆದಾಯ 1445.25 ಲಕ್ಷ ರೂ. ನಿರೀಕ್ಷಿಸಲಾಗಿದೆ. ವೆಚ್ಚಗಳಲ್ಲಿ ಕಂದಾಯ, ಆರೋಗ್ಯ, ನೀರು ಸರಬರಾಜು, ಆರೋಗ್ಯ, ಲೋಕೋಪಯೋಗಿ, ಲೇಕ್ಕಪತ್ರ ವೆಚ್ಚಗಳು, ಬಂಡವಾಳ ಪಾವತಿಗಳು, ಅಸಾಧಾರಣ ಪಾವತಿಗಳು ಸೇರಿ ಒಟ್ಟು 1443.62 ಲಕ್ಷ ರೂ. ವೆಚ್ಚಗಳನ್ನು ಆಯವ್ಯಯ ಪತ್ರ ಹೊಂದಿದೆ.

ಒಟ್ಟು ಆದಾಯ 1445.25 ಲಕ್ಷ ರೂ. ಆಗಿದ್ದರೆ ಒಟ್ಟು ವೆಚ್ಚ 1443.62 ಲಕ್ಷ ರೂ. ಆಗಿದೆ. ಒಟ್ಟು ಉಳಿಕೆ ರೂ. 1.63 ಲಕ್ಷಗಳಾಗಿದ್ದು, ಈ ಬಾರಿ ಪುರಸಭೆ ಬಜೆಟ್‌ ಉಳಿತಾಯ ಬಜೆಟ್‌ ಆಗಿದೆ. ಮಂಡನೆ ಸಂದರ್ಭದಲ್ಲಿ ಘನತ್ಯಾಜ್ಯ ಕಸ ಸಂಗ್ರಹಣೆಗೆ ಮುಂದಾಗದ ಪುರಸಭೆ ಶುಲ್ಕ ಪಡೆಯುತ್ತಿರುವುದನ್ನು ಬಹುತೇಕ ಸದಸ್ಯರು ವಿರೋಧಿಸಿದಾಗ ಮುಖ್ಯಾಧಿ ಕಾರಿ ಅಶೋಕ ಗುಡಿಮನಿ ಶೀಘ್ರದಲ್ಲೇ ಪಟ್ಟಣದ ಪ್ರತಿ ಮನೆಗೆ ಹಸಿ ಮತ್ತು ಒಣ ಕಸ ಸಂಗ್ರಹಿಸಲು ಪ್ರತ್ಯೇಕ ಎರಡೆರಡು ಡಬ್ಬಗಳನ್ನು ವಿತರಿಸುವ ಭರವಸೆ ನೀಡಿದರು.

ಚರ್ಚೆಯಲ್ಲಿ ರುಸ್ತುಂ ನಿಪ್ಪಾಣಿ, ಫಯಾಜ್‌ ಇನಾಂದಾರ, ಲಕ್ಷ್ಮಣ ನಾಯಕ ಭಾಗಿಯಾಗಿದ್ದರು. ಸಭೆಯಲ್ಲಿ ಅಧ್ಯಕ್ಷೆ ಕುಸುಮಾಂಡಿನಿ ಬಾಬಗೊಂಡ, ಉಪಾಧ್ಯಕ್ಷೆ ಶಾಂತವ್ವ ಕಾಲತಿಪ್ಪಿ, ಸ್ಥಾಯಿ ಸಮಿತಿ ಚೇರ್‌ಮನ್‌ ಹಾಫೀಜ್‌ ಮೌಲಾಅಲಿ ಚಿತ್ರಭಾನುಕೋಟೆ, ಮುಖ್ಯಾಧಿಕಾರಿ ಅಶೋಕ ಗುಡಿಮನಿ ವೇದಿಕೆಯಲ್ಲಿದ್ದರು. ಸಂತೋಷ ಜಮಖಂಡಿ, ಲಕ್ಷ್ಮಣ ನಾಯಕ, ಅನ್ನಪೂರ್ಣ ಹೊಸಮನಿ, ಸಂಗೀತಾ ಪಾಟೀಲ, ಪುಷ್ಪಲತಾ ಬಂಕಾಪುರ, ಫಜಲ್‌ ಅತರಾವುತ, ಆದಿನಾಥ ಸಪ್ತಸಾಗರ, ಫಯಾಜ್‌ ಇನಾಂದಾರ, ನಾಸೀರಾಬಾನು ನಗಾರ್ಜಿ, ಶಿಲ್ಪಾ ರೋಡಕರ ಸೇರಿದಂತೆ ಕಚೇರಿ ವ್ಯವಸ್ಥಾಪಕ ಎಂ.ಐ. ಡಾಂಗೆ, ಎಇ ಎಸ್‌.ಬಿ. ಮಾತಾಳಿ, ಅಕೌಂಟೆಂಟ್‌ ರೂಪಾ ಗೊಂಬಿ ಹಾಜರಿದ್ದರು. ಕಂದಾಯ ಅಧಿಕಾರಿ ಎಫ್‌.ಬಿ. ಗಿಡ್ಡಿ ಸ್ವಾಗತಿಸಿದರು. ಅಭಿನಂದನ ಬನ್ನಿಕೊಪ್ಪ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next