ತಿಪಟೂರು: ನಗರ ಠಾಣೆಗೆ ಕೂಗಳತೆ ದೂರದಲ್ಲಿರುವ ನಗರದ ಇತಿಹಾಸ ಪ್ರಸಿದ್ಧ ಶ್ರೀಕಲ್ಲೇಶ್ವರ ಸ್ವಾಮಿ ದೇವಾಲಯದ ಬಾಗಿಲು ಮುರಿದು ಹುಂಡಿ ಹೊತ್ತೂಯ್ದು ಅದರಲ್ಲಿದ್ದ ಹಣ ದೋಚಿರುವ ಘಟನೆ ನಡೆದಿದೆ. ದೇವಸ್ಥಾನದ ಬಾಗಿಲು ಮುರಿದು ಹುಂಡಿಯನ್ನು ಸ್ವಲ್ಪ ದೂರ ಹೊತ್ತೂಯ್ದು ಹಣವನ್ನು ದೋಚಿಕೊಂಡು ಖಾಲಿ ಹುಂಡಿಯನ್ನು ದೇವಾಲಯದ ಪಕ್ಕದಲ್ಲಿ ರುವ ವಿನೋದ ಚಿತ್ರಮಂದಿರದ ಹಿಂಭಾ ಗದಲ್ಲಿ ಎಸೆದು ಪರಾರಿಯಾಗಿದ್ದಾರೆ.
ಕಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿ ಕಳೆದ ಶಿವರಾತ್ರಿ ಹಬ್ಬದಿಂದ ಹುಂಡಿಯನ್ನು ತೆಗೆಯದೇ ಇದ್ದು, ಅಪಾರ ಹಣ ಇರುವುದನ್ನು ಗಮನಿಸಿ ಕಳ್ಳರು ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ. ದೇವಸ್ಥಾನದ ಸುತ್ತಮುತ್ತ ಸಿಸಿ ಟೀವಿಗಳು ಇಲ್ಲದಿರುವುದು ಕಳ್ಳತನಕ್ಕೆ ದಾರಿಯಾಗಿದೆ. ಸ್ಥಳಕ್ಕೆ ನಗರ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿ ಪ್ರಕರಣ ದಾಖಲು ಮಾಡಿದ್ದಾರೆ.
ಇದನ್ನೂ ಓದಿ:- ಸಿಂದಗಿ ಉಪಚುನಾವಣೆ : ಅಂತಿಮ ಕಣದಲ್ಲಿ 6 ಅಭ್ಯರ್ಥಿಗಳು
ಪೊಲೀಸರ ವಿರುದ್ಧ ಆಕ್ರೋಶ: ನಗರದ ಗ್ರಾಮ ದೇವತೆ ಕೆಂಪಮ್ಮ ಹಾಗೂ ಮುಜುರಾಯಿ ಇಲಾಖೆಗೆ ಸೇರಿರುವ ಕಲ್ಲೇಶ್ವರಸ್ವಾಮಿ ದೇವಾಲಯಗಳು ನಗರ ಠಾಣೆಗೆ ಹತ್ತಿರವಿದ್ದರೂ ಅಕ್ಕಪಕ್ಕದಲ್ಲಿ ಸಿಸಿ ಟೀವಿ ಅಳವಡಿಸಿಲ್ಲ. ನಗರದಲ್ಲಿ ಪೊಲೀಸ್ ಬೀಟ್ ಸಹ ಸರಿಯಾಗಿ ನಡೆಯದೆ, ಇರುವುದರಿಂದ ಇತ್ತೀಚೆಗೆ ನಗರ ಹಾಗೂ ಗ್ರಾಮಾಂತರ ಮನೆ, ದೇವಾಲಯಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದೆ.
ಇಲ್ಲಿನ ಪೊಲೀಸ್ ಇಲಾಖೆ ಮಾತ್ರ ನಮಗೂ ಕಳ್ಳತನಕ್ಕೂ ಸಂಬಂಧವಿಲ್ಲವೆಂಬಂತೆ ವರ್ತಿಸುತ್ತಿದ್ದು, ಜನತೆ ಭಯಭೀತಿಯಲ್ಲೇ ಇರುವಂತಾಗಿದೆ. ಅಂಗಡಿಗಳ ಬೀಗ ಒಡೆಯುವುದು, ಬೈಕ್, ಆಟೋಗಳ ಕಳ್ಳತನ ಹೆಚ್ಚಾಗಿದೆ. ಕಳ್ಳರನ್ನು ಹಿಡಿಯುವ ಕೆಲಸ ಮಾತ್ರ ಇಲಾಖೆಯಿಂದ ನಡೆಯದೆ ಇರುವುದೇ ಕಳ್ಳರ ಹಾವಳಿ ಹೆಚ್ಚಾಗಲು ಕಾರಣ ಎಂದು ಸಾರ್ವಜನಿಕರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.