Advertisement

ನೆಹರು ಕ್ರೀಡಾಂಗಣಕ್ಕಿಲ್ಲ ಟೆಂಡರ್‌ ಭಾಗ್ಯ

01:19 PM Sep 14, 2017 | |

ಬೀದರ: ನಗರದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಅತ್ಯಾಧುನಿಕ ಕ್ರೀಡಾಂಗಣ ಕಾಮಗಾರಿಗೆ ಇನ್ನು ಟೆಂಡರ್‌ ಕರೆದಿಲ್ಲ. ನೆಹರು ಕ್ರೀಡಾಂಗಣಕ್ಕೆ ಈವರೆಗೆ ಕಾಮಗಾರಿ ಟೆಂಡರ್‌ ಪ್ರಕ್ರಿಯೆ ಸಹ ನಡೆಯದಿರುವುದು ಕ್ರೀಡಾ ಇಲಾಖೆ ನಿರ್ಲಕ್ಯಕ್ಕೆ ಸಾಕ್ಷಿ ಎನ್ನುವಂತಾಗಿದೆ. ನಗರದಲ್ಲಿ ಆಗಸ್ಟ್‌ 13ರಂದು ಮುಖ್ಯಮಂತ್ರಿಗಳು ಬೀದರ ಕ್ಷೇತ್ರದ 800 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಅದರಲ್ಲಿ 4.66 ಕೋಟಿ ರೂ. ವೆಚ್ಚದ ನೆಹರು ಕ್ರೀಡಾಂಗಣ ಕಾಮಗಾರಿ ಸಹ ಸೇರಿತ್ತು. ಆದರೆ, ಶಂಕುಸ್ಥಾಪನೆ ನೆರವೇರಿಸಿ ತಿಂಗಳು ಕಳೆದರೂ ಕಾಮಗಾರಿಗೆ ಟೆಂಡರ್‌ ಕರೆದಿಲ್ಲ. ಹಾಗಾಗಿ ನಿರ್ಮಾಣ ಕಾರ್ಯ ವಿಳಂಬವಾಗಿದೆ.

Advertisement

ಕಳೆದ ನಾಲ್ಕು ದಶಕಗಳ ಹಿಂದೆ ನಿರ್ಮಾಣವಾಗಿದ್ದ ನೆಹರು ಕ್ರೀಡಾಂಗಣ ಶಿಥಿಲಾವಸ್ಥೆಗೆ ತಲುಪಿತ್ತು. ಕ್ರಿಕೆಟ್‌, ಫುಟ್‌ಬಾಲ್‌, ವಾಲಿಬಾಲ್‌ ಟೂರ್ನಿಗಳು, ಶಾಲಾ ಕಾಲೇಜುಗಳ ಕ್ರೀಡಾಕೂಟ ಹಾಗೂ ತರಬೇತಿ ಸೇರಿದಂತೆ ರಾಜಕೀಯ ಮತ್ತಿತರರ ಸಾರ್ವಜನಿಕ ಕಾರ್ಯಕ್ರಮಗಳಿಗೆ ಸ್ಥಳಾವಕಾಶ ಕಲ್ಪಿಸುತ್ತಿದ್ದ ಕ್ರೀಡಾಂಗಣ ಅತ್ಯಂತ ಕಳಾಹೀನವಾಗಿತ್ತು. ಪ್ರೇಕ್ಷಕರ ಗ್ಯಾಲರಿಗಳು ಕುಸಿದು ಬಿದ್ದು ಅನಾಹುತದ ಆತಂಕ ಇತ್ತು. ಕ್ರೀಡಾಂಗಣದ ದುಸ್ಥಿತಿ ಮನಗಂಡ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಅತ್ಯಾಧುನಿಕ ಕ್ರೀಡಾಂಗಣ ನಿರ್ಮಾಣಕ್ಕೆ ಹೈದ್ರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಮಂಡಳಿಯಿಂದ ಅನುದಾನ ಸಿಗುವ ಭರವಸೆ ಗಟ್ಟಿಯಾಗುತ್ತಿದ್ದಂತೆ
ದೀನಾವಸ್ಥೆಯಲ್ಲಿದ್ದ ಗ್ಯಾಲರಿಯನ್ನು ನವೆಂಬರನಲ್ಲೇ ನೆಲಸಮಗೊಳಿಸಲಾಗಿತ್ತು. ಅಷ್ಟೇ ಅಲ್ಲ ಲೋಕೋಪಯೋಗಿ ಇಲಾಖೆ ಮೂಲಕ ಅತ್ಯಾಧುನಿಕ ಕ್ರೀಡಾಂಗಣಕ್ಕಾಗಿ ಹೊಸಪೇಟೆ ವಿನ್ಯಾಸಗಾರರಿಂದ ವಿನ್ಯಾಸ ಸಹ ರಚಿಸಲಾಗಿತ್ತು. ಶೀಘ್ರದಲ್ಲಿ ಕೆಲಸ ಪೂರ್ಣಗೊಂಡು ಲೋಕಾರ್ಪಣೆ ಮಾಡುವ ಬಗ್ಗೆ ಸಚಿವ ಈಶ್ವರ ಖಂಡ್ರೆ, ಅಧಿಕಾರಿಗಳಿಂದ ಭರವಸೆ ವ್ಯಕ್ತವಾಗಿತ್ತು. ಆದರೆ, ಅದೆಲ್ಲವೂ ಇನ್ನೂ ಭರವಸೆಯಾಗಿಯೇ ಉಳಿದಿವೆ.

ಕ್ರೀಡಾಂಗಣದಲ್ಲಿ ಏನೇನಿರುತ್ತದೆ?
ಕಡಿಮೆ ವೆಚ್ಚದಲ್ಲಿ ಅತ್ಯಾಧುನಿಕ ಕ್ರೀಡಾಂಗಣ ನಿರ್ಮಾಣ ಮಾಡುವ ಉದ್ದೇಶ ಹೊಂದಿದ್ದು, ಪೊಲೀಸ್‌ ಗೃಹ ನಿರ್ಮಾಣ ಮಂಡಳಿಗೆ ಕಾಮಗಾರಿ ಉಸ್ತುವಾರಿ ವಹಿಸಲಾಗಿದೆ. ನೂತನ ಕ್ರೀಡಾಂಗಣದಲ್ಲಿ ಫುಟ್‌ಬಾಲ್‌, ಹಾಕಿ ಹಾಗೂ ಅಥ್ಲೆಟಿಕ್‌ ಟ್ರ್ಯಾಕ್ , ಹೊರ ಆವರಣದಲ್ಲಿ ವಾಲಿಬಾಲ್‌, ಟೆನ್ನಿಸ್‌, ಬಾಸ್ಕೆಟ್‌ಬಾಲ್‌ ಸೇರಿದಂತೆ ಕಬಡ್ಡಿ, ಖೋಖೋಗೂ ಅಗತ್ಯ ಮೈದಾನದ ಅಂಗಣವನ್ನು ನಿರ್ಮಾಣ ಜತೆಗೆ ಕ್ರಿಕೆಟ್‌ ಆಟಗಾರರಿಗೆ ತರಬೇತಿಗಾಗಿ ನೆಟ್‌ಗಳನ್ನು ಹಾಕುವ ಯೋಚನೆ ಇದೆ.

ಶೀಘ್ರ ಟೆಂಡರ್‌ ಪ್ರಕ್ರಿಯೆ
ನೂತನ ಕ್ರೀಡಾಂಗಣ ನಿರ್ಮಾಣದ ಉಸ್ತುವಾರಿಯನ್ನು ಪೊಲೀಸ್‌ ಗೃಹ ನಿರ್ಮಾಣ ಮಂಡಳಿಗೆ ವಹಿಸಲಾಗಿದೆ. ಅಂದಾಜು ವೆಚ್ಚದ ಪಟ್ಟಿ ಜಿಲ್ಲಾ ಧಿಕಾರಿಗಳಿಗೆ ಈಗಷ್ಟೇ ಸಲ್ಲಿಕೆಯಾಗಿದೆ. ಕೌಂಟರ್‌ ಸಹಿ ಬಳಿಕ ಮಂಡಳಿಗೆ ಸಲ್ಲಿಸಿ ತಾಂತ್ರಿಕ ಪರವಾನಿಗೆ ಪಡೆದುಕೊಳ್ಳಲಾಗುವುದು. ಇದಾದ ಬಳಿಕ
ಶೀಘ್ರ ಟೆಂಡರ್‌ ಪ್ರಕ್ರಿಯೆ ನಡೆಸಿ ಕಾಮಗಾರಿ ಶುರು ಮಾಡಲಾಗುವುದು. 
ಅಮೃತ ಅಷ್ಟಗಿ, ಸಹಾಯಕ ನಿರ್ದೇಶಕ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ,

ಶಶಿಕಾಂತ ಬಂಬುಳಗೆ

Advertisement
Advertisement

Udayavani is now on Telegram. Click here to join our channel and stay updated with the latest news.

Next