ಪ್ಯಾರಿಸ್: ಹಾಲಿ ಚಾಂಪಿಯನ್ ಕೊಕೊ ಗಾಫ್ ಅವರ 2024ರ ಯುಎಸ್ ಓಪನ್ ಅಭಿಯಾನ ಪ್ರಿ ಕ್ವಾರ್ಟರ್ ಫೈನಲ್ನಲ್ಲಿ ಕೊನೆಗೊಂಡಿದೆ. ಅಮೆರಿಕದ ಈ ಆಟಗಾರ್ತಿಯನ್ನು ಅವರದೇ ನಾಡಿನ ಎಮ್ಮಾ ನವಾರೊ 6-3, 4-6, 6-3ರಿಂದ ಮಣಿಸಿದರು.
20 ವರ್ಷದ, ಫ್ಲೋರಿಡಾ ಮೂಲದ ಕೊಕೊ ಗಾಫ್ “ವಿನ್ನರ್’ಗಿಂತ (14) ಹೆಚ್ಚಿನ ಡಬಲ್ ಫಾಲ್ಟ್ (19) ಎಸಗಿ ಸೋಲನ್ನು ಅಪ್ಪಿಕೊಳ್ಳಬೇಕಾಯಿತು. ಕಳೆದ ವಿಂಬಲ್ಡನ್ ಪಂದ್ಯಾವಳಿಯ ಪ್ರಿ ಕ್ವಾರ್ಟರ್ ಫೈನಲ್ನಲ್ಲೂ ನವಾರೊ,
ಗಾಫ್ಗೆ ಸೋಲುಣಿಸಿದ್ದರು.
ಪ್ಯಾರಿಸ್ ಒಲಿಂಪಿಕ್ ಚಾಂಪಿಯನ್, ಚೀನದ ಜೆಂಗ್ ಕ್ವಿನ್ವೆನ್ ಕ್ರೊವೇಶಿಯಾದ ಡೋನಾ ವೆಕಿಕ್ ಅವರನ್ನು 7-6 (7-2), 4-6, 6-2ರಿಂದ ಮಣಿಸಿದರು. ಕ್ವಾರ್ಟರ್ ಫೈನಲ್ನಲ್ಲಿ ಇವರು ಅರಿನಾ ಸಬಲೆಂಕಾ ವಿರುದ್ಧ ಸೆಣಸುವರು. ಸಬಲೆಂಕಾ ಬೆಲ್ಜಿಯಂನ ಎಲಿಸ್ ಮಾರ್ಟೆನ್ಸ್ ವಿರುದ್ಧ 6-2, 6-4 ನೇರ ಸೆಟ್ ಜಯ ಗಳಿಸಿದರು.
ಪೊಪಿರಿನ್ ನಿರ್ಗಮನ
ನೊವಾಕ್ ಜೊಕೋವಿಕ್ ಅವರನ್ನು ಕೆಡವಿ ಸುದ್ದಿಯಾಗಿದ್ದ ಅಲೆಕ್ಸಿ ಪೊಪಿರಿನ್ ಕೂಡ ನ್ಯೂಯಾರ್ಕ್ನಿಂದ ನಿರ್ಗಮಿಸಿದ್ದಾರೆ. ಅವರನ್ನು ಆತಿಥೇಯ ದೇಶದ ಫ್ರಾನ್ಸೆಸ್ ಥಿಯಾಫೊ 6-4, 7-6 (7-3), 2-6, 6-3ರಿಂದ ಹಿಮ್ಮೆಟ್ಟಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಥಿಯಾಫೊ ಅವರಿನ್ನು ಬಲ್ಗೇರಿಯಾದ ಗ್ರಿಗರ್ ಡಿಮಿಟ್ರೋವ್ ಸವಾಲನ್ನು ಎದುರಿಸಬೇಕಿದೆ. ಡಿಮಿಟ್ರೋವ್ 6-3, 7-6 (7-3), 1-6, 3-6, 6-3ರಿಂದ ರಷ್ಯಾದ ಆ್ಯಂಡ್ರೆ ರುಬ್ಲೇವ್ ಆಟಕ್ಕೆ ಬ್ರೇಕ್ ಹಾಕಿದರು.
ಅಮೆರಿಕದ ಟೇಲರ್ ಫ್ರಿಟ್ಜ್ ಕೂಡ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಅವರು ಕ್ಯಾಸ್ಪರ್ ರೂಡ್ ವಿರುದ್ಧ 3-6, 6-4, 6-3, 6-2 ಅಂತರದಿಂದ ಗೆದ್ದು ಬಂದರು. ಫ್ರಿಟ್ಜ್ ಅವರ ಕ್ವಾರ್ಟರ್ ಫೈನಲ್ ಎದುರಾಳಿ ಅಲೆಕ್ಸಾಂಡರ್ ಜ್ವೆರೇವ್. ಇವರು ಬ್ರ್ಯಾಂಡನ್ ನಕಶಿಮ ವಿರುದ್ಧ 3-6, 6-1, 6-2 ಅಂತರದ ಜಯ ಸಾಧಿಸಿದರು.