Advertisement

ಹತ್ತೇ ನಿಮಿಷ ವನ್ಯಜೀವಿ ಮಂಡಳಿ ಸಭೆ- ಖಂಡ್ರೆ ಅಧ್ಯಕ್ಷತೆಯಲ್ಲಿ ಸ್ಥಾಯಿ ಸಮಿತಿಗೆ ಒಪ್ಪಿಗೆ

09:39 PM Aug 22, 2023 | Team Udayavani |

ಬೆಂಗಳೂರು: ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಅಧ್ಯಕ್ಷತೆಯಲ್ಲಿ ಸ್ಥಾಯಿ ಸಮಿತಿ ರಚಿಸಲು ಒಪ್ಪಿಗೆ ಸೂಚಿಸಿರುವ ಸಿಎಂ, ವನ್ಯಜೀವಿ ಮಂಡಳಿ ಮುಂದೆ ಬರುವ ವಿಷಯಗಳನ್ನು ಸ್ಥಾಯಿ ಸಮಿತಿ ಮುಂದೆ ಮಂಡಿಸಿ, ಒಪ್ಪಿಗೆ ಪಡೆಯುವಂತೆಯೂ ಸೂಚಿಸಿದ್ದಾರೆ.

Advertisement

ಸರ್ಕಾರ ರಚನೆಯಾದ ಬಳಿಕ ತಮ್ಮ ಅಧ್ಯಕ್ಷತೆಯಲ್ಲಿ ಮೊದಲ ಬಾರಿಗೆ ಕರೆದಿದ್ದ ವನ್ಯಜೀವಿ ಮಂಡಳಿ ಸಭೆಯು ಕೇವಲ 10 ನಿಮಿಷಗಳ ಕಾಲ ನಡೆದಿದ್ದು ಸಭೆಯ ಮುಂದಿದ್ದ 30ಕ್ಕೂ ಹೆಚ್ಚು ವಿಷಯಗಳನ್ನು ಯಾವುದೇ ಚರ್ಚೆ ಇಲ್ಲದೆ ಮುಂದೂಡಲಾಯಿತು.

ಮಂಗಳವಾರ ಸಂಜೆ 4 ಗಂಟೆಗೆ ಗೃಹ ಕಚೇರಿ ಕೃಷ್ಣಾದಲ್ಲಿ ವನ್ಯಜೀವಿ ಮಂಡಳಿ ಸಭೆ ಕರೆಯಲಾಗಿತ್ತು. ಮಧ್ಯಾಹ್ನದಿಂದ ಶಕ್ತಿ ಭವನದಲ್ಲಿ ಕೆಪಿಸಿಎಲ್‌ ಸಭೆಯಲ್ಲೇ ಮಗ್ನರಾಗಿದ್ದ ಸಿಎಂ, ವನ್ಯಜೀವಿ ಮಂಡಳಿ ಸಭೆಯನ್ನು ಕೃಷ್ಣಾ ಬದಲು ಶಕ್ತಿಭವನಕ್ಕೆ ಸ್ಥಳಾಂತರಿಸಿದರು. ಅಧಿಕಾರಿಗಳೊಂದಿಗೆ ಪರಿಚಯಾತ್ಮಕ ಸಭೆಯಂತೆ ನಡೆಸಿದ ಸಿಎಂ, ಹೊಸ ಸರ್ಕಾರ

ಬಂದಾಗಿನಿಂದ ವನ್ಯಜೀವಿ ಮಂಡಳಿ ರಚನೆ ಆಗಿಲ್ಲ. ಹೀಗಾಗಿ ಮಂಡಳಿಯ ಮರುರಚನೆ ಮಾಡಬೇಕೆಂದು ಅಧಿಕಾರಿಗಳು ಪ್ರಸ್ತಾವನೆ ಮಂಡಿಸಿದರು.
ಮುಂದಿನ ದಿನಗಳಲ್ಲಿ ಈ ಬಗ್ಗೆ ಚಿಂತಿಸುವುದಾಗಿ ತಿಳಿಸಿದ ಸಿಎಂ, ಸದ್ಯಕ್ಕೆ ಅರಣ್ಯ ಸಚಿವರ ಅಧ್ಯಕ್ಷತೆಯ ಸ್ಥಾಯಿ ಸಮಿತಿ ರಚಿಸಲು ಒಪ್ಪಿಗೆ ಸೂಚಿಸಿದರು. ಮಂಡಳಿ ಮುಂದೆ ಯಾವುದೇ ವಿಷಯ ತರುವ ಮುನ್ನ ಸ್ಥಾಯಿ ಸಮಿತಿಯ ಒಪ್ಪಿಗೆ ಪಡೆದು ಬರುವಂತೆ ನಿರ್ದೇಶನ ನೀಡಿದರು.

ಚರ್ಚೆಗೆ ಬರಬೇಕಿದ್ದ ಮಹತ್ವದ ವಿಷಯಗಳು: ಶರಾವತಿ ಹಿನ್ನೀರಿನಿಂದ ಮುಳುಗಡೆಯಾದ ಪ್ರದೇಶ ಮತ್ತು ಅಲ್ಲಿನ ಸಂತ್ರಸ್ತರ ವಿಚಾರ, ಮಹದಾಯಿ ಯೋಜನೆಯ ಪ್ರಮುಖ ಹಂತವಾದ ಕಳಸಾ-ಬಂಡೂರಿ ನಾಲಾ ಜೋಡಣೆಗೆ ಅಡ್ಡಿಯಾಗಿರುವ ಪರಿಸರ ಅನುಮತಿ, ರಾಷ್ಟ್ರೀಯ ಹುಲಿ ಯೋಜನೆಯೂ ಬರುವುದರಿಂದ ಹುಲಿ ಸಂರಕ್ಷಣಾ ಪ್ರಾಧಿಕಾರದಿಂದಲೂ ಅನುಮತಿ ಪಡೆಯಬೇಕಿದೆ. ಈ ಬಗ್ಗೆ ತೀರ್ಮಾನಿಸುವ ವಿಚಾರವೂ ಇತ್ತು.

Advertisement

ಹೆಸರುಘಟ್ಟ ಹುಲ್ಲುಗಾವಲನ್ನು ಸಂರಕ್ಷಿತ ವಲಯವೆಂದು ಘೋಷಿಸುವ ವಿಚಾರವೂ ಇತ್ತು. ಸುಮಾರು 5 ಸಾವಿರ ಎಕರೆಯಲ್ಲಿರುವ ಹುಲ್ಲುಗಾವಲಿನಲ್ಲಿ ಹಾಲು ಒಕ್ಕೂಟ, ತೋಟಗಾರಿಕಾ ಬೆಳೆಗಳಿಗೆ ಸಂಬಂಧಿಸಿದ ಸಂಶೋಧನಾಲಯ, ಕುಕ್ಕುಟ ಉದ್ಯಮ, ಡ್ಯಾನಿಶ್‌ ಫಾರಂ ಸೇರಿದಂತೆ ಸರ್ಕಾರದ ಕೆಲ ಸಂಸ್ಥೆಗಳಿವೆ. 3 ಕೆರೆಗಳೂ ಇರುವ ಇಲ್ಲಿ 133 ಪ್ರಭೇದದ ಪಕ್ಷಿ ಸಂಕುಲ, 40 ಅಪರೂಪದ ಸಸ್ಯ ಪ್ರಭೇದ, ಚಿರತೆ ಸೇರಿದಂತೆ ಕೆಲ ವನ್ಯಜೀವಿಗಳ ಆವಾಸಸ್ಥಾನವೂ ಆಗಿದೆ. ಹೀಗಾಗಿ ಜೀವವೈವಿಧ್ಯ ಸಂರಕ್ಷಣೆ ಮಾಡಬೇಕೆಂಬ ದೃಷ್ಟಿಯಿಂದ ಸಂರಕ್ಷಿತ ವಲಯವಾಗಿ ಘೋಷಿಸುವ ವಿಚಾರ ಮಂಡಳಿ ಮುಂದಿದ್ದು, ಈ ಹಿಂದೆ ವಿರೋಧಗಳು ಬಂದಿದ್ದರಿಂದ ಮೂರು ಬಾರಿ ಮುಂದೂಡಿಕೆಯಾಗಿತ್ತು.

ಹೆಸರಘಟ್ಟ ಹುಲ್ಲುಗಾವಲನ್ನು ಇರುವಂತೆಯೇ ಸಂರಕ್ಷಣೆ ಮಾಡಬೇಕೇ ಹೊರತು, ಸಂರಕ್ಷಿತ ವಲಯವೆಂದು ಘೋಷಿಸಬಾರದು. ಇದಕ್ಕೆ ಸ್ಥಳೀಯರ ಭಾರೀ ವಿರೋಧವಿದೆ. ಹಾಗೊಂದು ವೇಳೆ ಸಂರಕ್ಷಿತ ವಲಯವೆಂಬ ತೀರ್ಮಾನವನ್ನು ವನ್ಯಜೀವಿ ಮಂಡಳಿ ತೆಗೆದುಕೊಂಡರೆ ಕಾನೂನು ಹೋರಾಟ ನಡೆಸುತ್ತೇವೆ.
ಎಸ್‌.ಆರ್‌. ವಿಶ್ವನಾಥ್‌, ಯಲಹಂಕ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next