ನಗು ಯಾರಿಗೆ ತಾನೇ ಬಾರದು? ಹಲ್ಲು ಹುಟ್ಟದೆಯೂ ಗಲ್ಲ ಉಬ್ಬಿಸಿಕೊಂಡು ನಾಲಿಗೆ ಹೊರಚಾಚುವ ಮಗುವಿನ ಶುಭ್ರನಗುವಿನಿಂದ ಹಿಡಿದು ಹಲ್ಲಿಲ್ಲದೇ ಬೊಚ್ಚುಬಾಯಿಯಲ್ಲೂ ಮುಖ ಗುಳಿಬಿದ್ದು ನಗುವ ಅಜ್ಜ-ಅಜ್ಜಿಯರೂ ಮುಗುಳುನಗೆಯಾಡುತ್ತಾರೆ. ಅದಕ್ಕೆ ಪ್ರಾಯಭೇದವೆಂಬುದಿಲ್ಲ. ಕೆಲವರು ನಗು ಬಂದು ನಕ್ಕರೆ, ಇನ್ನೂ ಕೆಲವರು ಯಾರೊಂದಿಗೂ ಹಂಚಿಕೊಳ್ಳಲಾಗದ ದುಃಖ ಮರೆಯಲು ನಗುತ್ತಾರೆ.
ಮಗುವಿಗೆ ಆಪ್ಯಾಯವೆನಿಸಿದ್ದನ್ನು ಮಾಡಿದರೆ ಮನಸಾರೆ ನಗುತ್ತದೆ. ಶುಭ್ರನಗು ಎಂದು ಅದನ್ನು ಕರೆಯುತ್ತೇವೆ. ಅದು ಕಲ್ಮಶಹೀನ. ಸ್ವಾಭಾವಿಕವಾಗಿಯೇ ಹೃದಯದಿಂದ ಬಂದುದು. ಹದಿಹರೆಯದಲ್ಲಿ ಹುಡುಗ ಹುಡುಗಿಯೊಂದಿಗೆ ಕಳೆದ ಮಧುರ ಕ್ಷಣಗಳನ್ನು ನೆನೆದು ನಗುತ್ತಾನೆ. ಆತನ ನಗುವಿನಲ್ಲಿ ಅವರಿಬ್ಬರ ನಡುವಿನ ಅಂತರದ ಲಘುವಿರಹವೂ ಜೊತೆಯಾಗಿ ಕಳೆದ ನೆನಪುಗಳ ತುಣುಕು ಯಾತನೆಯೂ ಅಡಗಿರುತ್ತದೆ. ಮಗು ಮೊದಲ ಬಾರಿಗೆ ಬಾಯ್ತುಂಬ, “ಅಮ್ಮ’ ಎಂದು ಕರೆದರೆ ಆಕೆಯ ಮೊಗದಲ್ಲಿ ನಗು ತುಂಬುತ್ತದೆ. ‘ಅಪ್ಪ, ನಿನ್ನ ಮೀಸೆ ನಂಗಿಷ್ಟ’ ಎಂದು ಮೀಸೆ ಎಳೆಯುವ ಮಗಳ ತುಂಟತನ ಕಂಡು ಅಪ್ಪನ ಹೃದಯ ಕಿಲಕಿಲನೆ ನಗುತ್ತದೆ. ದಿನವಿಡೀ ಯಂತ್ರದಂತೆ ದುಡಿವ ಗಂಡ ಮನೆಗೆ ಬಂದಾಗ ತನ್ನಾಕೆ ತನ್ನಿಷ್ಟದ ಅಡುಗೆ ಮಾಡಿಟ್ಟದ್ದನ್ನು ನೋಡಿ ಮನಸಾರೆ ನಗುತ್ತಾನೆ. ಅಪರೂಪಕ್ಕೆ ಗಂಡ ಬೇಗ ಮನೆಸೇರಿ ಹೆಂಡತಿಯ ಕೈಹಿಡಿದು ಮುತ್ತಿಟ್ಟು “ನಿನ್ನ ಜೊತೆ ಸಮಯ ಕಳೆಯಲು ಬೇಗ ಬಂದೆ’ ಎನ್ನುವಾಗ ಆಕೆ ಹೃದಯತುಂಬಿ ನಗುತ್ತಾಳೆ.
ಒಂದು ನಗುವಿಗೆ ಪೇಲವಗೊಂಡಿರುವ ಅಸಂಖ್ಯ ಘನಗಾಂಭೀರ್ಯ ಮುಖಗಳನ್ನು ನಗಿಸಿ ಹಗುರಾಗಿಸುವ ತಾಕತ್ತಿದೆ. ಯಾವ ವಿಚಾರಕ್ಕಾದರೂ ಯಾರ ಮೇಲೋ ರೇಗಾಡುವ ಪ್ರಸಂಗ ಬಂದಾಗ ಆ ಮುಖಚರ್ಯೆಯ ಮೇಲೆ ಕೋಪದ ಭಾವತೀವ್ರತೆ ಎದ್ದು ಕಾಣುತ್ತದೆ. ಹಾಗೆಯೇ ಕಾರಣವಿ¨ªೋ ಕಾರಣವಿಲ್ಲದೆಯೋ ನಸುನಗುವ ಮುದ್ದುಮುಖ ಕಂಡಷ್ಟು ಕಾಣುವ, ಆ ವ್ಯಕ್ತಿಯ ಸಾಂಗತ್ಯದ ಬಯಕೆ ಮೂಡುತ್ತದೆ. ಅಂಥ ತಾಕತ್ತಿರುವುದು ನಗುಮೊಗಕ್ಕೆ ಮಾತ್ರ! ಇನ್ನು ಕೆಲವೊಮ್ಮೆ ಕೆಲವರ ನಗುವಿನ ಶೈಲಿಯೇ ಇತರರಿಗೆ ನಗೆ ತರಿಸುತ್ತದೆ. ಕೆಲವರು ಬಾಯ್ದೆರೆಯದೆಯೂ ಸರಳವಾಗಿ ನಕ್ಕರೆ, ಇನ್ನು ಕೆಲವರು ಬಾಯೊಳಗೆ ಹೆಬ್ಟಾವನ್ನು ಸಲೀಸಾಗಿ ಬಿಡುವಷ್ಟು ಬಾಯಗಲಿಸಿಕೊಂಡು ನಗುತ್ತಾರೆ. ಕೆಲವರದು ಚಿಟ್ಟೆ ನಗೆಯಾದರೆ, ಇನ್ನು ಕೆಲವರದು ಬಕಾಸುರ ನಗು. ಕೆಲವರದು ಗಂಟೆಗಟ್ಟಲೆಯ ನಗುವಾದರೆ ಮತ್ತು ಕೆಲವು ಕ್ಷಣಿಕನಗು. ನಗುವಿನ ಜಾತಿ ಬೇರೆ ಬೇರೆಯಾದರೂ ಅದು ಕೊಡುವ ನಿರಾಳಭಾವ ಮಾತ್ರ ಹಿತದಾಯಕ. ಕಾಣದ ನಾಳೆಗಳ ಚಿಂತೆಯಲ್ಲಿ ಮನುಷ್ಯ ಬಿದ್ದು ಮುಂದಿನ ಆಗುಹೋಗುಗಳ ಬಗ್ಗೆ ವ್ಯರ್ಥಚಿಂತನೆ ಮಾಡುತ್ತಿರುವಾಗಲೇ ಒಂದು ನಗುವಿನ ಅಲೆ ಸಕಲ ಚಿಂತೆ-ದುಗುಡವನ್ನು ಅಳಿಸಿಹಾಕುತ್ತದೆ. ಎತ್ತಲಿಂದಲೋ ಶುರುವಾಗಿ ಇನ್ನೆತ್ತಲೋ ಬದುಕಿನಬಂಡಿ ಸಾಗಿ ಅಂತಿಮವಾಗಿ ಕ್ಷಣದಲ್ಲೇ ಜೀವನಯಾತ್ರೆ ಮುಗಿದುಹೋಯಿತೆನ್ನುವ ಹಂತ ತಲುಪಿದಾಗ ತೊಡೆಯ ಮೇಲೆ ಕೂತ ಮೊಮ್ಮಗ, “ಅಜ್ಜಾ, ನೀನು ನನಗಿಂತ ಚಿಕ್ಕೋನು, ನನಗಾದ್ರೂ ಹಲ್ಲು ಹುಟ್ಟಿದೆ. ನಿನಗೆ ನೋಡು!’ ಎಂಬ ತರಲೆ ಮಾತು ಕೇಳಿದಾಗ ಮತ್ತೆ ಹುಟ್ಟುವುದು ಅದೇ ಮುಗುಳುನಗೆ!
ಅರ್ಜುನ್ ಶೆಣೈ, ಅಮೃತಭಾರತಿ ಕಾಲೇಜು, ಹೆಬ್ರಿ