ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬಿಎಂಆರ್‌ಸಿಎಲ್ ಹಾಗೂ ಮೆಟ್ರೋ ನೌಕರರ ಒಕ್ಕೂಟದ ನಡುವೆ ಸಭೆ ನಡೆಸಿ ಸಮಸ್ಯೆ ಇತ್ಯರ್ಥಕ್ಕೆ ಅಗತ್ಯವಿರುವ ಮಾರ್ಗೋಪಾಯಗಳ ಬಗ್ಗೆ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.
ಈ ಕುರಿತ ತಕರಾರು ಅರ್ಜಿಗಳನ್ನು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್ ಬೋಪಣ್ಣ ಅವರಿದ್ದ ಏಕಸದಸ್ಯ ಪೀಠ, ಈ ಮಧ್ಯಂತರ ಆದೇಶ ನೀಡಿದೆ. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಬಿಎಂಆರ್‌ಸಿಎಲ್ ಹಾಗೂ ನೌಕರರ ಒಕ್ಕೂಟದ ನಡುವಣ ಈ ಹಿಂದಿನ ಯಾವ ಸಂಧಾನ ಸಭೆಗಳೂ ಯಶಸ್ವಿಯಾಗಿಲ್ಲ ಎಂಬುದು ಗೊತ್ತಾಗುತ್ತಿದೆ.
ಇದರಿಂದ ಉಂಟಾಗಿರುವ ಬಿಕ್ಕಟ್ಟಿನಿಂದ ಸಾರ್ವಜನಿಕರಿಗೆ ತೊಂದರೆಯಾಗಬಾರದು, ಸಾರ್ವಜನಿಕ ಹಿತಾಸಕ್ತಿ ಅತಿಮುಖ್ಯ.ಈ ದಿಸೆಯಲ್ಲಿ ರಾಜ್ಯಸರ್ಕಾರ ಮಧ್ಯಪ್ರವೇಶಿಸಬೇಕಿತ್ತು ಎಂದು ಅಭಿಪ್ರಾಯಪಟ್ಟಿತು. ಈ ನಿಟ್ಟಿನಲ್ಲಿ ಮುಂದಿನ ಹತ್ತು ದಿನಗಳಲ್ಲಿ ರಾಜ್ಯಸರ್ಕಾರದ ಮುಖ್ಯಕಾರ್ಯದರ್ಶಿ ಒಕ್ಕೂಟದ ಪದಾಧಿಕಾರಿಗಳು ಹಾಗೂ ಬಿಎಂಆರ್‌ಸಿಎಲ್ ಜೊತೆ ಸಭೆ ನಡೆಸಬೇಕು.
ನೌಕರರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಎರಡೂ ಕಡೆಯವರಿಂದ ಸಮಾಲೋಚಿಸಬೇಕು. ಬಳಿಕ ಆರ್ಥಿಕ ಬೇಡಿಕೆಗಳು, ಆರ್ಥಿಕೇತರ ಬೇಡಿಕೆಗಳ ಈಡೇರಿಸುವ ಸಂಬಂಧ ತಜ್ಞರ ಜತೆ ಚರ್ಚಿಸಿ ಸಮಸ್ಯೆ ಇತ್ಯರ್ಥಕ್ಕೆ ಇರುವ ಪರಿಹಾರೋಪಾಯಗಳ ಬಗ್ಗೆ ಪಟ್ಟಿ ತಯಾರಿಸಿ ವರದಿ ಸಲ್ಲಿಸುವಂತೆ ಆದೇಶಿಸಿತು.
ಅಲ್ಲದೆ, ಮುಂದಿನ ವಿಚಾರಣೆಯವರೆಗೂ ಒಕ್ಕೂಟ ಯಾವುದೇ ಮುಷ್ಕರ ಕೈಗೊಳ್ಳಬಾರದು. ಜತೆಗೆ ನೌಕರರ ವಿರುದ್ಧ ಬಿಎಂಆರ್‌ಸಿಎಲ್ ಕೂಡ ಯಾವುದೇ ಕ್ರಮಕ್ಕೆ ಮುಂದಾಗಬಾರದು ಎಂದು ನಿರ್ದೇಶಿಸಿತು. ಈ ಅವಧಿಯಲ್ಲಿ ಒಕ್ಕೂಟ ನೀಡುವ ಮನವಿಗಳನ್ನು ಮಂಡಳಿ ಸ್ವೀಕರಿಸಬೇಕು, ಸಭೆಯಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಗೆ ರಜೆ ನೀಡಬೇಕು ಎಂದೂ ಸೂಚಿಸಿ ವಿಚಾರಣೆಯನ್ನು ಜೂನ್ 19ಕ್ಕೆ ಮುಂದೂಡಿತು.