Advertisement

ತಂಬಾಕಿನಿಂದ ಪ್ರತಿ ವರ್ಷ 10 ಲಕ್ಷ ಮಂದಿ ಸಾವು

09:27 PM Jun 02, 2019 | Team Udayavani |

ಹುಣಸೂರು: ತಂಬಾಕಿನಿಂದ ತಯಾರಾಗುವ ವಿವಿಧ ಉತ್ಪನ್ನಗಳ ಬಳಕೆಯಿಂದಾಗಿ ದೇಶದಲ್ಲಿ ಪ್ರತಿವರ್ಷ 10ಲಕ್ಷ ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಜಿ.ದೀಪಾ ತಿಳಿಸಿದರು.

Advertisement

ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ನಗರದ ಸತ್ಯಸಾಯಿ ಕೈಗಾರಿಕಾ ತರಬೇತಿ ಸಂಸ್ಥೆ ಆಶ್ರಯದಲ್ಲಿ ವಿಶ್ವ ತಂಬಾಕು ವಿರೋಧ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಅರಿವು ಜಾಥಾದಲ್ಲಿ ಮಾತನಾಡಿದರು.

ತಂಬಾಕು ಸೇವನೆ ಬಿಟ್ಟು ಬಿಡಿ: ತಂಬಾಕು ಸೇವನೆಯಿಂದ ವಿವಿಧ ಕಾಯಿಲೆಗಳಿಗೆ ತುತ್ತಾಗಿ ತಮ್ಮ ಆರೋಗ್ಯ ಮತ್ತು ಸಾಮಾಜಿಕ ಸ್ವಾಸ್ಥ್ಯವನ್ನೂ ಹಾಳು ಮಾಡುತ್ತಿದ್ದಾರೆ. ಇದರಿಂದಾಗಿ ತಂಬಾಕು ಸೇವನೆಯಿಂದ ಎಲ್ಲರೂ ದೂರವಾಗಬೇಕಿದೆ ಎಂದು ಹೇಳಿದರು.

ಎಚ್ಚೆತ್ತುಕೊಳ್ಳಿ: ಆಧುನಿಕ ಜೀವನಶೈಲಿ ಅಳವಡಿಸಿಕೊಳ್ಳುವ ಭರದಲ್ಲಿ ದೇಶದ ಯುವಸಮೂಹ ತಂಬಾಕು ಸೇವನೆಯಂತಹ ಕೆಟ್ಟ ಹವ್ಯಾಸಕ್ಕೆ ಸಿಲುಕುತ್ತಿದ್ದು ಈ ಬಗ್ಗೆ ಎತ್ತರೂ ಎಚ್ಚೆತ್ತುಕೊಳ್ಳಬೇಕೆಂದು ಸೂಚಿಸಿದರು.

ಹೃದಯ ಸಂಬಂಧಿ ಕಾಯಿಲೆ: ತಾಲೂಕು ಆರೋಗ್ಯಾಧಿಕಾರಿ ಡಾ.ಕೀರ್ತಿಕುಮಾರ್‌ ಮಾತನಾಡಿ, ತಂಬಾಕು ಹಾಗೂ ಶ್ವಾಸಕೋಶ ಆರೋಗ್ಯ ಎನ್ನುವುದು ಈ ವರ್ಷದ ಧ್ಯೇಯವಾಕ್ಯ. ನಿರಂತರ ತಂಬಾಕು ಸೇವನೆಯಿಂದ ಪಾರ್ಶ್ವವಾಯು, ಹೃದಯ ಸಂಬಂಧಿ ಕಾಯಿಲೆಗಳು ವ್ಯಕ್ತಿಯನ್ನು ಕಾಡುತ್ತವೆ. ಇತ್ತೀಚಿನ ದಿನಗಳಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲೇ ಹೃದಯಾಘಾತಕ್ಕೆ ಒಳಗಾಗುತ್ತಿರುವ ಉದಾಹರಣೆಗಳು ಹೆಚ್ಚಿದ್ದು, ಅವಸರದ ಜೀವನಶೈಲಿ ಹಾಗೂ ತಂಬಾಕು ಸೇವನೆಯಂತಹ ದುಶ್ಚಟಗಳೇ ಕಾರಣವೆಂದರು.

Advertisement

ಕುಟುಂಬಗಳು ಬೀದಿಪಾಲು: ತಾಲೂಕು ವಕೀಲರ ಸಂಘದ ಅಧ್ಯಕ್ಷ ಜಯರಾಮ್‌, ತಂಬಾಕು ಉತ್ಪನ್ನಗಳು ನಮಗರಿವಿಲ್ಲದಂತೆ ಸಾವನ್ನು ಪಡೆಯುತ್ತವೆ. ಇದರಿಂದ ಸಾವಿರಾರು ಕುಟುಂಬಗಳು ಬೀದಿ ಪಾಲಾಗಿವೆ ಎಂದರು.

ದುಷ್ಪರಿಣಾಮ ಬಗ್ಗೆ ತಿಳಿಯಿರಿ: ವಕೀಲ ವೆಂಕಟೇಶ್‌ ಮಾತನಾಡಿ, ದೇಶದಲ್ಲಿ ತಂಬಾಕು, ಪ್ಲಾಸ್ಟಿಕ್‌ ನಿಷೇಧ ಮಾಡುತ್ತಾರೆ. ಆದರೆ ಎಲ್ಲೆಡೆ ಇದರ ಉತ್ಪನ್ನಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಕೇವಲ ಕಾರ್ಯಕ್ರಮ, ಪ್ರಚಾರದಿಂದ ಏನೂ ಆಗುವುದಿಲ್ಲ. ಬದಲಿಗೆ ಕಟ್ಟು ನಿಟ್ಟಿನ ಕ್ರಮದ ಜೊತೆಗೆ ತಂಬಾಕು ಬೆಳೆಯುವ ಬೆಳೆಗಾರರು ಪರ್ಯಾಯ ಬೆಳೆಯತ್ತ ಚಿತ್ತ ಹರಿಸಬೇಕು. ಮುಖ್ಯವಾಗಿ ವಿದ್ಯಾರ್ಥಿ ದಿಸೆಯಿಂದಲೇ ಇವುಗಳ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಬೇಕೆಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಸತ್ಯಸಾಯಿ ಕಾಲೇಜಿನ ಪ್ರಾಚಾರ್ಯರಾದ ವರಲಕ್ಷಿ ಮಾತನಾಡಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರಾದ ಸಣ್ಣಹನುಮಗೌಡ, ಉಪಾಧ್ಯಕ್ಷ ಲಕ್ಷಿಕಾಂತ್‌, ಕಾರ್ಯದರ್ಶಿ ವೀರೇಶ್‌ರಾವ್‌ ಬೋಬಡೆ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿಗಳಾದ ಮಹದೇವ್‌, ರಾಜೇಶ್ವರಿ, ಶಿಕ್ಷಕರು, ಆಶಾ ಮತ್ತು ಆರೋಗ್ಯ ಸಹಾಯಕಿಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next