Advertisement

ಕುಡಿಯುವ ನೀರಿಗೆ ಕೊಳವೆ ಬಾವಿ ಕೊರೆಯಲು ಟೆಂಡರ್‌ ವಿನಾಯ್ತಿ

11:41 PM Apr 30, 2019 | Lakshmi GovindaRaj |

ಬೆಂಗಳೂರು: ರಾಜ್ಯದಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೊಳವೆ ಬಾವಿ ಕೊರೆಸಲು ಟೆಂಡರ್‌ ವಿನಾಯ್ತಿ ನೀಡಿ ಪರಿಸ್ಥಿತಿ ನಿಭಾಯಿಸಲು ಅನುಮತಿ ನೀಡಿ ಸದ್ಯದಲ್ಲೇ ಆದೇಶ ಹೊರಡಿಸಲಾಗುವುದು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್‌ ತಿಳಿಸಿದ್ದಾರೆ.

Advertisement

ವಿಧಾನಸೌಧದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಕುಡಿಯುವ ನೀರಿನ ಕೊರತೆ ಹೆಚ್ಚಾಗುತ್ತಿದ್ದು, ಕಳೆದ 15 ದಿನದಲ್ಲಿ 174 ಹೊಸ ಗ್ರಾಮಗಳಿಗೆ 223 ಟ್ಯಾಂಕರ್‌ ಮೂಲಕ ನೀರು ಪೂರೈಕೆ ಆರಂಭಿಸಲಾಗಿದೆ. ಕುಡಿಯುವ ನೀರಿನ ತುರ್ತು ಅಗತ್ಯತೆ ಆಧರಿಸಿ ಟೆಂಡರ್‌ ವಿನಾಯ್ತಿ ನೀಡಿ ಕೊಳವೆ ಬಾವಿ ಕೊರೆಸಲು ಅನುಮತಿ ನೀಡಲಾಗುವುದು. ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿಗೂ ಒತ್ತು ನೀಡಲಾಗಿದ್ದು, ಘಟಕಗಳು ಬಳಕೆಗೆ ಲಭ್ಯವಿರುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

11 ಗೋಶಾಲೆಗಳನ್ನು ತೆರೆಯಲಾಗಿದ್ದು, ಬಳ್ಳಾರಿಯಲ್ಲಿ 1, ಚಿತ್ರದುರ್ಗದಲ್ಲಿ 6 ಹಾಗೂ ಕೊಪ್ಪಳದಲ್ಲಿ 4 ಗೋಶಾಲೆಗಳಿದ್ದು, 11,120 ಜಾನುವಾರುಗಳನ್ನು ಸಂರಕ್ಷಿಸಲಾಗಿದೆ. 128 ಮೇವು ಬ್ಯಾಂಕ್‌ ಕಾರ್ಯ ನಿರ್ವಹಿಸುತ್ತಿವೆ. ಅಗತ್ಯವಿರುವ ಕಡೆ ಗೋಶಾಲೆ ತೆರೆಯುವಂತೆಯೂ ಸೂಚಿಸಲಾಗಿದೆ.

ಸದ್ಯ 14 ವಾರಗಳಿಗೆ ಸಾಕಾಗುವಷ್ಟು ಮೇವು ಸಂಗ್ರಹವಿದೆ. ಬಳ್ಳಾರಿ, ರಾಯಚೂರಿನಲ್ಲಿ ಬತ್ತದ ಕಟಾವು ಹಿನ್ನೆಲೆಯಲ್ಲಿ ಮೇವು ಲಭ್ಯತೆ ಹೆಚ್ಚಾಗಿದೆ. ಬರ ನಿರ್ವಹಣೆ ಕಾರ್ಯಕ್ಕೆ ಅಡ್ಡಿಯಾಗದಂತೆ ಸೂಕ್ತ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರಕೃತಿ ವಿಕೋಪ ಕಾಮಗಾರಿಗಳಿಗೆ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ 682 ಕೋಟಿ ರೂ.ಅನುದಾನ ಬಿಡುಗಡೆಯಾಗಿದ್ದು, ಎಲ್ಲ ಜಿಲ್ಲಾಧಿಕಾರಿಗಳ ಪಿ.ಡಿ.ಖಾತೆಯಲ್ಲಿ ಒಟ್ಟು 726 ಕೋಟಿ ರೂ.ಹಣವಿದೆ ಎಂದರು.

ಮಾದರಿ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಬರ ಪರಿಸ್ಥಿತಿ ಪರಿಶೀಲನಾ ಸಭೆ ನಡೆಸಲು ಅವಕಾಶವಿಲ್ಲ. ಆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು, ಸಚಿವರು, ಶಾಸಕರು ಬರ ಪರಿಸ್ಥಿತಿ ಕುರಿತಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯ್ತಿ ಸಿಇಒಗಳೊಂದಿಗೆ ಸಭೆ ನಡೆಸಲು ಅನುಮತಿ ಕೋರಿ ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗಿದೆ. ಈ ನಡುವೆ ಅಧಿಕಾರಿಗಳ ಮಟ್ಟದಲ್ಲಿ ಬರ ಪರಿಸ್ಥಿತಿಗೆ ಸಂಬಂಧಪಟ್ಟಂತೆ ಪ್ರತಿ 15 ದಿನಕ್ಕೊಮ್ಮೆ ಸಭೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

Advertisement

ನಾಲ್ಕು ಬಾರಿ ವಿಡಿಯೋ ಸಂವಾದ: ಮಾ.16, ಏ.2, ಏ.15, ಏ.30ರಂದು ಎಲ್ಲ ಜಿಲ್ಲಾಧಿಕಾರಿಗಳು, ಸಿಇಒಗಳೊಂದಿಗೆ ಬರ ಸ್ಥಿತಿಗತಿ ಕುರಿತಂತೆ ವಿಡಿಯೋ ಸಂವಾದ ನಡೆಸಿದ್ದೇನೆ. ಕುಡಿಯುವ ನೀರು ಪೂರೈಕೆ ಸ್ಥಿತಿಗತಿ ಪರಿಶೀಲನೆಗೆ ಸಂಬಂಧಪಟ್ಟಂತೆ ಕಳೆದ ಶನಿವಾರ ಎಲ್ಲಾ ಜಿಲ್ಲಾ ಪಂಚಾಯ್ತಿ ಸಿಇಒಗಳೊಂದಿಗೆ ಬೆಂಗಳೂರಿನಲ್ಲಿ ಸಭೆ ನಡೆಸಲಾಯಿತು.

“ನರೇಗಾ’ ಅಡಿ ಮಾನವ ದಿನ ಸೃಷ್ಟಿ ಬಗ್ಗೆಯೂ ಪರಿಶೀಲನೆ ನಿರಂತರವಾಗಿ ನಡೆದಿದೆ. ಸಚಿವಾಲಯದ ಮಟ್ಟದಲ್ಲಿ ಅಭಿವೃದ್ಧಿ ಆಯುಕ್ತರು ಇಲಾಖಾ ಮುಖ್ಯಸ್ಥರೊಂದಿಗೆ ಪ್ರತಿ ವಾರ ಸಭೆ ನಡೆಸಿ, ಕುಡಿಯುವ ನೀರು ಸೇರಿದಂತೆ ಇತರ ವಿಚಾರಗಳ ಬಗ್ಗೆ ಸಿಇಒಗಳೊಂದಿಗೆ ಚರ್ಚಿಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಜಿಲ್ಲಾ ಅಭಿವೃದ್ಧಿ ಸ್ಥಿತಿ, ಬರ ಪರಿಸ್ಥಿತಿ ಸಮೀಕ್ಷೆ ನಡೆಸುತ್ತಿದ್ದಾರೆ ಎಂದರು.

ಜಿಲ್ಲಾಮಟ್ಟದಲ್ಲಿ ಕುಡಿಯುವ ನೀರಿಗೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿಗಳು ಹಾಗೂ ತಾಲೂಕು ಮಟ್ಟದಲ್ಲಿ ತಹಸೀಲ್ದಾರರುಗಳು ನಿಯಮಿತವಾಗಿ ಪರಿಶೀಲನಾ ಸಭೆ ನಡೆಸಲಿದ್ದಾರೆ. ಕುಡಿಯುವ ನೀರಿನ ನಿರ್ವಹಣೆಗೆ ಸಂಬಂಧಪಟ್ಟಂತೆ 26 ಜಿಲ್ಲೆಗಳಲ್ಲಿ 1205 ಗ್ರಾಮಗಳಿಗೆ 1893 ಟ್ಯಾಂಕರ್‌ನಲ್ಲಿ ನೀರು ಪೂರೈಸಲಾಗುತ್ತಿದೆ. ರಾಜ್ಯಾದ್ಯಂತ 1392 ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು, 1064 ಗ್ರಾಮಗಳಿಗೆ ನೀರು ಪೂರೈಸಲಾಗುತ್ತಿದೆ.

ನಗರ ಪ್ರದೇಶಗಳಲ್ಲಿ 303 ವಾರ್ಡ್‌ಗಳಿಗೆ 214 ಟ್ಯಾಂಕರ್‌ನಲ್ಲಿ ನೀರು ವಿತರಿಸಲಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ತಲೆದೋರಿದರೆ ತಕ್ಷಣ ಟ್ಯಾಂಕರ್‌ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು. ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜ್‌ಕುಮಾರ್‌ ಕತ್ರಿ, ಜಲಮಂಡಲಿ ಪ್ರಧಾನ ಎಂಜಿನಿಯರ್‌ ಕೆಂಪರಾಮಯ್ಯ ಉಪಸ್ಥಿತರಿದ್ದರು.

ಕಳೆದ ವರ್ಷ ಕೊಡಗು, ಚಿಕ್ಕಮಗಳೂರು ಹಾಗೂ ಮಲೆನಾಡಿನ ಕೆಲವೆಡೆ ಪ್ರವಾಹ ತಲೆದೋರಿದ್ದ ಹಿನ್ನೆಲೆಯಲ್ಲಿ ಈ ಬಾರಿಯ ಮಳೆಗಾಲದಲ್ಲಿ ಯಾವುದೇ ಅನಾಹುತ ಉಂಟಾಗದಂತೆ ತಡೆಯಲು ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆಯ (ಎನ್‌ಡಿಆರ್‌ಎಫ್) ಎರಡು ತಂಡ ಸ್ಥಳಕ್ಕೆ ಭೇಟಿ ನೀಡಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸೂಚನೆ ನೀಡಲಿದೆ. ಹಿರಿಯ ಅಧಿಕಾರಿಗಳ ತಂಡ ಗುರುವಾರ, ಶುಕ್ರವಾರ ಹಾಗೂ ಶನಿವಾರ ಕೊಡಗು, ಮಂಗಳೂರು, ಉಡುಪಿಗೆ ಭೇಟಿ ನೀಡಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪರಿಶೀಲಿಸಲಿದೆ. ಮುಂದಿನ ವಾರ ಅಧಿಕಾರಿಗಳ ತಂಡ ಚಿಕ್ಕಮಗಳೂರು, ಹಾಸನಕ್ಕೆ ಭೇಟಿ ನೀಡಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಪರಿಶೀಲಿಸಲಿದೆ.
– ಟಿ.ಎಂ. ವಿಜಯ ಭಾಸ್ಕರ್‌, ಮುಖ್ಯ ಕಾರ್ಯದರ್ಶಿ.

Advertisement

Udayavani is now on Telegram. Click here to join our channel and stay updated with the latest news.

Next