ಚಾಮರಾಜನಗರ: ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಉತ್ತಮ ನಿದರ್ಶನವಾಗಿರುವ ಜಿಲ್ಲೆಯ ಗಡಿಭಾಗದ ತಮಿಳುನಾಡಿನ ತಾಳವಾಡಿ ಮಾರಮ್ಮ ದೇವಿಯ ಕೊಂಡೋತ್ಸವ ಗುರುವಾರ ವಿಜೃಂಭಣೆಯಿಂದ ಜರುಗಿತು.
ಅಚ್ಚಕನ್ನಡ ಪ್ರದೇಶವಾದ ತಾಳವಾಡಿ ಪ್ರದೇಶ ಭಾಷಾವಾರು ಪ್ರಾಂತ್ಯ ವಿಂಗಡಣೆ ಸಂದರ್ಭದಲ್ಲಿ ತಮಿಳುನಾಡಿಗೆ ಸೇರಿಕೊಂಡಿದೆ. ಅಲ್ಲಿ ವಾಸಿಸುವ ಶೇ.99 ರಷ್ಟು ಮಂದಿ ಕನ್ನಡಿಗರು.
ತಾಳವಾಡಿಯಲ್ಲಿ ನಡೆಯುವ ಮಾರಮ್ಮ ದೇವಿಯ ಕೊಂಡೋತ್ಸವ ಬಹಳ ವಿಶೇಷವಾದುದು. ತಾಳವಾಡಿಯಲ್ಲಿ ಮುಸ್ಲಿಮರ ಪ್ರಾರ್ಥನಾ ಸ್ಥಳವಾದ ಮಸೀದಿ ಹಾಗೂ ಹಿಂದೂಗಳ ದೈವವಾದ ಮಾರಮ್ಮನ ಗುಡಿ ಅಕ್ಕಪಕ್ಕದಲ್ಲೇ ಇವೆ. ಹೀಗಾಗಿ ಮಾರಮ್ಮನ ಕೊಂಡೋತ್ಸವ ಮಸೀದಿಯ ಮುಂದೆಯೇ ನಡೆಯುವುದು ವಿಶೇಷ. ಹೀಗಾಗಿ ಈ ಹಬ್ಬ ಎರಡೂ ಧರ್ಮದ ಜನರ ಸಾಮರಸ್ಯಕ್ಕೆ ಉತ್ತಮ ನಿದರ್ಶನವಾಗಿದೆ. ಕಳೆದ ಎರಡು ದಿನಗಳಿಂದ ವಿಶೇಷ ಪೂಜೆ ಹಾಗೂ ಇತರೆ ಕಾರ್ಯಕ್ರಮಗಳು ನಡೆದಿದ್ದವು. ಗುರುವಾರ ಬೆಳಗ್ಗೆ ಹೊಳೆಯ ದಡದಿಂದ ದೇವಾಲಯದವರೆಗೆ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆ ಉದ್ದಕ್ಕೂ ನಾನಾ ಕಲಾಮೇಳಗಳು ಪಾಲ್ಗೊಂಡು ಮೆರಗು ನೀಡಿದವು. ನಂತರ ಮಾರಮ್ಮ ಗುಡಿ ಹಾಗೂ ಮಸೀದಿ ನಡುವೆ ಹಾಕಿದ್ದ ಕೊಂಡವನ್ನು ಅರ್ಚಕರು ಹಾಯುವ ಉತ್ಸವವನ್ನು ಸಾವಿರಾರು ಜನರು ವೀಕ್ಷಿಸಿದರು.
ಇದು ತಮಿಳುನಾಡಿನ ತಾಳವಾಡಿ ತಾಲೂಕಿನ ಹಲವು ಗ್ರಾಮದವರಿಗೆ ದೊಡ್ಡ ಹಬ್ಬ. ಸುಮಾರು 16 ಕೋಮಿನವರು ಒಗ್ಗೂಡಿ, ತಲಾ ಒಂದೊಂದು ಕಾರ್ಯದ ಹೊಣೆ ಹೊತ್ತು ಹಬ್ಬವನ್ನು ಆಚರಿಸುತ್ತಾರೆ. ವಿವಿಧೆಡೆ ಪಾನಕ, ಮಜ್ಜಿಗೆ ವಿತರಣೆ, ಅನ್ನ ಸಂತರ್ಪಣೆ ನಡೆಯಿತು.
ಶತಮಾನದ ಇತಿಹಾಸ: ತಾಳವಾಡಿಯ ಮಾರಮ್ಮ ದೇವಾಲಯ ಹಾಗೂ ಮಸೀದಿಗೆ ಶತಮಾನಗಳ ಇತಿಹಾಸವಿದೆ. ಟಿಪ್ಪು ಸುಲ್ತಾನ್ ಕಾಲದಲ್ಲೇ ಇಲ್ಲಿ ಮಸೀದಿ ಹಾಗೂ ವೇಣುಗೋಪಾಲಸ್ವಾಮಿ ದೇವಾಲಯ ನಿರ್ಮಾಣಗೊಂಡಿತ್ತು. ಅದೇ ವೇಳೆಯಲ್ಲಿ ಮಸೀದಿ ಪಕ್ಕದಲ್ಲೇ ಮಾರಮ್ಮ ದೇವಾಲಯವೂ ನಿರ್ಮಾಣಗೊಂಡಿದೆ. ಪುಟ್ಟದಾಗಿದ್ದ ಮಾರಮ್ಮ ದೇವಾಲಯವನ್ನು 15 ವರ್ಷಗಳ ಹಿಂದೆ ನವೀಕರಿಸಲಾಗಿದೆ. ಮಾರಿಗುಡಿ ಹಾಗೂ ಮಸೀದಿ ಅಕ್ಕಪಕ್ಕದಲ್ಲೇ ಇದ್ದು, ಅವಳಿ ಕಟ್ಟಡದಂತಿವೆ. ನೂರಾರು ವರ್ಷಗಳಿಂದಲೂ ಎರಡೂ ಧರ್ಮಗಳ ಸಾಮರಸ್ಯಕ್ಕೆ ಧರ್ಮ ಅಡ್ಡಿಯಾಗಿಲ್ಲ.