ತಿರುವನಂತಪುರ: ದೇಗುಲದಲ್ಲಿನ ಆಚಾರ, ಪದ್ಧತಿ ತಂತ್ರಿಗಳೇ ನಿರ್ಧರಿಸಬೇಕೇ ಹೊರತು, ಸರ್ಕಾರ ಅಲ್ಲ ಎಂದು ಕೇರಳ ಸಚಿವ ಕೆ.ಬಿ.ಗಣೇಶ್ ಕುಮಾರ್ ಹೇಳಿದ್ದಾರೆ.
ದೇಗುಲ ಪ್ರವೇಶಕ್ಕೆ ಪುರುಷರು ಅಂಗಿ ಕಳಚಿ ಪ್ರವೇಶಿಸಬೇಕು ಎಂಬ ಪದ್ಧತಿ ತೆಗೆದು ಹಾಕಬೇಕೆಂಬ ಸಿಎಂ ವಿಜಯನ್ ಹೇಳಿಕೆಗೆ ಪರೋಕ್ಷವಾಗಿ ಅತೃಪ್ತಿ ವ್ಯಕ್ತಪಡಿಸಿದ್ದಾರೆ.
ನಾಯರ್ ಸರ್ವೀಸ್ ಸೊಸೈಟಿಯ (ಎನ್ಎಸ್ಎಸ್) ನಿರ್ದೇಶಕ ಮಂಡಳಿಯ ಸದಸ್ಯರೂ ಆಗಿರುವ ಸಚಿವರು, ಸರ್ಕಾರಕ್ಕೆ ಕೆಲವು ಬದಲಾವಣೆಗಳು ಅಗತ್ಯವೆಂದು ಭಾವಿಸಿದರೆ, ತಂತ್ರಿಗಳೊಂದಿಗೆ ಸಮಾಲೋಚಿಸಿ ಅಥವಾ ‘ದೇವಪ್ರಶ್ನೆ’ ನಡೆಸಿದ ನಂತರ ಮಾಡಬೇಕು ಎಂದು ಹೇಳಿದರು.
“ವಿವಿಧ ದೇವಾಲಯಗಳು ತಮ್ಮ ಪದ್ಧತಿಗಳು ಮತ್ತು ಆಚರಣೆಗಳನ್ನು ಹೊಂದಿವೆ, ಭಕ್ತರು ಅವುಗಳನ್ನು ಪಾಲಿಸಬೇಕು. ಇತರರು ದೇವಸ್ಥಾನಕ್ಕೆ ಹೋಗಬೇಕಾಗಿಲ್ಲ” ಎಂದು ರಾಜ್ಯ ಸಚಿವ ಸಂಪುಟದಲ್ಲಿ ಕೇರಳ ಕಾಂಗ್ರೆಸ್ (ಬಿ) ಪ್ರತಿನಿಧಿಯಾಗಿರುವ ಗಣೇಶ್ ಕುಮಾರ್ ಹೇಳಿದರು.
ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ಮಾಜಿ ಅಧ್ಯಕ್ಷ ಕೆ.ಮುರಳೀಧರನ್ ಕೂಡ ದೇವಸ್ಥಾನದ ಪದ್ಧತಿಗಳನ್ನು ತಂತ್ರಿಗಳೇ ನಿರ್ಧರಿಸಬೇಕು ಎಂದು ಹೇಳಿದ್ದಾರೆ. ಅನಾದಿ ಕಾಲದ ಸಂಪ್ರದಾಯಗಳನ್ನು ಬದಲಾಯಿಸಲು ರಾಜಕೀಯ ಹಸ್ತಕ್ಷೇಪ ಅಗತ್ಯವಿಲ್ಲ, ದೇವಸ್ಥಾನಗಳ ಸಮಸ್ಯೆಯನ್ನು ಬಿಡಿ,” ಎಂದು ಸುದ್ದಿಗಾರರಿಗೆ ತಿಳಿಸಿದರು.