ಮನಸ್ಸಿನಲ್ಲಿ ಕಥೆ-ಕವನಗಳಂತಹ ಅಭಿರುಚಿಗಳನ್ನು ಬೆಳಸಿ ಕನ್ನಡತನದ ಮನೋವಿಕಾಸ ಬೆಳೆಸಿ ಕನ್ನಡ
ಭಾಷೆಯನ್ನು ಗಟ್ಟಿಗೊಳಿಸಲು ಸಾಧ್ಯವಿದೆ ಎಂದು ಹಿರಿಯ ಕವಿ ನಾಡೋಜ ಡಾ| ಚನ್ನವೀರ ಕಣವಿ
ಹೇಳಿದರು. ಧಾರವಾಡ ಕಸಾಪ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಶಹರ ಘಟಕದ
ವತಿಯಿಂದ ಮಾಳಮಡ್ಡಿಯ ಸರಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆ ನಂ. 11ರಲ್ಲಿ ಹಮ್ಮಿಕೊಂಡಿದ್ದ “ಕಥೆ
ಹೇಳು, ಕವಿತೆ ಕೇಳು’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತು ಈ ಮೂಲಕ ಜಿಲ್ಲೆಯ ಎಲ್ಲ ಶತಮಾನೋತ್ಸವ ಶಾಲೆಗಳಲ್ಲಿ ಇಂತಹ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು
ಮಕ್ಕಳ ಮೂಲಕ ಕನ್ನಡದ ಅಭಿವೃದ್ಧಿ ಮಾಡಬೇಕು ಎಂದರು. ಕವಿ ಎಂ.ಡಿ. ಗೋಗೇರಿ ಮಾತನಾಡಿ, ಮನೆಯಲ್ಲಿ
ಅಜ್ಜ-ಅಜ್ಜಿಯರಿದ್ದರೆ ಕಥೆ-ಕವನಗಳಿಗಿಲ್ಲ ಕೊರತೆ. ಈ ಮೂಲಕ ತಾವೆಲ್ಲ ಅವರಿಂದ ಕಥೆ ಕವನಗಳನ್ನು ಕೇಳಿ
ಕನ್ನಡದ ಸೊಗಡನ್ನು ಅರಿಯಬೇಕು ಹಾಗೂ ಕನ್ನಡ ಸಾಹಿತ್ಯವನ್ನು ಪ್ರೀತಿಸಬೇಕು ಎಂದರು. ಕವಿ ಈಶ್ವರ ಕಮ್ಮಾರ, ಕವಿ ನಿಂಗಣ್ಣ ಕುಂಟಿ ಹಾಗೂ ಮಕ್ಕಳ ಸಾಹಿತಿ ಆನಂದ ಪಾಟೀಲ ಮಾತನಾಡಿದರು. ಪ್ರಧಾನ ಗುರುಮಾತೆ ಮನೋರಮಾ ಸಾಂಬ್ರಾಣಿ ಅಧ್ಯಕ್ಷತೆ ವಹಿಸಿದ್ದರು. ಡಿಡಿಪಿಐ ಎನ್.ಎಚ್. ನಾಗೂರ, ಕಸಾಪ ಜಿಲ್ಲಾಧ್ಯಕ್ಷ ಡಾ| ಲಿಂಗರಾಜ ಅಂಗಡಿ, ಬಿಇಒ ಎಸ್.ಎಮ್. ಹುಡೇದಮನಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಲತಾ ಮುಳ್ಳೂರ, ಕಾರ್ಯದರ್ಶಿ ಆರ್. ಬಿ. ಲಿಂಗದಾಳ, ಕಸಾಪ ಕಾರ್ಯದರ್ಶಿ ಶಿವಾನಂದ ಟವಳಿ, ಚಂದ್ರಶೇಖರ ಕುಂಬಾರ ಇದ್ದರು. ಕಸಾಪ ತಾಲೂಕಾಧ್ಯಕ್ಷ ಎಫ್.ಬಿ.ಕಣವಿ ಪ್ರಾಸ್ತಾವಿಕ ಮಾತನಾಡಿದರು. ವೀಣಾ ಕಲಕೋಟಿ ಪ್ರಾರ್ಥಿಸಿದರು. ಬಸವರಾಜ ವಾಸನದ ವಂದಿಸಿದರು.
Advertisement