ಕುಂಬಳೆ: ಕುಂಬಳೆ ಬಸ್ ನಿಲ್ದಾಣದ ಆಯುಷ್ಯ ಮುಗಿದ ನೆಪದಲ್ಲಿ ಕಟ್ಟಡವನ್ನು ಕೆಡವಲಾಗಿದೆ. ನಿಲ್ದಾಣದ ಕಟ್ಟಡದೊಳಗೆ ವ್ಯಾಪಾರ ಮಾಡುತ್ತಿದ್ದ ಎಲ್ಲರನ್ನೂ ಕಾನೂನಿನ ಬಲ ಪ್ರಯೋಗದ ಮೂಲಕ ತೆರವುಗೊಳಿಸಲಾಗಿದೆ.ಇದಕ್ಕಾಗಿ ಸ್ಥಳೀಯಾಡಳಿತ ರಾಜ್ಯದ ಉಚ್ಚನ್ಯಾಯಾಲಯ ಮೆಟ್ಟಲೇರಬೇಕಾಯಿತು. ಕೊನೆಗೂ ಹಳೆ ನಿಲ್ದಾಣ ಕಟ್ಟಡವನ್ನು ಮುರಿದು ಸಮತಟ್ಟುಗೊಳಿಸಲಾಯಿತು. ಇದೀಗ ಈ ಪ್ರದೇಶದಲ್ಲಿ ಕಟ್ಟಡದ ಅಡಿಪಾಯದ ಕೆಲವು ಕಲ್ಲುಗಳು ಉಳಿದಿವೆ.ಇದರಿಂದಲಾಗಿ ಪ್ರಯಾ ಣಿಕರಿಗೆ ಬಸ್ ಇಳಿದು ಈ ಪ್ರದೇಶದಲ್ಲಿ ಪರಸ್ಪರ ಅತ್ತಿಂದಿತ್ತ ನಡೆದಾಡಲು ಅಸಾಧ್ಯವಾಗಿದೆ.ಕೆಲವು ಬಾರಿ ಈ ಪ್ರದೇಶದ ಸುತ್ತ ವಾಹನಗಳು ತಂಗಿರುವುದನ್ನು ಮತ್ತು ಕೆಲವೊಂದು ಸಂತೆಗಳನ್ನು ಕಾಣಬಹುದಾಗಿದೆ.
ಪ್ರಯಾಣಿಕರ ಗೋಳು : ಹಳೆನಿಲ್ದಾಣದೊಳಗೆ ಸದಾ ತುಂಬಿ ತುಳುಕುತ್ತಿದ್ದ ಪ್ರಯಾಣಿಕರು ಪ್ರಕೃತ ಆಶ್ರಯವಿಲ್ಲದೆ ಪರದಾಡಬೇಕಾಗಿದೆ.ಬಸ್ಸಿಗೆ ಕಾಯುವವರು ಬಿಸಿಲ ಝಳಕ್ಕೆ ಪಕ್ಕದ ಅಂಗಡಿ ಬಾಗಿಲಿನಲ್ಲಿ ನೆರಳಿಗಾಗಿ ಆಶ್ರಯ ಪಡೆಯಬೇಕಾಗಿದೆ. ವೃದ್ಧರು, ಮಕ್ಕಳು ಮಹಿಳೆಯರು ಸಂಕಷ್ಟ ಅನುಭವಿಸಬೇಕಾಗಿದೆ.ಮುಂದಿನ ದಿನದಲ್ಲಿ ಮಳೆಗಾಲದಲ್ಲಿ ಪ್ರಯಾಣಿಕರು ಇನ್ನಷು ಪರದಾಡಬೇಕಾಗಿದೆ.ಮಳೆಗೆ ಒದ್ದೆಯಾಗಿಯೇ ಬಸ್ಸೇರಬೇಕಾಗಿದೆ.
ತಾತ್ಕಾಲಿಕ ಶೆಡ್ ನಿರ್ಮಿಸಲು ಆಗ್ರಹ : ಹೊಸನಿಲ್ದಾಣ ಕಟ್ಟಡ ನಿರ್ಮಿಸಲು ತಾಂತ್ರಿಕ ವಿಳಂಬವಾಗುವುದು ಸಹಜ. ಆ ತನಕ ಇಲ್ಲೊಂದು ತಾತ್ಕಾಲಿಕ ಶೆಡ್ ನಿರ್ಮಿಸಲು ಪ್ರಯಾಣಿಕರ ಆಗ್ರಹವಾಗಿದೆ. ನೂತನ ನಿಲ್ದಾಣ ನಿರ್ಮಾಣದ ತನಕ ಪ್ರಯಾಣಿಕರು ಬಿಸಿಲು ಮಳೆಗೆ ಆಶ್ರಯ ಪಡೆಯಲು ಇದು ಅನಿವಾರ್ಯ ವಾಗಿದ್ದು ಸ್ಥಳೀಯಾಡಳಿತ ಇದಕ್ಕೆ ಮುಂದಾಗಬೇಕೆಂಬುದಾಗಿ ಪ್ರಯಾಣಿಕರ ಒತ್ತಾಯವಾಗಿದೆ. ಮಳೆಗಾಲಕ್ಕೆ ಮುನ್ನ ಸ್ಥಳೀಯಾಡಳಿತ ತಾತ್ಕಾಲಿಕ ಶೆಡ್ ನಿರ್ಮಿಸಲು ಮುಂದಾಗಬೇಕಾಗಿದೆ.
ಅಧ್ಯಕ್ಷರ ಭರವಸೆ : ಹೊಸ ಬಸ್ ನಿಲ್ದಾಣ ಮತ್ತು ವಾಣಿಜ್ಯ ಸಂಕೀರ್ಣ ಕಟ್ಟಡ ನಿರ್ಮಾಣಕ್ಕೆ 5 ಕೋಟಿ ರೂ. ಯೋಜನೆಯನ್ನು ರಾಜ್ಯ ಅರ್ಬನ್ ರೂರಲ್ ಫಿನಾನ್ಸ್ ಡೆವಲಪ್‌ಮೆಂಟ್ ಕಾರ್ಪೊರೇಶನ್‌ಗೆ ಸಮರ್ಪಿಸಲಾಗಿದೆ.ಇದರಲ್ಲಿ 90 ಶತಮಾನ ಸಾಲ ಮತ್ತು 10 ಶತಮಾನ ಗ್ರಾ.ಪಂ.ನ ನಿಧಿ ಬಳಕೆಯಾಗುವುದು. ಯೋಜನೆಗೆ ಸರಕಾರ ಅಂಗೀಕಾರ ನೀಡಬೇಕಾಗಿದೆ. ಬಳಿಕ ಕಾಮಗಾರಿ ಆರಂಭವಾಗಲಿದೆ. ಆ ತನಕ ಪ್ರಯಾಣಿಕರಿಗೆ ತಂಗಲು ತಾತ್ಕಾಲಿಕ ಶೀಟಿನ ಶೆಡ್ ನಿರ್ಮಿಸಲಾಗುವುದೆಂಬುದಾಗಿ ಕುಂಬಳೆ ಗ್ರಾಮ ಪಂಚಾಯತ್ ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್.ಉದಯವಾಣಿಗೆ ತಿಳಿಸಿದ್ದಾರೆ.
— ಅಚ್ಯುತ ಚೇವಾರ್