ಬೆಳ್ತಂಗಡಿ: ಎರಡು ದಿನ ಸರಕಾರಿ ರಜೆಯಿದ್ದ ಹಿನ್ನೆಲೆಯಲ್ಲಿ ಪ್ರಮುಖ ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಿತ್ತು.
ನಾಡಿನ ಪವಿತ್ರ ಕ್ಷೇತ್ರವಾಗಿರುವ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆಯಲು ಅಪಾರ ಬಹುಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಮುಂಜಾನೆ 5.30 ರಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಅನ್ನಪ್ರಸಾದ ಸ್ವೀಕರಿಸಿದರು.
ಪಾರ್ಕಿಂಗ್‌ಗೂ ಸ್ಥಳಾವಕಾಶವಿಲ್ಲದೆ ಮುಖ್ಯದ್ವಾರದಿಂದ ರಸ್ತೆಯುದ್ದಕ್ಕೂ ವಾಹನಗಳು ಸರತಿ ಸಾಲಿನಲ್ಲಿ ನಿಂತಿದ್ದವು. ಕ್ಷೇತ್ರ, ಅನ್ನಛತ್ರ, ಅಣ್ಣಪ್ಪ ಬೆಟ್ಟ, ವಸ್ತುಸಂಗ್ರಹಾಲಯ, ಕಾರು ಮ್ಯೂಸಿಯಂ ಸಹಿತ ಕ್ಷೇತ್ರದ ಪ್ರೇಕ್ಷಣೀಯ ಸ್ಥಳಗಳಲ್ಲೆಡೆ ಪ್ರವಾಸಿಗರೇ ತುಂಬಿದ್ದರು.
ಕೊಕ್ಕಡ ಶ್ರೀ ಸೌತಡ್ಕ ಮಹಾಗಣಪತಿ ಕ್ಷೇತ್ರ, ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದಲ್ಲೂ ಭಕ್ತರ ಸಂಖ್ಯೆ ಹೆಚ್ಚಿತ್ತು.
ಉಡುಪಿ ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನ ಮತ್ತು ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲೂ ಭಕ್ತರ ಸಂಖ್ಯೆ ಹೆಚ್ಚಿತ್ತು.