ಶ್ರೀರಂಗಪಟ್ಟಣ: ಕಳೆದ 10 ವರ್ಷಗಳಿಂದಲೂ ಮುಜರಾಯಿ ಇಲಾಖೆಗೆ ಸೇರಿದ ದೇಗುಲದ ಹುಂಡಿ ಹಣವನ್ನು ಅರ್ಚಕರು, ಗ್ರಾಮದ ಯಜಮಾನರೇ ದುರುಪಯೋಗಪಡಿಸಿಕೊಂಡಿದ್ದು ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದರೇ ಎಂಬ ಅನುಮಾನ ಕಾಡುತ್ತಿದೆ.
ತಾಲೂಕಿನ ಹುರುಳಿಕ್ಯಾತನಹಳ್ಳಿ ಗ್ರಾಮದ ಮುಜರಾಯಿ ಇಲಾಖೆಗೆ ಸೇರಿದ ಶ್ರೀ ಶಂಭುಲಿಂಗೇಶ್ವರ, ಬಂಧುಕಾರಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಅಕ್ರಮವಾಗಿ ಹುಂಡಿ ಎಣಿಕೆ, ಜತೆಗೆ ಹಣವನ್ನು ತಾವೇ ಪೂಜೆಗೆ ಉತ್ಸವಕ್ಕೆಂದು ಹತ್ತಾರು ವರ್ಷಗಳಿಂದ ಖರ್ಚಿನ ಲೆಕ್ಕವಿಲ್ಲದೇ, ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಶ್ರೀ ಶಂಭುಲಿಂಗೇಶ್ವರ ಹಾಗೂ ಬಂಧುಕಾರಲಿಂಗೇಶ್ವರ ಸ್ವಾಮಿ ದೇವಾಲಯ ಪುರಾತನ ದೇವಾಲಯವಾಗಿದ್ದು, ಗ್ರಾಮಲ್ಲಿ ವಿಶೇಷ ಪೂಜೆ ನಡೆದು ಬಂದಿದೆ. ಕಳೆದ 10 ವರ್ಷಗಳಿಂದ ಗ್ರಾಮದ ಅರ್ಚಕರೊಬ್ಬರು ಪೂಜೆ ಮಾಡುತ್ತಿದ್ದಾರೆ. ಗ್ರಾಮದ ಪ್ರಮುಖರು ಉಸ್ತುವಾರಿ ಮಾಡಿಕೊಂಡು ಅರ್ಚಕರ ಹೆಸರಿನಲ್ಲಿರುವ ಖಾತೆಗೆ ಭಕ್ತರು ನೀಡಿದ ಹಣ, ಹುಂಡಿ ಎಣಿಕೆ ಹಣ ಜಮೆ ಮಾಡುತ್ತಿದ್ದಾರೆ. ಆದರೆ, ಲೆಕ್ಕವನ್ನು ಯಾರಿಗೂ ತಿಳಿಸಿಲ್ಲ. ಇನ್ನು ದೇವಾಲಯ ಮುಜರಾಯಿ ಇಲಾಖೆಯ 3 ದರ್ಜೆಗೆ ಸೇರಿದರೂ ಇದರ ಪರಿವಿಲ್ಲದ ಅಧಿಕಾರಿಗಳ ನಿರ್ಲಕ್ಷ್ಯತೆ ಕಂಡು ಬಂದಿದೆ.
ಕಳೆದ ವರ್ಷ ದೇವಾಲಯದ ಹುಂಡಿಯನ್ನೇ ಕಳವು ಮಾಡಲಾಗಿತ್ತು. ಆದರೆ, ಬಹಿರಂಗಪಡಿಸದೆ ಪೊಲೀಸರಿಗೂ ದೂರು ನೀಡದೆ ಮುಚ್ಚಿಟ್ಟರು. ಇದರಿಂದ ಸತ್ಯಾಂಶ ದೂರವಾಗಿದೆ. ದೇಗುಲ ಹಣ ದುರ್ಬಳಕೆ ಮಾಡಿಕೊಂಡಿರುವುದಕ್ಕೆ ಸಂಬಂಧಿಸಿದ ಅಧಿಕಾರಿಗಳು ಶಾಮೀಲಾಗಿದ್ದು ತಹಶೀಲ್ದಾರ್ ಅವರು ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸಬೇಕಿದೆ.
ಬುದ್ಧಿ ಹೇಳಿದ್ದೇವೆ: ದೇಗುಲ ಹುಂಡಿ ಎಣಿಕೆಯಿಂದ ಬಂದಿರುವ ಹಣದ ಬಗ್ಗೆ ಪರಿಶೀಲನೆ ನಡೆದಿದೆ. ಅಕ್ರಮವೆಸಗಿರುವ ಗ್ರಾಮದ ಮುಖಂಡರಿಗೂ ಬುದ್ಧಿವಾದ ಹೇಳಲಾಗಿದೆ. ಅಲ್ಲದೇ, ದೇವಾಲಯದ ಹೆಸರಿನಲ್ಲಿರುವ ಖಾತೆಗೆ ಹಣ ಜಣೆ ಮಾಡುವಂತೆ ಸೂಚಿಸಲಾಗಿದೆ. ಇನ್ನು ಮುಂದೆ ಈ ರೀತಿ ಘಟನೆ ನಡೆಯದಂತೆ ನಮ್ಮ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಗ್ರಾಮಸ್ಥರ ಮುಖಾಂತರ ಸಮಿತಿ ಮಾಡಿ ಪೂಜೆ ನಡೆಯುವಂತೆ ಸೂಚಿಸಲಾಗುವುದು ಎಂದು ತಹಶೀಲ್ದಾರ್ ಶ್ವೇತಾ ಎನ್.ರವೀಂದ್ರ ತಿಳಿಸಿದರು.
ಪರಿಶಿಷ್ಟರಿಗೆ ಪ್ಲಾಸ್ಟಿಕ್ ಕವರ್‌ನಲ್ಲಿ ಪೂಜೆ ಸಾಮಗ್ರಿ ತರಲು ಹೇಳುತ್ತಾರೆ. ಉತ್ಸವ ಬೀದಿಗೆ ಬರಲ್ಲ. 10 ವರ್ಷ ದಿಂದ ದುರ್ಬಳಕೆ ಆದ, ಅರ್ಚಕರ ಖಾತೆ ಹಣ ಪರಿಶೀಲಿಸಿ.
– ಶಿವಕುಮಾರ್, ಗುತ್ತಿಗೆದಾರ ಹುರುಳಿಕ್ಯಾತನಹಳ್ಳಿ
-ಗಂಜಾಂ ಮಂಜು