ಬೆಂಗಳೂರು: ರಾಜ್ಯದಲ್ಲಿ ಬೇಸಿಗೆ ಪ್ರಾರಂಭಕೆಕ ಮುನ್ನವೇ ರಾಜಧಾನಿ ಬೆಂಗಳೂರು ಹಾಗೂ ರಾಜ್ಯಾದ್ಯಂತ ಉಷ್ಣಾಂಶ ಏರಿಕೆಯಾಗುತ್ತಿದೆ. ಕಳೆದ ವರ್ಷಕ್ಕಿಂತ ಕನಿಷ್ಠ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಹೆಚ್ಚಳವಾಗಿದೆ.
ಮಂಗಳವಾರ ಬೆಂಗಳೂರಿನಲ್ಲಿ ಕನಿಷ್ಠ 19.5 ಮತ್ತು ಗರಿಷ್ಠ 31.5 ಉಷ್ಣಾಂಶ ದಾಖಲಾಗಿದೆ. ಇನ್ನು ರಾಜ್ಯದ ಬೀದರ್‌ನಲ್ಲಿ ಕನಿಷ್ಠ 11 ಮತ್ತು ಕಾರವಾರದಲ್ಲಿ ಗರಿಷ್ಠ 34.6 ಉಷ್ಣಾಂಶ ದಾಖಲಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿಕೊಂಡರೆ, ಈ ಬಾರಿ ಕನಿಷ್ಠ ಮೂರು ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಹೆಚ್ಚಳವಾಗಿದೆ ಎಂದು ಹಮಾವಾನ ಇಲಾಖೆ ತಿಳಿಸಿದೆ.
ಕಳೆದ ವರ್ಷ ಫೆ.1ರಂದು ಬೆಂಗಳೂರು ನಗರದಲ್ಲಿ ಕನಿಷ್ಠ 16.5 ಮತ್ತು ಗರಿಷ್ಠ 30.1ರಷ್ಟು ಉಷ್ಣಾಂಶ ದಾಖಲಾಗಿತ್ತು. ರಾಜ್ಯದ ಬೀದರ್‌ನಲ್ಲಿ ಕನಿಷ್ಠ 11ರಷ್ಟು ದಾಖಲಾಗಿತ್ತು. ಆದರೆ, ಈ ವರ್ಷ ಉಷ್ಣಾಂಶ ಹೆಚ್ಚಳವಾಗುತ್ತಿದೆ. ಬೆಂಗಳೂರಿನಲ್ಲಿ ಕನಿಷ್ಠ 19.5 ಇದೆ.
ಚಳಿಗಾಲದಲ್ಲಿ ಉತ್ತರ ಮತ್ತು ಈಶಾನ್ಯದಿಂದ ಜೋರಾಗಿ ಗಾಳಿ ಬೀಸುತ್ತಿರುತ್ತದೆ. ಆದರೆ, ಈಗ ಪೂರ್ವ ದಿಕ್ಕಿನತ್ತ ಗಾಳಿ ಬೀಸುತ್ತಿದೆ. ರಾತ್ರಿ ವೇಳೆ ಮೋಡದಿಂದ ಕೂಡಿದ ವಾತಾವರಣ ಇದೆ. ವಾತಾವರಣದಲ್ಲಿ ರಾತ್ರಿ ವೇಳೆ ಗಾಳಿಯ ವೇಗ ತುಂಬಾ ಕಡಿಮೆ ಇದೆ. ಉಷ್ಣಾಂಶ ಹೆಚ್ಚಳವಾಗಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಕೇಂದ್ರದ ಹವಾಮಾನ ತಜ್ಞ ಸದಾನಂದ ಅಡಿಗ ತಿಳಿಸಿದ್ದಾರೆ.
ಉಷ್ಣಾಂಶ ಹೆಚ್ಚಳವಾದಂತೆ ಮುಂದಿನ ಒಂದೆರಡು ದಿನಗಳಲ್ಲಿ ಕಡಿಮೆಯೂ ಆಗಬಹುದು. ಹಿಂದಿನ ವರ್ಷಗಳಲ್ಲಿ ಫೆಬ್ರವರಿ ಎರಡನೇ ವಾರದಲ್ಲಿಯೂ ಕನಿಷ್ಠ ಉಷ್ಣಾಂಶಕ್ಕೆ ಕುಸಿದಿರುವ ಉದಾಹರಣೆಗಳಿವೆ. 2011ರಲ್ಲಿ ಫೆ.10ರಂದು ಕನಿಷ್ಠ 14, 2015ರಲ್ಲಿ 14.4ಕ್ಕೆ ಕುಸಿದಿತ್ತು. ಆದರೆ, ಫೆಬ್ರವರಿ ಮೂರನೇ ವಾರದ ನಂತರ ಬೇಸಿಗೆ ವಾತಾವರಣ ಆರಂಭವಾಗಲಿದೆ ಎಂದು ಹೇಳುತ್ತಾರೆ.