Advertisement
ಸೋಮವಾರ ಗರಿಷ್ಠ 38 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಮುಂದಿನ ಐದು ದಿನಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ ಗರಿಷ್ಠ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಗುರುವಾರ ಮಾತ್ರ ತಾಪಮಾನ 39 ಡಿಗ್ರಿಸೆಲ್ಸಿಯಸ್‌ಗೆ ಏರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಏಪ್ರಿಲ್ ಮೂರನೇ ವಾರದಿಂದ ಉಷ್ಣಾಂಶ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಬೆಳಿಗ್ಗೆ 11 ಗಂಟೆಯಾಗುತ್ತಲೇ ಸೂರ್ಯ ತನ್ನ ಪ್ರಖರತೆ ಹೆಚ್ಚಿಸಿಕೊಳ್ಳುತ್ತಿದ್ದು, ಮಧ್ಯಾಹ್ನ 12ರಿಂದ ನಾಲ್ಕು ಗಂಟೆ ಅವಧಿಯಲ್ಲಿನ ಓಡಾಟ ಮಹಿಳೆ, ವೃದ್ಧರು, ಮಕ್ಕಳಾದಿಯಾಗಿ ಎಲ್ಲರಿಗೂ ಕಷ್ಟವಾಗುತ್ತಿದೆ. ಒಂದು ಕಡೆ ಬಿಸಿಲಿಗೆ ಕಾದು ಕೆಂಡದಂತಾದ ಕಾಂಕ್ರಿಟ್ ರಸ್ತೆಯ ಉಗಿ, ಇನ್ನೊಂದೆಡೆ ಮೇಲಿನ ಸುಡುಬಿಸಿಲು. ಈ ನಡುವೆ ಕೆಲವರು ಕೊಡೆ, ಟೋಪಿ ಬಳಸಿದರೆ, ಮತ್ತೆ ಕೆಲವರು ಆಟೋರಿಕ್ಷಾ ಪ್ರಯಾಣಕ್ಕೆ ಮೊರೆ ಹೋಗುತ್ತಿದ್ದಾರೆ.
Related Articles
Advertisement
ಚಿಕ್ಕ ಮಕ್ಕಳಿಗೆ ಶಾಲೆ ರಜೆ ನೀಡಲಾಗಿದ್ದು, ಸದಾ ರಸ್ತೆ, ಮೈದಾನದಲ್ಲಿ ಆಟ ಆಡುತ್ತಿದ್ದ ಮಕ್ಕಳಿಗೆ ಈ ಬಿಸಿಲು ಮನೆಯಲ್ಲೇ ಕಟ್ಟಿ ಹಾಕಿದೆ. ಬಿಸಿಲಿನ ಕಾರಣದಿಂದ ಪಾಲಕರು ಮಕ್ಕಳನ್ನು ಹೊರಗೆ ಕಳುಹಿಸದೇ ಇರುವುದರಿಂದ ಮಕ್ಕಳು ಮನೆಯೊಳಗೇ ಸೆಕೆಯ ನಡುವೆಯೇ ಆಟ ಆಡಿಕೊಂಡಿರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕೆಲ ಮಕ್ಕಳು ರಾತ್ರಿ 9-10 ಗಂಟೆಗೆ ಮನೆಯಿಂದ ಹೊರಬಂದು ತಂಪು ವಾತಾವರಣದಲ್ಲಿ ಬೀದಿದೀಪದ ಬೆಳಕಲ್ಲಿ ಆಟವಾಡಿ ಖುಷಿಪಡುತ್ತಿದ್ದಾರೆ. ಬೈಕ್ ಸವಾರರಂತೂ ಸೆಕೆಯಲ್ಲೇ ಹೆಲ್ಮೆಟ್ ಹಾಕಿಕೊಂಡು ಬೆವರೊರೆಸಿಕೊಳ್ಳುವ ದೃಶ್ಯಗಳು ಕಂಡು ಬರುತ್ತಿವೆ.
ಬಿಸಿಲಿನಿಂದ ಜನರಿಗೆ ಆಗುವ ದಾಹ ತೀರಿಸಲು ಹತ್ತು ಹಲವು ಸಂಘ-ಸಂಸ್ಥೆಗಳು ಉಚಿತ ಮಜ್ಜಿಗೆ, ನೀರು ವಿತರಿಸುವ ಕಾರ್ಯಕ್ರಮಗಳನ್ನು ಮಹಾನಗರದ ಹಲವೆಡೆ ಹಮ್ಮಿಕೊಂಡಿವೆ. ಕೆಲವು ಅಂಗಡಿಕಾರರು, ಆಟೋರಿಕ್ಷಾದವರು ಜನರಿಗಾಗಿ ತಮ್ಮಲ್ಲೇ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಂಡು ಜಲಸೇವೆ ಮಾಡುತ್ತಿದ್ದು ಎಲ್ಲ ಪ್ರಶಂಸೆಗೆ ಪಾತ್ರವಾಗಿದೆ.
ಬಿಸಿಲಿನ ಝಳ ಹೆಚ್ಚಾಗಿದ್ದರಿಂದ ಜನರು ಹಣ್ಣಿನ ಮೊರೆ ಹೋಗುತ್ತಿದ್ದಾರೆ. ಆದ್ದರಿಂದ ಹಣ್ಣಿನ ವ್ಯಾಪಾರ ಈ ವಾರದಿಂದ ಜೋರಾಗಿದೆ. ಕಲ್ಲಂಗಡಿ, ಕರಬೂಜ, ತಾಳೆಹಣ್ಣನ್ನು ಜನ ಹೆಚ್ಚು ಖರೀದಿಸುತ್ತಿದ್ದಾರೆ. – ರಫೀಕ್, ಹಣ್ಣಿನ ವ್ಯಾಪಾರಿ
ದಾವಣಗೆರೆಯಲ್ಲಿ ಈ ವರ್ಷ ಈವರೆಗೆ ಒಮ್ಮೆಯೂ ದೊಡ್ಡ ಮಳೆಯಾಗಿಲ್ಲ. ಮಳೆಯಾಗಿದ್ದರೆ ಭೂಮಿ ತಂಪಾಗುತ್ತಿತ್ತು. ಮಳೆಯಾಗದೆ ಇರುವುದರಿಂದ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ಏನು ಮಾಡಿದರೂ ನೆಮ್ಮದಿ ಸಿಗುತ್ತಿಲ್ಲ.- ನಿರಂಜನ ಟಿ., ನಾಗರಿಕ