Advertisement

ಮಂದಿರಗಳ ಭೇಟಿಗೆ ಒಲವು

06:20 AM Feb 27, 2018 | |

ಹುಬ್ಬಳ್ಳಿ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯ ಕೊನೆಯ ದಿನದ ಜನಾಶೀರ್ವಾದ ಯಾತ್ರೆಯಲ್ಲಿ ಹಲವಾರು ವಿಶೇಷಗಳು ಕಂಡು ಬಂದವು. 

Advertisement

ಮೊದಲೆರಡು ದಿನ ಮಠ, ಮಂದಿರಗಳಿಂದ ದೂರವಿದ್ದ ರಾಹುಲ್‌ ಗಾಂಧಿ ಮೂರನೇ ದಿನದ ಪ್ರವಾಸದಲ್ಲಿ ಮಠ ಮಂದಿರಗಳ ಭೇಟಿಗೂ ಹೆಚ್ಚಿನ ಸಮಯ ಮೀಸಲಿಟ್ಟರು.

ರಾಮದುರ್ಗ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಗೊಡಚಿ ವೀರಭದ್ರೇಶ್ವರ ದೇವಸ್ಥಾನ, ಸವದತ್ತಿ ಯಲ್ಲಮ್ಮ ದೇಗುಲ ಹಾಗೂ ಧಾರವಾಡದ ಪ್ರಸಿದ್ಧ ಮುರುಘಾಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.

ಮೂರನೇ ದಿನ ಬಸವಣ್ಣನ ಧ್ಯಾನದ ಜತೆಗೆ ಕೇಂದ್ರ ಸರ್ಕಾರದ ವೈಫ‌ಲ್ಯಗಳ ಬಗ್ಗೆ ವಾಗ್ಧಾಳಿ ನಡೆಸಿದ ರಾಹುಲ್‌ ಗಾಂಧಿ, ಪ್ರಧಾನಿ ಮೋದಿ ಉದ್ಯಮಿಗಳ ಪರವಾಗಿದ್ದು, ಉದ್ಯಮಗಳು ಮತ್ತು ಮಾಧ್ಯಮಗಳು ಮೋದಿ ಪರವಾಗಿವೆ.

ಆದರೆ, ರೈತರು,ಬಡವರು ಕಾಂಗ್ರೆಸ್‌ ಪರವಾಗಿದ್ದಾರೆ. ಹೀಗಾಗಿ ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ನಾವು ನುಡಿದಂತೆ ನಡೆದಿದ್ದೇವೆ. ನಾನು ಮತ್ತು ಸಿದ್ದರಾಮಯ್ಯ ನಿಮ್ಮ ಏಳಿಗೆಗೆ ಶ್ರಮಿಸುತ್ತೇವೆ ಎನ್ನುವ ಮೂಲಕ ಬಹುಮತ ಪಡೆದರೆ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎನ್ನುವುದನ್ನು ಪರೋಕ್ಷವಾಗಿ ಹೇಳಿದರು.

ಗದ್ದುಗೆ ದರ್ಶನ: ನಂತರ ರಾಹುಲ್‌ ಅವರು ಧಾರವಾಡದ ಮುರುಘಾ ಮಠಕ್ಕೆ ಭೇಟಿ ನೀಡಿ ಅಥಣಿ ಶ್ರೀ ಮುರುಘೇಂದ್ರ ಶಿವಯೋಗಿಗಳು, ಶ್ರೀ ಮೃತ್ಯುಂಜಯ ಅಪ್ಪಗಳ ಹಾಗೂ ಶ್ರೀ ಮಹಾಂತಪ್ಪಗಳ ಗದ್ದುಗೆ ದರ್ಶನ ಪಡೆದರು. ಮಠದ ಟ್ರಸ್ಟ್‌ ಕಮೀಟಿ ಚೇರಮನ್ನರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ, ಬಸವೇಶ್ವರ ಬೆಳ್ಳಿ ಮೂರ್ತಿ ನೀಡಿ ಅವರನ್ನು ಗೌರವಿಸಿದರು.

ರೈತರ ಕಷ್ಟ, ಸುಖ ವಿಚಾರಿಸಿದ ರಾಹುಲ್‌
ರಾಮದುರ್ಗ: ಜನಾಶೀರ್ವಾದ ಯಾತ್ರೆಯ ಕೊನೆಯ ದಿನ ರಾಹುಲ್‌ ಗಾಂಧಿ ಕಬ್ಬಿನ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತರು ಹಾಗೂ ಕೂಲಿ ಕಾರ್ಮಿಕರನ್ನು ಭೇಟಿ ಮಾಡಿ ಕಷ್ಟ ಸುಖ ವಿಚಾರಿಸಿದರು. ರಾಮದುರ್ಗ ತಾಲೂಕಿನ ಚಿಮೂರು ಕ್ರಾಸ್‌ ಬಳಿ ಗೋಳೂರು ರಾಮಯ್ಯ ಹಾಗೂ ಅವರ ಪತ್ನಿ ರಾಮಕ್ಕ ಅವರನ್ನು ಭೇಟಿ ಮಾಡಿ, ಶಕುಂತಲಾ ಎಂಬ ರೈತ ಮಹಿಳೆ ಜತೆ ಕೃಷಿ ಚಟುವಟಿಕೆ ಮತ್ತು ಉತ್ಪಾದನೆಯ ಬಗ್ಗೆ ಮಾತನಾಡಿಸಿದರು. ಇದೇ ವೇಳೆ, ಕೂಲಿ ಕಾರ್ಮಿಕರನ್ನೂ ಮಾತನಾಡಿಸಿದ ರಾಹುಲ್‌ ಗಾಂಧಿ ಪ್ರತಿ ದಿನ ಅವರು ಪಡೆಯುವ ಕೂಲಿ ಎಷ್ಟು ಎಂದು ಕೇಳಿದಾಗ ನೂರು ರೂ. ಎಂದು ಕೂಲಿ ಮಹಿಳೆಯರು ಹೇಳಿದರು. ತಮಗೆ ಅನ್ನಭಾಗ್ಯ ಯೋಜನೆಯ ಅಕ್ಕಿ ಬರುತ್ತಿದ್ದು, ವಾಸಿಸಲು ಮನೆಯಿಲ್ಲ. ಮನೆ ನೀಡುವಂತೆ ಮನವಿ ಮಾಡಿಕೊಂಡರು.

ರಾಹುಲ್‌ ಗಾಂಧಿಯವರು ಬಸವಣ್ಣನವರ ವಚನವನ್ನು ಅಪಭ್ರಂಶವಾಗಿ ಹೇಳಿದ್ದಾರೆ. ಇಂಥವರ ಬಾಯಲ್ಲಿ ಹೇಗೆಲ್ಲಾ ವಚನ ಕೇಳಬೇಕಪ್ಪ ಎಂದು ಬಸವಣ್ಣ ನೊಂದಿರ್ತಾರೆ. ರಾಹುಲ್‌ ರಾಜ್ಯ ಪ್ರವಾಸದ ಕಾರಣಕ್ಕೆ ವಿಧಾನ ಮಂಡಲ ಅಧಿವೇಶನ ಅವಧಿಯನ್ನು ಮೂರು ದಿನ ಮೊಟಕುಗೊಳಿಸಿದ್ದು ಪ್ರಜಾಪ್ರಭುತ್ವ, ವಿಧಾನ ಮಂಡಲಕ್ಕೆ ಮಾಡಿದ ಅಪಮಾನ.
–  ಕೆ.ಎಸ್‌.ಈಶ್ವರಪ್ಪ, ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ

– ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next