ಮುಂಬಯಿ : ಭಾರತೀಯ ಕ್ರಿಕೆಟ್ ರಂಗದ ದಂತ ಕಥೆ ಎನಿಸಿಕೊಂಡು ಭಾರತ ರತ್ನ ಪ್ರಶಸ್ತಿಗೆ ಪಾತ್ರರಾಗಿದ್ದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅವರ ಕೋಚ್ ರಮಾಕಾಂತ ಆಚ್ರೇಕರ್ ಅವರು ತಮ್ಮ 87ರ ಹರೆಯದಲ್ಲಿ ಇಂದು ಬುಧವಾರ ಇಲ್ಲಿ ನಿಧನ ಹೊಂದಿದರು.
ಸಚಿನ್ ಅವರನ್ನು ಅವರ ಶಾಲಾ ದಿನಗಳಲ್ಲಿ ಅವರ ಸಹೋದರ ಅಜಿತ್ ಅವರು ಮುಂಬಯಿಯ ಶಿವಾಜಿ ಪಾರ್ಕ್ ನಲ್ಲಿ ಅಕಾಡೆಮಿ ನಡೆಸಿಕೊಂಡಿದ್ದ ಆಚ್ರೇಕರ್ ಅವರಿಗೆ ಪರಿಚಯಿಸಿದ್ದರು.
ಎಳೆಯ ಸಚಿನ್ ಅವರಲ್ಲಿನ ಅದ್ಭುತ ಸುಪ್ತ ಕ್ರೀಡಾ ಪ್ರತಿಭೆಯನ್ನು ಆ ದಿನಗಳಲ್ಲೇ ಗುರುತಿಸಿದ್ದ ಆಚ್ರೇಕರ್ ಅವರು ಸಚಿನ್‌ಗೆ ಇಂಡಿಯನ್ ಎಜುಕೇಶನ್ ಸೊಸೈಟಿಯ ನ್ಯೂ ಇಂಗ್ಲಿಷ್ ಸ್ಕೂಲ್ ತೊರೆದು ಶಾರಾದಾಶ್ರಮ ವಿದ್ಯಾಮಂದಿರ (ಇಂಗ್ಲಿಷ್) ಹೈಸ್ಕೂಲಿಗೆ ಸೇರಲು ಸಲಹೆ ನೀಡಿದ್ದರು. ಅಂದಿನ ದಿನಗಳಲ್ಲಿ ಶಾರಾದಾಶ್ರಮ ಶಾಲೆ ಪ್ರಬಲ ಕ್ರಿಕೆಟ್ ತಂಡವನ್ನು ಹೊಂದಿತ್ತು.
ಶಾರದಾಶ್ರಮ ಶಾಲೆಯಲ್ಲಿ ಕಲಿಯುತ್ತಿದ್ದಾಗಲೇ ಸಚಿನ್ ತನ್ನ ಸಹಪಾಠಿ ವಿನೋದ್ ಕಾಂಬ್ಳಿ ಜತೆಗೂಡಿ 1988ರಲ್ಲಿ ಹ್ಯಾರಿಸ್ ಶೀಲ್ಡ್ ಮ್ಯಾಚ್ ನಲ್ಲಿ ಸೈಂಟ್ ಕ್ಸೇವಿಯರ್ ತಂಡದ ವಿರುದ್ಧ 664 ರನ್ ಗಳ ಮ್ಯಾರಥಾನ್ ಜತೆಗಾರಿಕೆಯನ್ನು ನಡೆಸಿದ್ದರು.
ಅದಾಗಿ ವರ್ಷದ ಬಳಿಕ ಸಚಿನ್, ಪಾಕಿಸ್ಥಾನ ಎದುರಿನ ಕರಾಚಿಯ ಟೆಸ್ಟ್ ಪಂದ್ಯದಲ್ಲಿ ಆಡುವ ಮೂಲಕ ಟೆಸ್ಟ್ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದ್ದರು. ಅದಾಗಿ ದಶಕದ ಒಳಗೆ ಸಚಿನ ಕ್ರಿಕೆಟ್ ದಂತ ಕಥೆ ಎನಿಸಿಕೊಂಡಿದ್ದರು.
ಆಚ್ರೇಕರ್ ಅವರ ಪ್ರತಿಭಾವಂತ ಶಿಷ್ಯರಲ್ಲಿ ಅಜಿತ್ ಅಗರ್ಕರ್, ಸಂಜಯ್ ಬಾಂಗರ್, ಬಲ್‌ವೀಂದರ್ ಸಿಂಗ್ ಸಂಧು, ವಿನೋದ್ ಕಾಂಬ್ಳಿ, ಪ್ರವೀಣ್ ಆಮ್ರೆ, ರಮೇಶ್ ಪೊವಾರ್ ಸೇರಿದ್ದಾರೆ.