ದೇರೆಬೈಲು: ದೇರೆಬೈಲಿನ ಬಳಿ ಇರುವ ಪುರಾತನ ಶ್ರೀ ದುರ್ಗಾ ಪರಮೇಶ್ವರೀ ದೇಗುಲಕ್ಕೆ ಹೋಗುವ ರಸ್ತೆಯ ಅವ್ಯವಸ್ಥೆಯಿಂದ ಕೂಡಿದ್ದು, ವಾಹನ ಸಂಚಾರಕ್ಕೆ ಇಲ್ಲಿ ಸಂಕಷ್ಟ ಎದುರಾಗಿದೆ.
ರಸ್ತೆ ದುರಸ್ತಿಗಾಗಿ ಹಣ ಬಿಡುಗಡೆ ಯಾಗಿ ಆರು ತಿಂಗಳಾದರೂ ನೀರು ಹರಿದುಹೋಗಲು ಚರಂಡಿಯ ಕೆಲಸದ ಹೊರತುಪಡಿಸಿ ಇಲ್ಲಿ ಬೇರೆ ಕೆಲಸವಾಗಿಲ್ಲ. ರಸ್ತೆಯ ಅಲ್ಲಲ್ಲಿ ಅಗೆಯಲಾಗಿದ್ದು, ಭಾರೀ ಮಳೆಯಿಂದಾಗಿ ಕೆಸರುಮಯವಾಗಿ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ. ಇಷ್ಟು ಮಾತ್ರವಲ್ಲ; ನಡೆದುಕೊಂಡು ಹೋಗಲು ಕೂಡ ಇಲ್ಲಿ ಆಗುತ್ತಿಲ್ಲ ಎಂಬ ದೂರು ಕೇಳಿಬಂದಿದೆ.
ದೇರೆಬೈಲು, ಕೊಂಚಾಡಿ, ಮಾಲೆ ಮಾರ್, ಲ್ಯಾಂಡ್‌ಲಿಂಕ್ಸ್ ಬಡಾವಣೆಯ ನಿವಾಸಿ ಗಳು ಇಲ್ಲಿನ ದೇಗುಲಕ್ಕೆ ಆಗಮಿ ಸಲು ನಡೆದುಕೊಂಡು ಬರ ಬೇಕಾದ ಅನಿವಾರ್ಯ ಸ್ಥಿತಿ ಬಂದೊದಗಿದೆ. ದೇಗುಲ ಪರಿಸರದ ಸುಮಾರು ನೂರು ಮನೆಗಳ ಜನರು ಸಂಚರಿಸಲು ಈ ರಸ್ತೆಯನ್ನು ಅವಲಂಬಿಸಿದ್ದಾರೆ. ಆದರೆ ರಸ್ತೆ ದುರವಸ್ಥೆಯಿಂದಾಗಿ ವಾಹನಗಳಲ್ಲಿ ಹೋಗಲು ಸಾಧ್ಯವಾಗದ ಸ್ಥಿತಿ ಎದುರಾಗಿದೆ.
ದೇಗುಲಕ್ಕೆ ಹೋಗಲು ಮೂರು ನಾಲ್ಕು ದಾರಿಗಳಿವೆ. ಎರಡು ರಸ್ತೆಗಳು ಇಕ್ಕಟ್ಟಾಗಿದ್ದರೆ, ಇನ್ನೊಂದು ಮೂರು ಕಿ.ಮೀ. ಸುತ್ತು ಏರಿಳಿಯುವ ರಸ್ತೆಯಾಗಿದೆ. ಹೀಗಾಗಿ ಎಲ್ಲರೂ ಈ ರಸ್ತೆಯನ್ನು ಅವಲಂಬಿಸಿದ್ದಾರೆ. ಆದರೆ ಈ ರಸ್ತೆಯ ದುಃಸ್ಥಿತಿಯನ್ನು ಸರಿಪಡಿಸುವ ನಿಟ್ಟಿನಲ್ಲಿ ಪಾಲಿಕೆ ಮನಸ್ಸು ಮಾಡುತ್ತಿಲ್ಲ.
ಸಂಚಾರಕ್ಕೆ ಯೋಗ್ಯವನ್ನಾಗಿಸಿ
ರಸ್ತೆಯ ದುಃಸ್ಥಿತಿಯ ಬಗ್ಗೆ ಶಾಸಕ ಡಾ| ಭರತ್ ಶೆಟ್ಟಿ ವೈ., ಕಾರ್ಪೋರೆಟರ್ ರಂಜಿನಿ ಕೋಟ್ಯಾನ್ ಅವರ ಗಮನಕ್ಕೆ ತರಲಾಗಿದ್ದು, ಶೀಘ್ರ ಸಂಚಾರಕ್ಕೆ ಯೋಗ್ಯವನ್ನಾಗಿ ಮಾಡಲು ಕ್ರಮಕೈಗೊಳ್ಳಲು ದೇಗುಲ ಪರಿಸರದ ನಿವಾಸಿಗರು ಆಗ್ರಹಿಸಿದ್ದಾರೆ.