Advertisement

ಟೆಂಡರ್‌ ವಿನಾಯ್ತಿ ಮಿತಿ 5 ಕೋಟಿಗೆ ಏರಿಕೆ

09:17 AM Dec 04, 2017 | |

ಬೆಂಗಳೂರು: ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮವು (ಕೆಆರ್‌ಐಡಿಸಿಎಲ್‌) ಕೆಟಿಪಿಪಿ ಕಾಯ್ದೆ ವಿನಾಯ್ತಿಯಡಿ ಕೈಗೊಳ್ಳುವ ಕಾಮಗಾರಿ ಮೊತ್ತದ ಮಿತಿಯನ್ನು 2 ಕೋಟಿ ರೂ.ನಿಂದ 5 ಕೋಟಿ ರೂ.ಗೆ ಹೆಚ್ಚಿಸುವ ಸಂಬಂಧ ಪ್ರಸ್ತಾವ ಸಲ್ಲಿಸಿದರೆ ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯು ಕೆಆರ್‌ಐಡಿಸಿಎಲ್‌ ಸಹಯೋಗದಲ್ಲಿ ನಗರದ ಆನಂದರಾವ್‌ ವೃತ್ತದಲ್ಲಿ ನೂತನವಾಗಿ ನಿರ್ಮಿಸಲಿರುವ “ಗ್ರಾಮೀಣಾಭಿವೃದ್ಧಿ ಭವನ-2′ ನಿರ್ಮಾಣಕ್ಕೆ ಭಾನುವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ತುರ್ತು ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳಲು ಟೆಂಡರ್‌ ಇಲ್ಲದೇ ಕೆಆರ್‌ ಡಿಸಿಎಲ್‌ಗೆ ವಹಿಸುವ ಕಾಮಗಾರಿ ಮೊತ್ತದ
ಮಿತಿಯನ್ನು 2 ಕೋಟಿ ರೂ.ನಿಂದ 5 ಕೋಟಿ ರೂ.ಗೆ ವಿಸ್ತರಿಸುವ ಬಗ್ಗೆ ಪ್ರಸ್ತಾವ ಸಲ್ಲಿಸಿ ಎಂದು ಇಲಾಖೆ ಪ್ರಧಾನ ಕಾರ್ಯದರ್ಶಿ ನಾಗಾಂಬಿಕಾದೇವಿ ಅವರಿಗೆ ಸೂಚನೆ ನೀಡಿದರು. ಪ್ರಸ್ತಾವವು ಆರ್ಥಿಕ ಇಲಾಖೆಗೆ ಬಂದಾಗ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.

ಹಿಂದೆಂದೂ ಇಷ್ಟು ಅಭಿವೃದ್ಧಿಯಾಗಿಲ್ಲ!:
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಬಹುದೊಡ್ಡ ಇಲಾಖೆಯಾಗಿದ್ದು, ವರ್ಷಕ್ಕೆ 14,000 ಕೋಟಿ ರೂ. ಅನುದಾನ ವೆಚ್ಚ ಮಾಡಲಾಗುತ್ತಿದೆ. ನಗರದಂತೆ ಗ್ರಾಮೀಣ ಪ್ರದೇಶಗಳಿಗೂ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗಿದೆ. ನಮ್ಮ ಸರ್ಕಾರದಲ್ಲಾದಷ್ಟು ಗ್ರಾಮೀಣಾಭಿವೃದ್ಧಿ ಕಾರ್ಯಗಳು ಹಿಂದಿನ ಯಾವ ಕಾಲದಲ್ಲೂ ಆಗಿಲ್ಲ ಎಂದು ಹೇಳಿದರು.

ರಾಜ್ಯಾದ್ಯಂತ 10,100 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಲಾಗಿದೆ. 2018ರ ಮಾರ್ಚ್‌ಗೆ ಕರ್ನಾಟಕವನ್ನು ಬಯಲು ಬಹಿರ್ದೆಸೆ ಮುಕ್ತ ರಾಜ್ಯವನ್ನಾಗಿಸಲು ಸಚಿವ ಎಚ್‌.ಕೆ.ಪಾಟೀಲ್‌ ಅವರು ಸಂಕಲ್ಪ ತೊಟ್ಟಿದ್ದು, ಅದನ್ನು ಸಾಕಾರಗೊಳಿಸಲು
ಇಲಾಖೆ ಅಧಿಕಾರಿ, ನೌಕರರು ಶ್ರಮಿಸಬೇಕು ಎಂದು ಸೂಚಿಸಿದರು.

ಗುಣಮಟ್ಟ, ಪಾರದರ್ಶಕತೆ ಕಾಯ್ದುಕೊಳ್ಳಿ: ಕೆಆರ್‌ ಐಡಿಸಿಎಲ್‌ ಕೈಗೊಳ್ಳುವ ಕಾಮಗಾರಿಗಳಿಗೆ ಕೆಟಿಪಿಪಿ ಕಾಯ್ದೆಯಿಂದ ವಿನಾಯ್ತಿ ನೀಡುವುದರಿಂದ ನಿಗಮವು ಹೆಚ್ಚಿನ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಗುಣ ಮಟ್ಟ, ಕಾಲಮಿತಿ ಪಾಲನೆಯಲ್ಲಿ ರಾಜಿಯಿಲ್ಲದಂತೆ
ಕಾರ್ಯ ನಿರ್ವಹಿಸಬೇಕು. ಆ ಮೂಲಕ ಗುತ್ತಿಗೆ ಸಂಸ್ಥೆ ಗಳಿಗೆ ಮಾದರಿಯಾಗಬೇಕು ಎಂದು ಹೇಳಿದರು. 

Advertisement

ಗ್ರಾಮೀಣಾಭಿವೃದ್ಧಿ ಇಲಾಖೆಯ ಎಲ್ಲ ಕಚೇರಿ, ಅಧೀನ ಸಂಸ್ಥೆಗಳು ಒಂದೆಡೆ ಕಾರ್ಯ ನಿರ್ವಹಿಸಲು ಅನುಕೂಲವಾಗುವಂತೆ 78 ಕೋಟಿ ರೂ. ವೆಚ್ಚದಲ್ಲಿ ಗ್ರಾಮೀಣಾಭಿವೃದ್ಧಿ ಭವನ- 2ರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಐದು ಮಹಡಿಯ
ಕಟ್ಟಡವನ್ನು ಕಾಲಮಿತಿಯೊಳಗೆ ನಿಗಮ ನಿರ್ಮಿಸಲಿ. ಇದರಿಂದ ಇಲಾಖೆ ಕೆಲಸ ಕಾರ್ಯಗಳು ತ್ವರಿತಗತಿಯಲ್ಲಿ ನಡೆಯುವಂತಾಗಲಿ ಎಂದು ತಿಳಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಎಚ್‌.ಕೆ.ಪಾಟೀಲ್‌, ಕೆಆರ್‌ಐಡಿಸಿಎಲ್‌ ವಿಶಿಷ್ಟವಾದ ಸಂಸ್ಥೆ. ತುರ್ತು ಸಂದರ್ಭದಲ್ಲಿ ತ್ವರಿತವಾಗಿ ಶ್ರಮವಹಿಸಿ ಕೆಲಸ ಪೂರ್ಣಗೊಳಿಸುವುದು ನಿಗಮದ ಹಿರಿಮೆ. ಈ ಹಿಂದೆ 2015ರ ಮಾರ್ಚ್‌ಗೆ 7000 ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸುವಾಗಿ ಘೋಷಿಸಲಾಗಿತ್ತು. ಆದರೆ ಎಂಟು ತಿಂಗಳು ಕಳೆದರೂ ಟೆಂಡರ್‌ ಪ್ರಕ್ರಿಯೆ ನಡೆದಿರಲಿಲ್ಲ. ಅಂತಿಮವಾಗಿ ಕೆಆರ್‌ಐಡಿಸಿಎಲ್‌ಗೆ ಈ ಜವಾಬ್ದಾರಿ ವಹಿಸಲಾಯಿತು.

ಕಾಲಮಿತಿಯೊಳಗೆ 6,500 ನೀರಿನ ಘಟಕ ನಿರ್ಮಿಸಿದ್ದು ನಿಗಮದ ಹೆಗ್ಗಳಿಕೆ ಎಂದು ಸ್ಮರಿಸಿದರು. ಕೃಷ್ಣಗಿರಿ ಬಳಿಯ ಖಾಸಗಿ ಫ್ಯಾಕ್ಟರಿಯೊಂದರಲ್ಲಿ ಪ್ರೀಕಾಸ್ಟ್‌ ಗೋಡೆ, ತಾರಸಿ, ಕಿಟಕಿ, ಬಾಗಿಲುಗಳು ನಿರ್ಮಾಣವಾಗುತ್ತವೆ. ಹಾಗಾಗಿ ಸ್ವಂತ ಕಾರ್ಖಾನೆ
ಹೊಂದುವತ್ತ ಚಿಂತಿಸಬೇಕಿದೆ. ಇಲಾಖೆಯಲ್ಲಿ ಹಣದ ಕೊರತೆಯಿಲ್ಲ. ಆದರೆ ಕಾಲಮಿತಿಯೊಳಗೆ ಕೆಲಸ ಆಗಬೇಕು. ಅಪೂರ್ಣ ಕಾಮಗಾರಿಗಳು ಹೆಚ್ಚಿದ್ದು, ಅದನ್ನು ತ್ವರಿತವಾಗಿ ಮುಗಿಸಲು ಗಮನ ಹರಿಸಬೇಕು ಎಂದು ಸೂಚನೆ ನೀಡಿದರು.

ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಎನ್‌ .ನಾಗಾಂಬಿಕಾದೇವಿ, ಕೆಆರ್‌ಐಡಿಸಿಎಲ್‌ ಸಂಸ್ಥೆಗೆ ಕೆಟಿಪಿಪಿ ಅಡಿ ನೀಡುವ ವಿನಾಯ್ತಿಯನ್ನು ಪ್ರತಿ ವರ್ಷ ನವೀಕರಿಸುವ ಬದಲು 3- 5 ವರ್ಷದ ಅವಧಿಗೆ ನೀಡಿದರೆ ಅನುಕೂಲವಾಗಲಿದ್ದು, ಈ ಬಗ್ಗೆ ಪರಿಶೀಲಿಸಬೇಕು ಎಂದು ಮನವಿ ಮಾಡಿದರು. ಶಾಸಕ ದಿನೇಶ್‌ ಗುಂಡೂರಾವ್‌, ಕೆಆರ್‌ ಐಡಿಸಿಎಲ್‌ ಅಧ್ಯಕ್ಷರೂ ಆದ ಶಾಸಕ ರಾಜಶೇಖರ್‌ ಬಿ.ಪಾಟೀಲ್‌, ಪಾಲಿಕೆ ಸದಸ್ಯರಾದ ಆರ್‌.ಜೆ.ಲತಾ, ಆರ್‌.ಎಸ್‌.ಸತ್ಯನಾರಾಯಣ, ಕೆಆರ್‌ಐಡಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಡಾ.ಆರ್‌.ರಾಜು, ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿವಿ ಕುಲಪತಿ ತಿಮ್ಮೇಗೌಡ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಆಯುಕ್ತ ಎಚ್‌. ಪಿ.ಪ್ರಕಾಶ್‌ ಇತರರು ಉಪಸ್ಥಿತರಿದ್ದರು.

ಮುಂದೆ ಇದೆ, ಆತಂಕ ಬೇಡ ರಾಜಶೇಖರ್‌ ಬಿ.ಪಾಟೀಲ್‌ ಮಂತ್ರಿ ಆಗಬೇಕೆಂಬ ನಿರೀಕ್ಷೆಯಲ್ಲಿದ್ದರು. ಹಾಗಾಗಿ ಒಲ್ಲದ ಮನಸ್ಸಿನಿಂದಲೇ ನಿಗಮದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ನಾಲ್ಕು ಬಾರಿ ಶಾಸಕರಾಗಿರುವ ರಾಜಶೇಖರ್‌ ಪಾಟೀಲ್‌
ಅವರಿಗೆ ಸಚಿವರಾಗಬೇಕೆಂಬ ಆಸೆ ಸಹಜ. ಮುಂದೆ ನಮ್ಮ ಸರ್ಕಾರವೇ ಅಧಿಕಾರಕ್ಕೆ ಬರಲಿದೆ. ಮುಂದೆ ಇದೆ. ಆತಂಕ ಬೇಡ ಎಂದು ಸಿದ್ದರಾಮಯ್ಯ ಅವರು ಶಾಸಕ ರಾಜಶೇಖರ್‌ ಪಾಟೀಲ್‌ಗೆ ಹೇಳಿದರು. 

ಲ್ಯಾಂಡ್‌ಆರ್ಮಿ ಹೆಸರೇ ಚೆನ್ನಾಗಿತ್ತು!
ಗುತ್ತಿಗೆದಾರರನ್ನು ತಪ್ಪಿಸಲು ಹಾಗೂ ಗ್ರಾಮೀಣ ಜನರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ “ಲ್ಯಾಂಡ್‌ಆರ್ಮಿ’ ಸಂಸ್ಥೆ ಸ್ಥಾಪನೆಯಾಯಿತು. ಉದಾತ್ತ ಚಿಂತನೆಯೊಂದಿಗೆ ಬಳಸಿದ್ದ “ಲ್ಯಾಂಡ್‌ಆರ್ಮಿ’ ಪದವೇ ಚೆನ್ನಾಗಿತ್ತು. ಆದರೆ 2009ರಲ್ಲಿ ಯಾವ ಕಾರಣಕ್ಕೆ ಲ್ಯಾಂಡ್‌ ಆರ್ಮಿಯನ್ನು ಕೆಆರ್‌ಐಡಿಸಿಎಲ್‌ ಎಂದು ಬಿಜೆಪಿ ಸರ್ಕಾರದ ಅವಧಿಯಲ್ಲಿ ಮರುನಾಮಕರಣ ಮಾಡಿದ್ದಾರೋ ಗೊತ್ತಿಲ್ಲ. ಈಗಾಗಲೇ ಹೆಸರು ಬದಲಾಯಿಸಿರುವುದರಿಂದ ಮತ್ತೆ ಬದಲಿಸಬೇಡಿ. ಬಿಜೆಪಿ ಸರ್ಕಾರ ಇಟ್ಟಿದ್ದ ಹೆಸರು ಬದಲಾಯಿಸಲಾಗಿದೆ ಎಂಬ ಅಭಿಪ್ರಾಯ ಬರಲಿದೆ. ಒಟ್ಟಿನಲ್ಲಿ ನಿಗಮದಿಂದ ಉತ್ತಮ ಕೆಲಸವಾದರೆ ಸಾಕು.
 ●ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next