ಬೆಂಗಳೂರು: ಚುನಾವಣಾ ನೀತಿ ಸಂಹಿತೆಯ ಬಿಸಿ ಪಿಡಿಒ ಹಾಗೂ ಗ್ರಾಪಂ ಕಾರ್ಯದರ್ಶಿಗಳ ನೇಮಕಾತಿಗೂ ತಟ್ಟಿದೆ. ಇನ್ನೇನು ಹುದ್ದೆಗಳನ್ನು ವಹಿಸಿಕೊಂಡು ಸೇವೆಗೆ ಅಣಿಯಾಗಬೇಕು ಅಂದುಕೊಂಡಿದ್ದ ಪಿಡಿಒ ಮತ್ತು ಪಂಚಾಯಿತಿ ಕಾರ್ಯದರ್ಶಿಗಳ ಉಮೇದಿಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ.
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ನೀತಿ ಸಂಹಿತೆ ಮುಕ್ತಾಯಗೊಳ್ಳುವವರೆಗೆ ನೇಮಕಾತಿ ಕ್ರಮ ಕೈಗೊಳ್ಳದಂತೆ ಎಲ್ಲ ಜಿಲ್ಲಾ ಪಂಚಾಯಿತಿಗಳ ಸಿಇಒಗಳಿಗೆ ಗ್ರಾಮೀಣಾಭಿವೃದ್ಧಿ ಇಲಾಖೆ ತುರ್ತು ಸುತ್ತೋಲೆ ರವಾನಿಸಿದ್ದು, ಆಯ್ಕೆಯಾದ 1,624 ಅಭ್ಯರ್ಥಿಗಳು ಹುದ್ದೆ ವಹಿಸಿಕೊಳ್ಳಲು ಇನ್ನೂ ಒಂದು ತಿಂಗಳಿಗೂ ಹೆಚ್ಚು ಕಾಯಬೇಕಾಗಿದೆ.
ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ 815 ಪಿಡಿಒ ಹಾಗೂ 809 ಕಾರ್ಯದರ್ಶಿ (ಗ್ರೇಡ್-1) ಸೇರಿ ನೇಮಕಗೊಂಡಿದ್ದ ಒಟ್ಟು 1,624 ನೌಕರರಿಗೆ ಮಾ.5ರಂದು ಸಚಿವರು ಸೇವಾ ಸಂಕಲ್ಪ ಪ್ರತಿಜ್ಞಾವಿಧಿ ಬೋಧಿಸಿದ್ದರು. ಅದರ ಬೆನ್ನಲ್ಲೇ ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಥಳ ನಿಗದಿಪಡಿಸಿ ನೇಮಕಾತಿ ಆದೇಶ ನೀಡುವಂತೆ ಎಲ್ಲ ಜಿಲ್ಲಾ ಪಂಚಾಯಿತಿಗಳ ಸಿಇಒಗಳಿಗೆ ಆದೇಶ ಸಹ ನೀಡಲಾಗಿತ್ತು. ಹುದ್ದೆ ವಹಿಸಿಕೊಂಡ ಬಳಿಕ ಈ ಪಿಡಿಒ ಮತ್ತು ಕಾರ್ಯದರ್ಶಿಗಳ 2 ತಿಂಗಳ ತರಬೇತಿಗೂ ಕಾರ್ಯಸೂಚಿ ಸಿದಟಛಿವಾಗಿತ್ತು. ಆದರೆ,ನೀತಿ ಸಂಹಿತೆ ಕಾರಣದಿಂದಾಗಿ ಅದೆಲ್ಲವೂ ಈಗ ಮುಂದಕ್ಕೆ ಹೋಗಿದೆ. ಪಿಡಿಒ ಮತ್ತು ಕಾರ್ಯದರ್ಶಿಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ 2017ರ ಜನವರಿಯಲ್ಲಿ ಪರೀಕ್ಷೆ ನಡೆದಿತ್ತು. ಫಲಿತಾಂಶ ಮತ್ತು ಪಟ್ಟಿ ಪ್ರಕಟಕ್ಕೆ ಸಾಕಷ್ಟು ವಿಳಂಬವಾಗಿತ್ತು.
ಪಟ್ಟಿ ಪ್ರಕಟವಾದ ಮೇಲೆ ಹೆಚ್ಚುವರಿ ಅಂಕಗಳ(ಗ್ರೇಸ್ ಮಾರ್ಕ್ಸ್) ವಿಚಾರದಲ್ಲಿ ಗೊಂದಲ ಉಂಟಾಗಿದ್ದರಿಂದ ಪ್ರಕರಣ ಕರ್ನಾಟಕ ಆಡಳಿತ ನ್ಯಾಯಮಂಡಳಿ ಮೆಟ್ಟಿಲೇರಿತು. ಹೀಗಾಗಿ ಸುಮಾರು 4 ತಿಂಗಳು ನೇಮಕಾತಿ ನನೆಗುದಿಗೆ ಬಿತ್ತು. ಪರಿಷ್ಕೃತ ಪಟ್ಟಿ ಪ್ರಕಟಗೊಂಡ ಬಳಿಕವೂ ಸಂದರ್ಶನ ಪ್ರಕ್ರಿಯೆ ವಿಳಂಬವಾಯಿತು. ಕೊನೆಗೆ 2018ರ ಫೆಬ್ರವರಿಯಲ್ಲಿ ಅಂತಿಮ ಪಟ್ಟಿ ಪ್ರಕಟವಾಯಿತು. ಈ ರೀತಿ ಅಧಿಸೂಚನೆ, ಪರೀಕ್ಷೆ, ಫಲಿತಾಂಶ, ಪಟ್ಟಿ ಪ್ರಕಟ ಎಲ್ಲದರಲ್ಲೂ ವಿಳಂಬ ಆಗುತ್ತಲೇ ಬಂತು. ಈಗ ಎಲ್ಲ ಮುಗಿದು ಹುದ್ದೆ ವಹಿಸಿಕೊಳ್ಳಬೇಕು ಎಂದರೆ ಚುನಾವಣಾ ನೀತಿ ಸಂಹಿತೆ ಪರಿಣಾಮ ಮತ್ತೇ ವಿಳಂಬ ಆಗಲಿದೆ.
ವರ್ಷ ಕಾದು ಹುದ್ದೆ ಗಿಟ್ಟಿಸಿಕೊಂಡಾಯಿತು. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸ್ಥಳ ನಿಗದಿಪಡಿಸಿ ನೇಮಕಾತಿ ಆದೇಶ ನೀಡಬೇಕಿತ್ತಷ್ಟೇ. ಪೊಲೀಸ್ ವೆರಿಫಿಕೇಷನ್ ವಿಳಂಬ ಆಗಿದ್ದರಿಂದ ಪ್ರಕ್ರಿಯೆ ನಿಧಾನಗೊಂಡಿತು. ಅಷ್ಟರಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂತು. ಈಗ ಮತ್ತೂಂದು ತಿಂಗಳು ಕಾಯಬೇಕು.
– ನೇಮಕಗೊಂಡಿರುವ ಪಿಡಿಒ
ನೀತಿ ಸಂಹಿತೆ ಜಾರಿಯಲ್ಲಿರುವಾಗ ನೇಮಕಾತಿ ಪ್ರಸ್ತಾವನೆ, ಪ್ರಕ್ರಿಯೆಗಳ ಪರಿಶೀಲನೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದು ಇರುತ್ತದೆ. ಆ ಸಮಿತಿ ತೀರ್ಮಾನ ತೆಗೆದುಕೊಳ್ಳುತ್ತದೆ. ಅದರಂತೆ, ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿಯ ಸಲಹೆಯಂತೆ ನೀತಿ ಸಂಹಿತೆ ಮುಕ್ತಾಯಗೊಳ್ಳುವವರೆಗೆ ಪಿಡಿಒ, ಕಾರ್ಯದರ್ಶಿ ನೇಮಕಾತಿ ಕ್ರಮ ಕೈಗೊಳ್ಳದಂತೆ ಜಿಪಂ ಸಿಇಒಗಳಿಗೆ ಸೂಚನೆ ನೀಡಲಾಗಿದೆ.
– ಎಂ.ಕೆ. ಕೆಂಪೇಗೌಡ, ಪಂಚಾಯತ್‌ರಾಜ್ ನಿರ್ದೇಶಕ
– ರಫೀಕ್ ಆಹ್ಮದ್