ಧಾರವಾಡ: ಕಿಲ್ಲರ್ ಕಟ್ಟಡ ದುರಂತ ಬಳಿಕ ಎಚ್ಚೆತ್ತುಕೊಂಡಿರುವ ಮಹಾನಗರ ಪಾಲಿಕೆ ಕಟ್ಟಡ ಪರವಾನಗಿ ಪರಿಶೀಲಿಸುವ ಸರ್ವೇ ಕಾರ್ಯಕ್ಕೆ ಮುಂದಾಗಿದೆ. ಈ ವೇಳೆ ನಿಯಮ ಉಲ್ಲಂಘಿಸಿರುವ ಕಟ್ಟಡಗಳ ಪರವಾನಗಿ ಸಹ ರದ್ದುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಶುಕ್ರವಾರ ಒಂದೇ ದಿನ ನಗರದಲ್ಲಿನ 15ಕ್ಕೂ ಹೆಚ್ಚು ಕಟ್ಟಡಗಳ ಮಾಲೀಕರಿಗೆ ನೋಟಿಸ್ ನೀಡಲಾಗಿದೆ.
ಓಸ್ವಾಲ್ ಟವರ್ ಬಳಿ ಇರುವ ಜ್ಯೂಬ್ಲಿ ಹೈಟ್ಸ್ ಕಟ್ಟಡದ ಕಾಮಗಾರಿ ಇನ್ನೂ ನಿರ್ಮಾಣ ಹಂತದಲ್ಲಿರುವ ಕಾರಣ ಕಟ್ಟಡಕ್ಕೆ ನೀಡಲಾಗಿದ್ದ ಪರವಾನಗಿಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದ್ದು, ಈ ಕುರಿತಂತೆ ನೋಟಿಸ್ ಪ್ರತಿಯನ್ನೂ ಕಟ್ಟಡಕ್ಕೆ ಅಂಟಿಸಲಾಗಿದೆ.
ತಾತ್ಕಾಲಿಕ ತಡೆಯಷ್ಟೆ: ಜ್ಯೂಬ್ಲಿ ಹೈಟ್ಸ್ ಕಟ್ಟಡದ ಮಾಲೀಕರು 4 ಮಹಡಿ ನಿರ್ಮಾಣಕ್ಕೆ ಪಾಲಿಕೆಯಿಂದ ಅನುಮತಿ ಪಡೆದಿದ್ದಾರೆ. ಅದರಲ್ಲಿ 1 ಮತ್ತು 2ನೇ ಮಹಡಿ ಕಾಮಗಾರಿ ಪೂರ್ಣಗೊಂಡಿದ್ದು, ವಾಣಿಜ್ಯ ಮಳಿಗೆಗಳನ್ನು ಆರಂಭಿಸಲು ಫಾರ್ಸಿಲ್ ಸಿಸಿ ನೀಡುವಂತೆ 2018ರ ಅಕ್ಟೋಬರ್‌ನಲ್ಲಿ ಪಾಲಿಕೆ ಕಚೇರಿಗೆ ಅರ್ಜಿ ಸಲ್ಲಿಸಿದ್ದಾರೆ.
ಅದರಂತೆ ಕಟ್ಟಡ ವೀಕ್ಷಣೆ ಮಾಡಿದ್ದ ಪಾಲಿಕೆ ಅಧಿಕಾರಿಗಳು, ಕಟ್ಟಡ ನಿರ್ಮಾಣದ ಕಾರ್ಯಪೂರ್ಣಗೊಳ್ಳದೇ ಮುಕ್ತಾಯ ಪ್ರಮಾಣಪತ್ರ ಪಡೆಯದೆ ನೆಲ ಮಹಡಿಯಲ್ಲಿ ವಾಣಿಜ್ಯ ಉದ್ದೇಶದ ಮಳಿಗೆಗಳನ್ನು ಅನಧಿಕೃತವಾಗಿ ಉಪಯೋಗಿಸಲು ಪ್ರಾರಂಭಿಸಿದ್ದು ಸರಿಯಲ್ಲ. ಅಲ್ಲದೇ 1, 2, 3ನೇ ಅಂತಸ್ತಿನ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಸಾರ್ವಜನಿಕರ ಸುರಕ್ಷತೆ ಕ್ರಮಗಳನ್ನು ವಹಿಸದೇ ಇರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಜೊತೆಗೆ ತಾವು ಕಟ್ಟಡದ ಭದ್ರತೆಯ ಬಗ್ಗೆ ಯಾವುದೇ ಪ್ರಮಾಣಪತ್ರ ಸಲ್ಲಿಸದೆ ಪಾಲಿಕೆ ಷರತ್ತುಗಳನ್ನು ಉಲ್ಲಂಘನೆ ಮಾಡಲಾಗಿದೆ. ಹೀಗಾಗಿ ಪಾಲಿಕೆಯಿಂದ ಮಂಜೂರು ಮಾಡಿದ ಕಟ್ಟಡ ಪರವಾನಗಿಯನ್ನು ತಕ್ಷಣದಿಂದ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿರುತ್ತದೆ ಎಂದು ನೋಟಿಸ್ ನೀಡಿದ್ದಾರೆ.
ಕಟ್ಟಡದ ಮಾಲೀಕರು ಕಟ್ಟಡಕ್ಕೆ ಫಿಟ್‌ನೆಸ್ ಸರ್ಟಿಫಿಕೇಟ್ ಪಡೆದು, ಪೂರ್ಣ ಪ್ರಮಾಣದಲ್ಲಿ ಕಟ್ಟಡ ನಿರ್ಮಾಣ ಆಗುವವರೆಗೆ ಬಾಡಿಗೆ ನೀಡಬಾರದು ಎಂದು ಕಟ್ಟಡದ ಮುಂಭಾಗದಲ್ಲಿ ನೋಟಿಸ್ ಅಂಟಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಪಾಲಿಕೆ ವಲಯ ಕಚೇರಿ 3ರ ಸಹಾಯಕ ಆಯುಕ್ತ ಜಿ.ಎನ್.ಗುತ್ತಿ, ಸರ್ವೇ ಮಾಡಿದಾಗ ಬೆಳಗಾಂವವಾಲೆ ಅವರು ನಿರ್ಮಿಸುತ್ತಿರುವ ಕಟ್ಟಡದಲ್ಲಿ ಬಾಡಿಗೆ ನೀಡಿ ಮೇಲ್ಭಾಗದಲ್ಲಿ ಕಟ್ಟಡ ನಿರ್ಮಾಣ ಕಾರ್ಯ ನಡೆದಿತ್ತು. ಕಟ್ಟಡ ಪೂರ್ಣ ಪ್ರಮಾಣದಲ್ಲಿ ಕಟ್ಟಡ ಮುಗಿಯುವವರೆಗೂ ಕಟ್ಟಡದಲ್ಲಿನ ಮಹಡಿಗಳನ್ನು ಯಾರಿಗೂ ಬಾಡಿಗೆ ನೀಡದಂತೆ ಸೂಚಿಸಲಾಗಿದೆ ಎಂದರು.
ನಾಲ್ಕು ಮಹಡಿ ನಿರ್ಮಾಣಕ್ಕೆ ಪಾಲಿಕೆಯಿಂದ ಅನುಮತಿ ಪಡೆದಿದ್ದೇನೆ. 4.5 ಕೋಟಿ ರೂ. ಬ್ಯಾಂಕ್ ಸಾಲ ಮಾಡಿ ಕಟ್ಟಡ ನಿರ್ಮಿಸುತ್ತಿದ್ದೇನೆ. ಕಟ್ಟಡದಲ್ಲಿನ 1, 2ನೇ ಮಹಡಿ ಕಾಮಗಾರಿ ಪೂರ್ಣಗೊಂಡಿದ್ದು, ಫಾರ್ಸಿಲ್ ಸಿಸಿ ಪಡೆಯಲು 2018ರ ಅಕ್ಟೋಬರ್‌ನಲ್ಲಿ ಪಾಲಿಕೆಗೆ ಅರ್ಜಿ ಸಲ್ಲಿಸಿದ್ದೆನೆ. ಆದರೂ ಅನುಮತಿ ನೀಡದೇ ಅಧಿಕಾರಿಗಳು ಸತಾಯಿಸುತ್ತಿದ್ದಾರೆ.
ನಜೀರಹುಸೇನ್ ಬೆಳಗಾಂವವಾಲೆ,
ನಜೀರಹುಸೇನ್ ಬೆಳಗಾಂವವಾಲೆ,
ಕಟ್ಟಡ ಮಾಲೀಕ
ನಗರದಲ್ಲಿ ಕೆಲ ಕಟ್ಟಡಗಳ ಕಾಮಗಾರಿ ನಡೆಯುತ್ತಿದ್ದು, ಕೆಳಗಿನ ಮಹಡಿಯಲ್ಲಿ ಶಾಪ್ ಗಳನ್ನು ಪಾಲಿಕೆಯ ಅನುಮತಿ ಪಡೆಯದೇ ಪ್ರಾರಂಭಿಸಲಾಗಿದೆ. ಅಂಥ ಮಾಲೀಕರಿಗೆ ಕಾನೂನಿನಡಿ ನೋಟಿಸ್ ನೀಡಲಾಗಿದೆ.
ಜಿ.ಎನ್. ಗುತ್ತಿ,
ಸಹಾಯಕ ಆಯುಕ್ತ, ವಲಯ ಕಚೇರಿ-3