ಪಡುಬಿದ್ರಿ: ಉಚ್ಚಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರವು ಭಕ್ತಿ ಕೇಂದ್ರದ ಜತೆಗೆ ಮುಂದೆ ಶಕ್ತಿ ಕೇಂದ್ರವಾಗಿಯೂ ಬೆಳಗಲಿದೆ. ಧಾರ್ಮಿಕ ಮತ್ತು ಸಮು ದಾಯದ ಚಟುವಟಿಕೆಗಳಿಗೆ ಸೀಮಿತ ವಾಗಿದ್ದ ಕ್ಷೇತ್ರವನ್ನು ಶೈಕ್ಷಣಿಕ ಮತ್ತು ಪ್ರವಾಸೋದ್ಯಮ ಕ್ಷೇತ್ರವನ್ನಾಗಿಯೂ ಬೆಳೆಸುವ ಮಹತ್ವಾಕಾಂಕ್ಷೆ ಯನ್ನು ಹೊಂದಿದ್ದೇವೆ. ಅದಕ್ಕೆ ಪೂರಕ ವಾಗಿ ಮೊಗವೀರ ಸಮಾಜದ ಕುಲಗುರು ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪ್ರತಿಮೆ ಸ್ಥಾಪನೆ ಮತ್ತು ಆರ್ಥಿಕವಾಗಿ ಹಿಂದು ಳಿದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿದ್ಯಾರ್ಥಿ ನಿಲಯವನ್ನು ನಿರ್ಮಿಸಲಾಗು ತ್ತಿದೆ ಎಂದು ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆ ಗಾರ ಡಾ| ಜಿ. ಶಂಕರ್ ಹೇಳಿದರು.
ಸಂಘದ ನೇತೃತ್ವದಲ್ಲಿ ಶ್ರೀ ಕ್ಷೇತ್ರದ ಆವರಣದಲ್ಲಿ ಕುಲಗುರು ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪ್ರತಿಮೆ ಸ್ಥಾಪನೆ ಮತ್ತು ವಿದ್ಯಾರ್ಥಿ ನಿಲಯದ ಕಟ್ಟಡ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಉಚ್ಚಿಲ ಶ್ರೀ ಕ್ಷೇತ್ರದಲ್ಲಿ ನಡೆದ ಅಷ್ಠಮಂಗಳ ಪ್ರಶ್ನೆಯಲ್ಲಿ ಕಂಡುಬಂದಂತೆ ಕುಲಗುರುಗಳಾದ ಮಾಧವ ಮಂಗಲ ಪೂಜಾರ್ಯರ ಪ್ರತಿಮೆ ಸ್ಥಾಪನೆ ಬಗ್ಗೆ ಚಿಂತನೆ ನಡೆಸಲಾಗಿದ್ದು ಕುಳಿತ ಭಂಗಿಯಲ್ಲಿ ಕಂಚಿನ ಪ್ರತಿಮೆಯನ್ನು ಸ್ಥಾಪಿಸ ಲಾಗುವುದು. ಈ ಯೋಜನೆಗೆ ಸರಕಾರ ಎರಡೂವರೆ ಕೋಟಿ ರೂ. ಮತ್ತು ವಿದ್ಯಾರ್ಥಿ ನಿಲಯ ಸ್ಥಾಪನೆಗೆ 3 ಕೋಟಿ ರೂ. ಅನುದಾನವನ್ನು ಬಿಡುಗಡೆಗೊಳಿಸಿದೆ. ಮುಂದೆ ಇಲ್ಲಿ ತಾಂತ್ರಿಕ ಶಿಕ್ಷಣ ಕೇಂದ್ರ ಸಹಿತ ವಿವಿಧ ಮಾದರಿ ಯೋಜನೆಗಳನ್ನು ಆರಂಭಿಸಲಾಗುವುದು ಎಂದರು.
ಕ್ಷೇತ್ರದ ತಂತ್ರಿ ವೇ| ಮೂ| ರಾಘವೇಂದ್ರ ತಂತ್ರಿ ಕುಕ್ಕಿಕಟ್ಟೆ ನೇತೃತ್ವದಲ್ಲಿ ಪ್ರಧಾನ ಅರ್ಚಕ ವೇ| ಮೂ| ರಾಘವೇಂದ್ರ ಉಪಾಧ್ಯಾಯರ ಸಹಕಾರದೊಂದಿಗೆ ಶಿಲಾನ್ಯಾಸಪೂರ್ವಕ ಧಾರ್ಮಿಕ ಕಾರ್ಯಕ್ರಮ ನಡೆಯಿತು.
ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಅಮೀನ್, ಮೊಗವೀರ ಮಹಾಜನ ಸಂಘದ ಪ್ರಧಾನ ಕಾರ್ಯದರ್ಶಿ ಸುಧಾಕರ್ ಕುಂದರ್, ಉಪಾಧ್ಯಕ್ಷ ಸುಭಾಶ್ಚಂದ್ರ ಕಾಂಚನ್, ಕೋಶಾಧಿಕಾರಿ ಭರತ್ ಕುಮಾರ್ ಎರ್ಮಾಳ್, ದ.ಕ. ಮೊಗವೀರ ಮಹಿಳಾ ಮಹಾಜನ ಸಂಘದ ಅಧ್ಯಕ್ಷೆ ಉಷಾರಾಣಿ, ಎಂಜಿನಿಯರ್ ಯೋಗೀಶ್ ಚಂದ್ರಾದರ್, ಪ್ರಮುಖರಾದ ವೈ. ಗಂಗಾಧರ ಸುವರ್ಣ, ಮೋಹನ್ ಬೇಂಗ್ರೆ, ಶಂಕರ ಸಾಲ್ಯಾನ್, ಮೋಹನ್ ಬಂಗೇರ ಕಾಪು, ಉಮೇಶ್ ಕರ್ಕೇರ, ಅನಿಲ್ ಕುಮಾರ್, ಶಶಿಕುಮಾರ್ ಬೇಂಗ್ರೆ, ದಿನೇಶ್ ಮೂಳೂರು, ಸಂಜೀವ ಮೆಂಡನ್, ಶಿವ ಕುಮಾರ್, ನಾರಾಯಣ ಕರ್ಕೇರ, ಯೋಗೀಶ್ ಕೋಟ್ಯಾನ್ ಉದ್ಯಾವರ, ಶಶಿಕಾಂತ್ ಪಡುಬಿದ್ರಿ, ದೇಗುಲದ ಪ್ರಬಂಧಕ ಸತೀಶ್ ಅಮೀನ್ ಪಡುಕರೆ ಹಾಗೂ ಸಮಾಜ ಭಾಂದವರು ಉಪಸ್ಥಿತರಿದ್ದರು.